ಮೂರ್ನಾಡು, ನ. 6 : ಪಾಲೆಮಾಡು ಸ್ಮಶಾನಕ್ಕಾಗಿ ಉಪವಾಸ ಸತ್ಯಾಗ್ರಹ ನಿರತ ಇಬ್ಬರು ಅಸ್ವಸ್ಥಗೊಂಡು ಸೋಮವಾರ ಆಸ್ಪತ್ರೆಗೆ ಸೇರಿದ್ದಾರೆ.

ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜೂರಾಗಿರುವ ಸ್ಮಶಾನ ಜಾಗದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಹಾಕಿರುವ ತಂತಿ ಬೇಲಿಯನ್ನು ತೆರವುಗೊಳಿಸುವಂತೆ ಹಾಗೂ ಸ್ಮಶಾನ ದುರಸ್ತಿ ಪಡಿಸುವಂತೆ ಬಹುಜನ ಕಾರ್ಮಿಕ ಸಂಘದ ವತಿಯಿಂದ ಅ. 28ರಿಂದ ಅಹೋರಾತ್ರಿ ಧರಣಿ ಕೈಗೊಂಡು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರರು ತಾ. 2ರಿಂದ ಉಪವಾಸ ಸತ್ಯಾಗ್ರಹ ಕೈಗೊಂಡರು.

ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಜಿಲ್ಲಾ ದಂಡಾಧಿಕಾರಿ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸುವಲ್ಲಿ ವಿಫಲಗೊಂಡು ಹಿಂತಿರುಗಿದರು. ಉಪವಾಸ ನಿರತ ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಹಾಗೂ ಕಾರ್ಯಕರ್ತ ಮಹೇಶ್ ಸೋಮವಾರ ಬೆಳಿಗ್ಗೆ ತೀವ್ರ ಅಸÀ್ವಸ್ಥಗೊಂಡು ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.

ನಿವಾಸಿಗಳು ಕಳೆದ ಒಂಭತ್ತು ದಿನಗಳಿಂದ ಸ್ಮಶಾನ ಸ್ಥಳದಲ್ಲಿ ಶೆಡ್ ನಿರ್ಮಿಸಿಕೊಂಡು ಪ್ರತಿಭಟನೆ ನಡೆಸುತ್ತಿದ್ದೇವೆ. ಸಮಸ್ಯೆ ಇತ್ಯರ್ಥವಾಗದೆ ಸ್ಥಳದಿಂದ ಕದಲುವದಿಲ್ಲ. ಐದು ದಿನದಿಂದ ಸಂಘದ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಇಂದು ಅಸ್ವಸ್ಥಗೊಂಡು ಇಬ್ಬರು ಆಸ್ಪತ್ರೆ ಸೇರಿದ್ದಾರೆ ಮುಂದೆ ಜಿಲ್ಲಾಡಳಿತ ಇತ್ತ ಕಡೆಗೆ ಗಮನಹರಿಸಿ ಸಮಸ್ಯೆ ಇತ್ಯರ್ಥಗೊಳಿಸದಿದ್ದಲ್ಲಿ ಪ್ರತಿಯೊಬ್ಬರು ಉಪವಾಸ ಕೈಗೊಂಡು ಪ್ರತಿಭಟನೆ ನಡೆಸುವದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.