ಗೋಣಿಕೊಪ್ಪಲು, ನ. 6: ಪೊನ್ನಂಪೇಟೆ ತಾಲ್ಲೂಕು ರಚನೆ ಸಂಬಂಧ ಲೋಕೋಪಯೋಗಿ ಸಚಿವ ಹೆಚ್.ಸಿ ಮಹದೇವಪ್ಪ ಅವರ ಬಳಿ ಚರ್ಚಿಸಿದ್ದು ಅವರಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ ಎಂದು ಅರಣ್ಯ ಅಭಿವೃದ್ದಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ ಹೇಳಿದರು. ಬಾಳೆಲೆ ಕೊಡವ ಸಮಾಜ ಸಭಾಂಗಣದಲ್ಲಿ ತಾಲ್ಲೂಕು ರಚನಾ ಹೋರಾಟ ಸಮಿತಿ ವತಿಯಿಂದ ನಡೆದ ಹೋಬಳಿ ಸಭೆಯಲ್ಲಿ ಈ ಬಗ್ಗೆ ಮಾತನಾಡಿ, ಇನ್ನಷ್ಟು ಸಭೆಗಳನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಕಾರ್ಯವಾಗಬೇಕಿದೆ ಎಂದರು.
ತಾಲೂಕು ರಚನಾ ಹೋರಾಟ ಸಮಿತಿ ಅಧ್ಯಕ್ಷ ಚೆಪ್ಪುಡೀರ ಅರುಣ್ ಮಾಚಯ್ಯ ಮಾತನಾಡಿ, ಪೊನ್ನಂಪೇಟೆ ತಾಲೂಕು ಘೋಷಿಸುವವರೆಗೂ ನಿರಂತರ ಹೋರಾಟ ಮಾಡಲಾಗುವದು ಎಂದರು.
ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಮಾತನಾಡಿ, ತಾ. 14 ರಂದು ಹೋರಾಟಕ್ಕೆ ಬೆಂಬಲ ಸೂಚಿಸಿ ಬಾಳೆಲೆ ಕೊಡವ ಸಮಾಜದ ವತಿಯಿಂದ ವಾಹನಜಾಥಾ ಹಾಗೂ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದರು.
ಸಭೆಯಲ್ಲಿ ಹಿರಿಯ ವಕೀಲ ಎ.ಟಿ. ಭೀಮಯ್ಯ, ಸಮಿತಿ ಸಂಚಾಲಕ ಮಾಚಿಮಾಡ ರವೀಂದ್ರ, ಜಿಲ್ಲಾ ಬಿಜೆಪಿ ಮಹಿಳಾ ಘಟಕ ಅಧ್ಯಕ್ಷೆ ಯಮುನಾ ಚಂಗಪ್ಪ, ಜಿ.ಪಂ. ಸದಸ್ಯ ಬಾನಂಡ ಪೃಥ್ಯು, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಆರ್ಎಂಸಿ ಸದಸ್ಯ ವಿನು ಚಂಗಪ್ಪ, ಜಿಆರ್ಸಿ ಬ್ಯಾಂಕ್ ವ್ಯವಸ್ಥಾಪಕ ಕೃಷ್ಣ ಗಣಪತಿ, ಆರೇಂಜ್ ಸೊಸೈಟಿ ನಿರ್ದೇಶಕ ಸಂಪನ್ ಸೋಮಣ್ಣ, ಬಾಳೆಲೆ ಗ್ರಾ.ಪಂ ಅಧ್ಯಕ್ಷೆ ಕುಸುಮಾ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಅನಿತಾ ಪಾಲ್ಗೊಂಡಿದ್ದರು.