ಮಡಿಕೇರಿ, ನ. 5: ಮಡಿಕೇರಿ ನಗರಸಭೆ ವ್ಯಾಪ್ತಿಯೊಳಗೆ ನೀರು ಸರಬರಾಜು ವಿಭಾಗದಲ್ಲಿ ದುರಸ್ಥಿ ಇತ್ಯಾದಿ ಸಣ್ಣಪುಟ್ಟ ಕೆಲಸಗಳ ನಿರ್ವಹಣೆಗೆ ವಾರ್ಷಿಕ ರೂ. 12 ಲಕ್ಷಕ್ಕೂ ಅಧಿಕ ಮೊತ್ತಕ್ಕೆ ಹಾಗೂ ನೀರು ಸೋರಿಕೆ ಇತ್ಯಾದಿ ವಾರ್ಷಿಕ ನಿರ್ವಹಿಸಲು ಹೊರಗುತ್ತಿಗೆಯಲ್ಲಿ ರೂ. 28 ಲಕ್ಷ ಮೊತ್ತಕ್ಕೆ ಇತ್ತೀಚೆಗೆ ನಡೆದ ಸಭೆಯಲ್ಲಿ ಮಂಡಿಸಲಾದ ಟೆಂಡರ್ ಪ್ರಸ್ತಾವನೆಗೆ ಆಕ್ಷೇಪ ವ್ಯಕ್ತಗೊಂಡಿದೆ.ಈ ಬಗ್ಗೆ ಬಿಜೆಪಿ ಸದಸ್ಯರ ಆಕ್ಷೇಪ ನಡುವೆ ಆಡಳಿತ ಸದಸ್ಯರು ಧ್ವನಿಗೂಡಿಸಿ ಮರು ಟೆಂಡರ್‍ಗೆ ಆಗ್ರಹಿಸಿದ್ದಾರೆ. ಸಭೆಯಲ್ಲಿ ಮಂಡಿಸಿದ ಪ್ರಸ್ತಾವನೆ ಹೀಗಿದ್ದು, ಸಾಕಷ್ಟು ಅಚ್ಚರಿ ಯೊಂದಿಗೆ ನಗರಸಭೆಯ ಕಾರ್ಯ ವೈಖರಿಗೆ ಕನ್ನಡಿ ಹಿಡಿದಂತಿದೆ.

ಒಂದು ಪ್ರಸ್ತಾವನೆಯಲ್ಲಿ ಮಡಿಕೇರಿ ನಗರಸಭೆ ವ್ಯಾಪ್ತಿಯೊಳಗೆ ನೀರು ಸರಬರಾಜು ವಿಭಾಗದಲ್ಲಿ ವಿವಿಧ ಸಾಮಥ್ರ್ಯದ ಪಂಪ್‍ಸೆಟ್ ಪ್ಯಾನಲ್ ಬೋರ್ಡ್ ಮತ್ತು ಕೈ ಪಂಪುಗಳ ದುರಸ್ತಿಗೊಳಿಸಲು ಎ.ಎಂ. ಸಮೀವುಲ್ಲಾ ಎಂಬವರು ಅತೀ ಕಡಿಮೆ ದರದಲ್ಲಿ ರೂ. ಹನ್ನೆರಡು ಲಕ್ಷದ ಹದಿನಾಲ್ಕು ಸಾವಿರದ ನೂರ ಅರವತ್ತಾರು ಮೊತ್ತಕ್ಕೆ ನಮೂದಿಸಿರುವದಾಗಿ ಶಿಫಾರಸು ಮಾಡಲಾಗಿದೆ.

ಇನ್ನೊಂದು ಪ್ರಸ್ತಾವನೆಯಲ್ಲಿ ನಗರಸಭೆ ವ್ಯಾಪ್ತಿಯೊಳಗೆ ನೀರು ಸರಬರಾಜು ವ್ಯವಸ್ಥೆಯಲ್ಲಿ ಸೋರಿಕೆ ಇತ್ಯಾದಿ ತಡೆಯುವ ನಿರ್ವಹಣೆ ಸಲುವಾಗಿ ಪ್ರತ್ಯೇಕ ಟೆಂಡರ್‍ನೊಂದಿಗೆ ವೀರಾಜಪೇಟೆಯ ಶ್ರೀನಿಧಿ ಎಂಟರ್‍ಪ್ರೈಸಸ್‍ಗೆ ರೂ. 27,97,917ಕ್ಕೆ ನಿರ್ವಹಿಸುವಂತೆ ಶಿಫಾರಸ್ಸು ಮಾಡಿರುವದು ಬೆಳಕಿಗೆ ಬಂದಿದೆ.

ಮೇಲ್ನೋಟಕ್ಕೆ ಒಂದೇ ವ್ಯವಸ್ಥೆಯಡಿ ನಿರ್ವಹಿಸಲ್ಪಡುವ ಈ ಸಣ್ಣಪುಟ್ಟ ಕೆಲಸವನ್ನು ಪ್ರತ್ಯೇಕ ಎರಡು ಟೆಂಡರ್‍ನೊಂದಿಗೆ ಒಟ್ಟು ರೂ. 40,12,083 ಮೊತ್ತದಲ್ಲಿ ವಾರ್ಷಿಕ ನಿರ್ವಹಣೆಗೆ ಅವಕಾಶ ಕಲ್ಪಿಸಿರುವದು ಹಲವಷ್ಟು ಗುಮಾನಿಗೂ ಕಾರಣವಾಗಿದೆ.

ಈ ಬಗ್ಗೆ ಸಭೆಯಲ್ಲಿ ಅನುಮೋದನೆಗೆ ಕೋರಲಾಗಿ, ಸದಸ್ಯರು ಮೇಲಿನ ಕೆಲಸ ನಿರ್ವಹಣೆಗೆ ಅಷ್ಟೊಂದು ಹಣ ವ್ಯಯದ ಅವಶ್ಯಕತೆ ಇಲ್ಲವೆಂದೂ, ತೀರಾ ಅಗತ್ಯವಿದ್ದರೆ ಮರು ಟೆಂಡರ್ ಕರೆಯುವಂತೆ ನಿರ್ಣಯಿಸಲು ಆಯುಕ್ತರಿಗೆ ಆಗ್ರಹಿಸಿದ್ದಾರೆ.

ರೂ. 30 ಲಕ್ಷ ವೇತನ ಬಾಕಿ : ಸಾಮಾನ್ಯ ಸಭೆಯಲ್ಲಿ ಮಂಡಿಸಿರುವ ಮತ್ತೊಂದು ಬೇಡಿಕೆಯಲ್ಲಿ ನಗರಸಭೆಯ ಆರು ಮಂದಿ ದಿನಗೂಲಿಗಳು ಪ್ರಸಕ್ತ ಸಕ್ರಮಗೊಂಡಿರುವ ಮೇರೆಗೆ ಈ ನೌಕರರ ವೇತನ ವ್ಯತ್ಯಾಸ ಮೊಬಲಗು ರೂ. 30 ಲಕ್ಷದ ತೊಂಭತ್ತೊಂಭತ್ತು ಸಾವಿರದ ಎಪ್ಪತ್ತನಾಲ್ಕು ಮೊತ್ತ ಪಾವತಿಸಲು ಮಂಜೂರಾತಿ ಕೋರಲಾಗಿದೆ.

ಈ ರೀತಿ ಪ್ರಸ್ತಾಪಗೊಂಡಿರುವ ನೌಕರರಲ್ಲಿ ಜಯಮ್ಮ ಎಂಬಾಕೆಗೆ ರೂ. 7,42,250 ವೇತನ, ಲಕ್ಷ್ಮೀ ರೂ. 5,45,308 ಮೊತ್ತ, ಸತೀಶ್ ರೂ. 3,97,875, ಬಿ.ಎಂ. ಬಾಬು ರೈ ರೂ. 5,23,198 ಹಾಗೂ ದಿವಂಗತ ಹನುಮಿಗೆ ರೂ. 5,04,415 ಮೊತ್ತ ಪಾವತಿಸಬೇಕಾಗಿದೆ ಎಂದು ಉಲ್ಲೇಖಿಸಲಾಗಿದೆ.

ಅಲ್ಲದೆ ನಗರದ ಕುಮಾರ್ ವಿಲಾಸ್ ಹೊಟೇಲ್

(ಮೊದಲ ಪುಟದಿಂದ) ಪಕ್ಕದ ಸೇತುವೆ ಅಗಲೀಕರಣಕ್ಕೆ ರೂ. 3 ಲಕ್ಷ ಬಿಡುಗಡೆಗೆ ಕೋರಲಾಗಿದೆ. ಇನ್ನು ಅಂಚೆ ಕಚೇರಿ ಮುಂಭಾಗದಲ್ಲಿ ಹಾಪ್‍ಕಾಮ್ಸ್‍ಗೆ ಮಂಜೂರಾಗಿರುವ 36 ಸೆಂಟ್ ನಿವೇಶನವನ್ನು ಅಥವಾ ಬಾಲಭವನ ಜಾಗವನ್ನು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮಂಜೂರಾತಿ ಬೇಡಿಕೆ ಇಟ್ಟಿದ್ದು, ತಪ್ಪಿದರೆ ಕಾವೇರಿ ಕಲಾಕ್ಷೇತ್ರದ ಬಳಿ ಉದ್ಯಾನವನ್ನೇ ಈ ಉದ್ದೇಶಕ್ಕೆ ಬಳಸಿಕೊಳ್ಳುವ ಪ್ರಸ್ತಾವನೆ ಮಂಡಿಸಲಾಯಿತು.

ಈ ವೇಳೆ ಹಾಪ್‍ಕಾಮ್ಸ್ ಜಾಗಕ್ಕೆ ತೀವ್ರ ಆಕ್ಷೇಪದೊಂದಿಗೆ ಹಳೆಯ ಮೆಗ್ಡೋಲ್ ಕಟ್ಟಡ ಬಳಿ ಖಾಲಿ ನಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲು ಸಭೆಯಲ್ಲಿ ಸಲಹೆ ಕೇಳಿಬಂತು.