ಸೋಮವಾರಪೇಟೆ, ನ.6: 15ನೇ ಶತಮಾನದಲ್ಲೇ ಸಾಮಾಜಿಕ ಅಸಮಾನತೆಗಳ ವಿರುದ್ಧ ಜಾಗೃತಿ ಮೂಡಿಸಿದ ದಾರ್ಶನಿಕರ ತತ್ವಾದರ್ಶಗಳು ಪಾಲನೆಯಾಗದ ಪರಿಣಾಮ ಇಂದಿಗೂ ಸಮಾಜದಲ್ಲಿ ಅಸಮಾನತೆ ಕಾಣುವಂತಾಗಿದೆ. ಇದು ದೇಶದ ದುರಂತವಾಗಿದ್ದು, ಸಮಾನತೆಯ ಸಮಾಜ ನಿರ್ಮಾಣ ವಾಗಬೇಕು ಎಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.

ತಾಲೂಕು ಆಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ತಾಲೂಕು ಪಂಚಾಯತ್, ಪಟ್ಟಣ ಪಂಚಾಯತ್ ಗಳ ಆಶ್ರಯದಲ್ಲಿ ಇಲ್ಲಿನ ಸ್ತ್ರೀಶಕ್ತಿ ಭವನದಲ್ಲಿ ಆಯೋಜಿಸಲಾಗಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ಪಿಡುಗುಗಳ ವಿರುದ್ಧ ಸಿಡಿದೆದ್ದ ಪ್ರಥಮ ದಾಸ ಶ್ರೇಷ್ಠ ಭಕ್ತ ಕನಕದಾಸರು ಎಂದು ಬಣ್ಣಿಸಿದ ಅಭಿಮನ್ಯುಕುಮಾರ್, ಸರಳ ಭಾಷೆಯಲ್ಲಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಯತ್ನ ನಡೆಸಿದ ಇವರು ಯಾವೊಂದು ಸಮುದಾಯಕ್ಕೆ ಮೀಸಲಾಗದೇ ಸಮಸ್ತ ಮನುಕುಲದ ಸ್ವತ್ತಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಮಾತನಾಡಿ, ಭಕ್ತಿ ಮಾರ್ಗ ದಲ್ಲಿ ಸಮಾಜದ ಕೊಳಕುಗಳನ್ನು ಕಳೆದ ಕನಕದಾಸರ ಆದರ್ಶ ಪಾಲನೆಯಾಗಬೇಕು ಎಂದರು.

ತಾ.ಪಂ. ಸದಸ್ಯೆ ತಂಗಮ್ಮ ಮಾತನಾಡಿ, ದಾರ್ಶನಿಕರ ಜೀವನ ಚರಿತ್ರೆಗಳು ಸಮಾಜಕ್ಕೆ ದಾರಿದೀಪ ವಾಗಿವೆ ಎಂದರು. ಸಂಗೊಳ್ಳಿ ರಾಯಣ್ಣ ಸಂಘದ ಜಿಲ್ಲಾಧ್ಯಕ್ಷ ವಸಂತ್ ಮಾತನಾಡಿ, ಸಮಾಜದಲ್ಲಿ ಎಲ್ಲರ ನಡುವೆ ಸಮನ್ವಯ ಸಾಧಿಸಲು ಶ್ರಮಿಸಿದ ಮಹಾನ್ ಸುಧಾರಕ ಎಂದು ಬಣ್ಣಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಗಣೇಶ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ತಾಲೂಕು ತಹಶೀಲ್ದಾರ್ ಮಹೇಶ್, ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ಬಿಸಿಎಂ ವಿಸ್ತರಣಾಧಿಕಾರಿ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಅವರುಗಳು ಉಪಸ್ಥಿತರಿದ್ದರು.

ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಸತಿ ಗೃಹದ ವಿದ್ಯಾರ್ಥಿಗಳು ಪ್ರಾರ್ಥಿಸಿ, ಕನಕದಾಸರ ಕೀರ್ತನೆಗಳನ್ನು ಹಾಡಿದರು. ವಿವಿಧ ಇಲಾಖಾಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.