ಸೋಮವಾರಪೇಟೆ, ನ. 6: ಭ್ರಷ್ಟಾಚಾರ ಹಾಗೂ ಹಗರಣಗಳು ದೇಶದ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಬೀರಲಿದ್ದು, ಪ್ರತಿಯೊಬ್ಬರೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಪಣ ತೊಡಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಪರಶುರಾಮ್ ಎಫ್. ದೊಡ್ಡಮನಿ ಹೇಳಿದರು.

ಇಲ್ಲಿನ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬರೂ ತಮ್ಮಲ್ಲಿನ ಬದ್ಧತೆಯನ್ನು ಪ್ರದರ್ಶಿಸುತ್ತಾ, ಅಡ್ಡದಾರಿಯಲ್ಲಿ ಸಾಗದೆ, ರಾಜಮಾರ್ಗದಲ್ಲಿ ಸಾಗುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕೆಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಿವಿಲ್ ನ್ಯಾಯಾಧೀಶ ಶ್ಯಾಮ್‍ಪ್ರಕಾಶ್ ಮಾತನಾಡಿ, ಲಂಚ ಪಡೆಯುವದು ಎಷ್ಟು ಅಪರಾಧವೋ, ಲಂಚ ನೀಡುವದೂ ಕೂಡ ಅಪರಾಧ ವಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಯಾಗದೆ ದೇಶ ಉದ್ದಾರವಾಗದು. ಈ ನಿಟ್ಟಿನಲ್ಲಿ ಲಂಚ ಪಡೆಯುವ ಹಾಗೂ ನೀಡುವಂತಹ ಪ್ರಕರಣಗಳು ಕಂಡುಬಂದಲ್ಲಿ ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳೊಂದಿಗೆ ಅಂಚೆ ಮೂಲಕ, ಖುದ್ದಾಗಿ ಅಥವಾ ಇಮೈಲ್ ಮೂಲಕ ಭ್ರಷ್ಟಾಚಾರ ನಿಗ್ರಹ ದಳದ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರ ಸಂಘದ ಉಪಾಧ್ಯಕ್ಷ ಕಾಟ್ನಮನೆ ವಿಠಲ್ ಗೌಡ ಮಾತನಾಡಿ, ಭ್ರಷ್ಟಾಚಾರವನ್ನು ಬೇರು ಸಹಿತ ಕೀಳುವ ಪ್ರಯತ್ನ ನಮ್ಮೆಲ್ಲ ರಿಂದ ಆಗಬೇಕಾಗಿದೆ. ಇಂದು ಮಾಹಿತಿ ಹಕ್ಕು ಕಾಯಿದೆ ಮೂಲಕ ಭ್ರಷ್ಟಾಚಾರ ತಡೆ ಕಾನೂನು ವರದಾನವಾಗಲಿದೆ ಎಂದರು. ವಕೀಲೆ ಮಾನಸ ಕಾರ್ಯಕ್ರಮ ನಿರೂಪಿಸಿದರು. ವಕೀಲರ ಸಂಘದ ಕಾರ್ಯದರ್ಶಿ ಶಂಕರ್ ಉಪಸ್ಥಿತರಿದ್ದರು.