ಸಿದ್ದಾಪುರ, ನ. 6: ಮಸೀದಿಯ ಜಾಗದ ವಿಚಾರದಲ್ಲಿ ಹಾಗೂ ಪ್ರಾರ್ಥನೆಯ ಸಂಬಂಧ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಈರ್ವರು ಗಾಯ ಗೊಂಡಿರುವ ಘಟನೆ ಕೊಂಡಂಗೇರಿ ಯಲ್ಲಿ ನಡೆದಿದೆ. ಕೊಂಡಂಗೇರಿ ಗ್ರಾಮದ ಸಿ.ಬಿ. ಮಹಮ್ಮದ್ ಗೋಪುರವೊಂದನ್ನು ನಿರ್ಮಾಣ ಮಾಡಿ ಅಲ್ಲಿ ಪ್ರತ್ಯೇಕವಾಗಿ ಪ್ರಾರ್ಥನೆ ಮಾಡುತ್ತಿದ್ದರು. ಇದಕ್ಕೆ ಕೆಲವು ಗ್ರಾಮಸ್ಥರು ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದರು. ಭಾನುವಾರ ಸಂಜೆ ಮಹಮ್ಮದ್ ತಮ್ಮ ತಂದೆಯ ಹೆಸರಿನಲ್ಲಿ ಪ್ರಾರ್ಥನೆ ಮಾಡಲು ಸಂಬಂಧಿಕರೊಂದಿಗೆ ಸಿದ್ದತೆ ನಡೆಸುವ ಸಂದರ್ಭ ಅಲ್ಲಿಗೆ ತೆರಳಿದ ಕೊಂಡಂಗೇರಿ ಗ್ರಾಮದ ಕೆಲವರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಬಳಿಕ ಮಾರಾಮಾರಿ ನಡೆದು ಕಲ್ಲು ತೂರಾಟ ನಡೆದಿದೆ. ಕಲ್ಲು ತೂರಾಟ ಸಂದರ್ಭ ಇಸ್ಮಾಯಿಲ್ ಎಂಬಾತನ ತಲೆಗೆ ಗಾಯವಾಗಿದ್ದು ಉಮ್ಮರ್ ಎಂಬಾತನಿಗೆ ಎದೆಗೆ ಗಾಯಗೊಂಡಿದೆ. ಘರ್ಷಣೆಯಲ್ಲಿ ಮಹಮ್ಮದ್ ಎಂಬವರ ಸಿ.ಸಿ. ಕ್ಯಾಮೆರವನ್ನು ಹಾನಿಗೊಳಿಸಲಾಗಿದೆ. ಉಭಯ ಕಡೆಗಳ ಗುಂಪು ಘರ್ಷಣೆಯು ವಿಕೋಪಕ್ಕೆ ತೆರಳುವ ಮಾಹಿತಿ ಪಡೆದ ಸಿದ್ದಾಪುರ ಪೋಲಿಸರು ಸ್ಥಳಕ್ಕೆ ತೆರಳಿ ಮದ್ಯ ಪ್ರವೇಶಿಸಿ ಘರ್ಷಣೆಯಲ್ಲಿ ತೊಡಗಿದ್ದವರನ್ನು ಲಘುಲಾಠಿ ಪ್ರಹಾರ ಮಾಡಿ ಚದುರಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆಂದು ತಿಳಿದು ಬಂದಿದೆ. ಸಿ.ಬಿ. ಮಹಮ್ಮದ್ ಕೊಂಡಂಗೇರಿಯಲ್ಲಿ ಜ್ಯೋತಿಷ್ಯ ಕೆಲಸ ನಿರ್ವಹಿಸುತ್ತಿದ್ದರು ಎಂದು ಗ್ರಾಮಸ್ಥರು ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನಸ್ತಾಪದಿಂದ ಘರ್ಷಣೆ ನಡೆಯಿತ್ತು ಎನ್ನಲಾಗಿದೆ. ಘರ್ಷಣೆ ಸಂದರ್ಭದಲ್ಲಿ ಗಾಯಗೊಂಡ ಇಸ್ಮಾಯಿಲ್ ಹಾಗೂ ಉಮ್ಮರ್ ಈರ್ವರು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಘರ್ಷಣೆಯಲ್ಲಿ ತೊಡಗಿದ್ದ ಒಂದು ಗುಂಪಿನ ಮುತ್ತುಕೋಯ, ಮಿಲ್ಟ್ರಿಮಹಮ್ಮದ್, ಅಬ್ಬಾಸ್, ಯಾಹ್ಯ, ನಾಸೀರ್ ಇತರರ ವಿರುದ್ಧ ಇನ್ನೊಂದು ಗುಂಪಿನ ಉಮ್ಮರ್, ಮಹಮ್ಮದ್, ಇಸ್ಮಾಯಿಲ್, ಮಹಮ್ಮದ್ ಇತರರ ವಿರುದ್ಧ ಗುಂಪು ಘರ್ಷಣೆ, ಅಕ್ರಮ ಕೂಟ ಕಟ್ಟಿಕೊಂಡು ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡಿದ್ದು ಇತ್ಯಾದಿ ಪ್ರಕರಣಗಳು ಎರಡು ಗುಂಪಿನ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ದಾಖಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ಕೊಂಡಂಗೇರಿಯಲ್ಲಿ ಸಿದ್ದಾಪುರ ಠಾಣಾಧಿಕಾರಿ ಜಿ.ಕೆ. ಸುಬ್ರಮಣ್ಯ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು ಸ್ಥಳದಲ್ಲಿ ಜಿಲ್ಲಾ ಪೊಲೀಸ್ ಮೀಸಲು ಪಡೆಯ ತುಕಡಿಯನ್ನು ನಿಯೋಜಿಸಲಾಗಿದೆ.