ಗೋಣಿಕೊಪ್ಪಲು, ನ. 6: ನೀರಿನ ಸಂಪನ್ಮೂಲ ಸಂರಕ್ಷಣೆಗೆ ಆಧ್ಯತೆ ನೀಡುವ ಮೂಲಕ ಇಂದು ಸಮಾಜದಲ್ಲಿ ನೀರಿಗಾಗಿ ನಡೆಯುತ್ತಿರುವ ಕಾದಾಟಗಳನ್ನು ನಿಯಂತ್ರಿಸಲು ಇಂದಿನ ಯುವ ಸಮೂಹ ಮುಂದಾಗಬೇಕು ಎಂದು ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಹೇಳಿದರು.
ಕೈಕೇರಿ ಪ್ರಾಥಮಿಕ ಶಾಲಾ ಆವರಣದಲ್ಲಿ ವೀರಾಜಪೇಟೆ ಕಾವೇರಿ ಪದವಿಪೂರ್ವ ಕಾಲೇಜು ಎನ್‍ಎಸ್‍ಎಸ್ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಬಗ್ಗೆ ಸಲಹೆ ನೀಡಿ ಮಾತನಾಡಿದರು.
ಯಾವದೇ ಹುದ್ದೆ ಅಲಂಕರಿಸಿದ್ದರೂ ನೀರಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಜಲ ಸಂರಕ್ಷಣೆ ಪ್ರಮುಖವಾದದ್ದು, ಪರಿಸರಕ್ಕೆ ಪೂರಕವಾದ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರದ ಶಿಕ್ಷಣದೊಂದಿಗೆ ವಿದ್ಯಾರ್ಥಿ ಜೀವನ ಸಾರ್ಥಕತೆ ಕಾಣಲು ಅವಕಾಶವಿದೆ. ಪ್ರಕೃತಿಯೊಂದಿಗಿನ ಸ್ವ ಉದ್ಯೋದಿಂದ ಆರ್ಥಿಕ ಸಬಲೀಕರಣ ಸಾಧ್ಯವಿದೆ. ಜೇನು ಕೃಷಿ, ಪುಷ್ಪೋಧ್ಯಮ, ಕೃಷಿ ಮೂಲಕ ಕಡಿಮೆ ಶಿಕ್ಷಣ ಪಡೆದವರಿಗೂ ಹೆಚ್ಚು ಭತ್ಯೆ ಪಡೆಯುವಂತಾಗಲು ಆಧ್ಯತೆ ನೀಡಬೇಕಿದೆ ಎಂದರು.
ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಈ ಸಂದರ್ಭ ಶಾಲಾ ಆವರಣದಲ್ಲಿ ಹಣ್ಣು ಗಿಡ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಅತಿಥಿಗಳಾಗಿ ರೋಟರಿ ಅಧ್ಯಕ್ಷ ಮಚ್ಚಮಾಡ ವಿಜಯ್, ಕಾರ್ಯದರ್ಶಿ ದಿಲನ್ ಚೆಂಗಪ್ಪ, ಕಾವೇರಿ ವಿದ್ಯಾ ಸಂಸ್ಥೆ ನಿರ್ದೇಶಕಿ ಜಮ್ಮಡ ಪೊನ್ನಮ್ಮ, ಗೋಣಿಕೊಪ್ಪ ಪ್ರೆಸ್ ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ನಿ, ಬ್ಯಾಂಕ್ ಅಧಿಕಾರಿ ಜಮ್ಮಡ ಚಿತ್ರಾ ಮಾದಪ್ಪ, ಉಪನ್ಯಾಸಕಿ ಸಣ್ಣುವಂಡ ರಿಂಕು ಸುದೇಶ್, ಯೋಜನಾಧಿಕಾರಿ ಕೆ. ಎಂ ಕುಸುಮ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳಿಂದ ಎನ್‍ಎಸ್‍ಎಸ್ ಗೀತೆ ಮೂಡಿ ಬಂತು.