ವೀರಾಜಪೇಟೆ, ನ. 6: ಚುನಾವಣೆ ವೇಳೆ ಬೂತ್ ಮಟ್ಟದಿಂದಲೇ ಜೆ.ಡಿ.ಎಸ್. ಪಕ್ಷದ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಕಾಕೋಟುಪರಂಬು ಜೆ.ಡಿ.ಎಸ್. ಪಕ್ಷದ ವಲಯದ ವತಿಯಿಂದ ಕಡಂಗ ಮರೂರು ಮಹಿಳಾ ಸಮಾಜದಲ್ಲಿ ಹಮ್ಮಿಕೊಂಡಿದ್ದ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಸ್.ಹೆಚ್.ಮತೀನ್ ಮಾತನಾಡಿ ಮುಂದಿನ ಚುನಾವಣೆಯಲ್ಲಿ ಕೊಡಗು ಜಿಲ್ಲೆಯಿಂದ ಇಬ್ಬರು ಶಾಸಕರುಗಳನ್ನು ವಿಧಾನಸಭೆಗೆ ಕಳಿಸುವ ಕಾರ್ಯಕ್ಕಾಗಿ ಪಕ್ಷವನ್ನು ಈಗಿನಿಂದಲೇ ಸಂಘಟಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕಾಗಿದೆ ಎಂದರು.

ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಅವರು ಮಾತನಾಡಿ ಪಕ್ಷದ ಬಲವರ್ಧನೆಗೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಸಾಧನೆಗಳನ್ನು ಜನತೆಯ ಮುಂದೆ ಮೆಲುಕು ಹಾಕಿದರೆ ಸಾಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಕಾಕೋಟುಪರಂಬು ವಲಯ ಅಧ್ಯಕ್ಷ ಅಮ್ಮಂಡ ವಿವೇಕ್ ಮಾತನಾಡಿ ಪಕ್ಷದ ಸಂಘಟನೆ ಬಲವರ್ಧನೆಗೆ ನಿಷ್ಠಾವಂತರಾಗಿ ದುಡಿಯಬೇಕು ಎಂದರು.

ಇದೇ ಸಭೆಯಲ್ಲಿ ಕೆದಮುಳ್ಳೂರು ವಲಯ ಅಧ್ಯಕ್ಷ ಮಾತಂಡ ಚಂಗಪ್ಪ ನೇತೃತ್ವದಲ್ಲಿ ಜೆಡಿಎಸ್ ಸೇರಿದರು.

ಸಭೆಯಲ್ಲಿ ಪಕ್ಷದ ಯುವ ಮೋರ್ಚಾ ಅಧ್ಯಕ್ಷ ಚಿಲ್ಲವಂಡ ಗಣಪತಿ, ಕಾರ್ಯದರ್ಶಿ ಮಂಡೇಪಂಡ ಮುತ್ತಪ್ಪ, ಕ್ಷೇತ್ರದ ಪಂದಿಕಂಡ ರವಿ ಮಾದಪ್ಪ, ಕಕ್ಕಬ್ಬೆ ವಲಯ ಅಧ್ಯಕ್ಷ ಕಲ್ಯಾಂಟ ಶರಣು ಮತ್ತಿತರ ಪ್ರಮುಖರು ಹಾಜರಿದ್ದರು.

ಕಡಂಗ ಮರೂರು ಬೂತ್ ಅಧ್ಯಕ್ಷರಾಗಿ ಮಂಡೇಪಂಡ ಮದನ್, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್, ಕಾಕೋಟುಪರಂಬು ಬೂತ್ ಅಧ್ಯಕ್ಷರಾಗಿ ನವೀನ್ ಕುಮಾರ್, ವಲಯ ಜನತಾದಳದ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಕಾಕೋಟುಪರಂಬಿನ ಹೆಚ್.ಎಂ. ಶಂಭು ಇವರುಗಳನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ಕಾಕೋಟುಪರಂಬು, ಕಡಂಗ ಮರೂರು ಇತರ ವಲಯಗಳ ಪಕ್ಷದ ಕಾರ್ಯಕರ್ತರುಗಳು, ಮಹಿಳಾ ಕಾರ್ಯಕರ್ತರುಗಳು ಹಾಜರಿದ್ದರು.