ಸೋಮವಾರಪೇಟೆ, ನ. 6: ರಾಜ್ಯ ಹೆದ್ದಾರಿಯಲ್ಲಿ ದರೋಡೆಗೆ ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಪಟ್ಟಣದ ಪೊಲೀಸ್ ತಂಡ ಯಶಸ್ವಿಯಾಗಿದೆ.ತಂಡದಲ್ಲಿದ್ದ 12 ಮಂದಿ ಆರೋಪಿಗಳಲ್ಲಿ 8 ಮಂದಿಯನ್ನು ಬಂಧಿಸಿದ್ದಾರೆ. ಸುಂಠಿಕೊಪ್ಪ ಸಮೀಪದ ಮಳ್ಳೂರು ಗ್ರಾಮದವರಾದÀ ಕೆ.ಆರ್.ಅಭಿನಾಶ್ (27), ಎಂ.ಎನ್.ಚರಣ್ (24), ಟಿ.ಎಸ್.ಸಚಿನ್ (19), ಪಿ.ಸಿ.ಸುಜಿ (20), ಯಡವಾರೆ ಗ್ರಾಮದ ಬಿ.ಎಚ್.ಯೋಗೇಶ್ (22), ಹೊಸತೋಟದ ಟಿ.ಆರ್.ರಾಜೇಶ್ (22), ಜಂಬೂರು ಬಾಣೆಯ ಕೆ.ಅನಿಲ್ (24), ಕುಶಾಲನಗರ ಬೈಚನಳ್ಳಿಯ ಎಚ್.ಕೆ. ಸಮೀರ್ (28) ಬಂಧಿತ ಆರೋಪಿಗಳು.

ಐಗೂರು ಗ್ರಾಮದ ಭರತ್, ದರ್ಶನ್, ಯಡವಾರೆಯ ಸುದೀಪ್, ಹೊಸತೋಟದ ಶರತ್ ತಲೆಮರೆಸಿಕೊಂಡಿದ್ದಾರೆ.

ಖಚಿತ ವರ್ತಮಾನದ ಮೇರೆಗೆ ಇಲ್ಲಿನ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್ ಶಿವಣ್ಣ ನೇತೃತ್ವದ ತಂಡ ಭಾನುವಾರ ಮಧÀ್ಯರಾತ್ರಿ ಮಡಿಕೇರಿ, ಮಾದಾಪುರ, ಸೋಮವಾರಪೇಟೆ ರಾಜ್ಯ ಹೆದ್ದಾರಿಯ ಕೋವರ್‍ಕೊಲ್ಲಿ ಜಂಕ್ಷನ್ ಬಳಿ ತೆರಳಿದಾಗ, ಪಜೇರೋ (ಕೆ.ಎ.51 ಎಂ.ಜಿ.3007) ಮತ್ತು ಮಾರುತಿ ಆಲ್ಟೋ (ಕೆ.ಎ.12 ಎನ್ 4165)

(ಮೊದಲ ಪುಟದಿಂದ) ವಾಹನಗಳು ನಿಂತಿರುವದನ್ನು ಗಮನಿಸಿದ್ದಾರೆ. ತಕ್ಷಣ ಪೊಲೀಸ್ ತಂಡ ಆರೋಪಿಗಳ ಬಂಧನಕ್ಕೆ ಮುಂದಾಗಿದ್ದು, ಪಜೇರೋದಲ್ಲಿದ್ದ ಆರೋಪಿಗಳು ತಪ್ಪಿಸಿಕೊಂಡು ವಾಹನದಲ್ಲಿ ಕುಶಾಲನಗರ ರಸ್ತೆ ಮಾರ್ಗದಲ್ಲಿ ಪರಾರಿಯಾಗಿದ್ದಾರೆ.

ಆಲ್ಟೋ ಕಾರಿನಲ್ಲಿದ್ದವರು ಪಕ್ಕದ ಕಾಫಿ ತೋಟಕ್ಕೆ ಜಿಗಿದು ಪರಾರಿಯಾಗಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಕುಶಾಲನಗರ ಸೇರಿದಂತೆ ಜಿಲ್ಲೆಯ ಎಲ್ಲ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ.

ಕುಶಾಲನಗರ ಸಮೀಪ ಪಜೇರೋ ವಾಹನದಲ್ಲಿದ್ದ 8 ಆರೋಪಿಗಳನ್ನು ಈ ವೇಳೆ ಬಂಧಿಸಲಾಗಿದೆ. ಅಲ್ಲದೆ ಒಂದು ಲಾಂಗ್, 28 ಬಾಟಲ್‍ಗಳು, 5 ಕಬ್ಬಿಣದ ರಾಡು, 2 ಸ್ಟೀಲ್‍ರಾಡು, 1 ಹಾಕಿ ಸ್ಟಿಕ್, ಮರದ ರೀಪರ್ ತುಂಡು ಇತ್ಯಾದಿಯೊಂದಿಗೆ ಎರಡು ವಾಹನಗಳನ್ನು ವಶಪಡಿಸಿ ಕೊಳ್ಳಲಾಗಿದೆ.

ಡಿವೈಎಸ್‍ಪಿ ಸಂಪತ್ ಕುಮಾರ್, ವೃತ್ತನಿರೀಕ್ಷಕ ನಂಜುಡೇಗೌಡ, ಠಾಣಾಧಿಕಾರಿ ಶಿವಣ್ಣ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆದು, ದರೋಡೆಗೆ ಸಿದ್ಧತೆಯೊಂದಿಗೆ ಹೊಂಚು ಹಾಕುತ್ತಿದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

8 ಆರೋಪಿಗಳನ್ನು ಮಡಿಕೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಧೀಶರು 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ. ಕಾರ್ಯಚರಣೆಯಲ್ಲಿ ಸಿಬ್ಬಂದಿಗಳಾದ ಜಗದೀಶ್, ಮಹೇಂದ್ರ, ವಸಂತ್, ಸಂದೇಶ್, ಶಿವಕುಮಾರ್ ಭಾಗವಹಿಸಿದ್ದರು.