ಗೋಣಿಕೊಪ್ಪಲು, ನ. 6: ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ 6 ನೇ ದಿನದ ಪ್ರತಿಭಟನೆಯಲ್ಲಿ ಪೊನ್ನಂಪೇಟೆ ಮಾಜಿ ಸೈನಿಕರ ಸಂಘ ಹಾಗೂ ಪೊನ್ನಂಪೇಟೆ ಅಲ್ಪಸಂಖ್ಯಾತ ಘಟಕದ ಸದಸ್ಯರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.

ತಾಲೂಕು ರಚನೆಯಾಗಲು ಬೇಕಾದಂತಹ ಎಲ್ಲಾ ಮೂಲ ಸೌಕರ್ಯಗಳು ಸರಕಾರದ ಅಧೀನಕ್ಕೆ ಒಳಪಡುವ ಇಲಾಖೆಗಳು, ಶಾಲಾ ಕಾಲೇಜುಗಳು, ನ್ಯಾಯಾಲಯ, ಅರಣ್ಯ ಮಹಾವಿದ್ಯಾಲಯ, ಇಂಜಿನಿಯರಿಂಗ್ ಕಾಲೇಜು, ಆಸ್ಪತ್ರೆ, ಆಶ್ರಮ, ಎಲ್ಲವನ್ನೂ ಒಳಗೊಂಡಿ ದ್ದರೂ ಇದುವರೆಗೆ ಸರ್ಕಾರ ಪೊನ್ನಂಪೇಟೆ ತಾಲೂಕು ರಚನೆಗೆ ಸ್ಪಂದನೆಯನ್ನು ನೀಡದಿರುವದರಿಂದ ಪೊನ್ನಂಪೇಟೆ ತಾಲೂಕು ರಚನಾ ಸಮಿತಿ, ನಾಗರಿಕ ವೇದಿಕೆ ಹಾಗೂ ವಿವಿಧ ಸಂಘ ಸಂಸ್ಥೆಗಳು ರಾಜಕೀಯ ರಹಿತವಾಗಿ ಶಾಂತಿಯುತ ಪ್ರತಿಭಟನೆ ನಿರಂತರ ವಾಗಿ ನಡೆಸಿಕೊಂಡು ಹೋಗುವದಾಗಿ ಪ್ರತಿಭಟನಾಕಾರರು ಹೇಳಿದರು

ಮಾಜಿ ಸೈನಿಕರ ಸಂಘದ ಪರವಾಗಿ ಮಾತನಾಡಿದ ಸಂಘದ ಅಧ್ಯಕ್ಷ ಐನಂಡ ಕೆ. ಸುಬ್ರಮಣಿ, ಪೊನ್ನಂಪೇಟೆ ತಾಲೂಕು ರಚನೆಯಾಗಬೇಕಾಗಿದೆ. ಕಳೆದ ಹಲವು ದಶಕಗಳಿಂದ ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರೂ ನಮ್ಮ ಸ್ಪಂದನೆಗೆ ಸರ್ಕಾರ ಮುಂದಾಗುತ್ತಿಲ್ಲ. ಈ ದಿಸೆಯಲ್ಲಿ ನಡೆಯುವ ನಿರಂತರ ಹೋರಾಟಕ್ಕೆ ಮಾಜಿ ಸೈನಿಕರ ಸಂಘದಿಂದ ಬೆಂಬಲ ನೀಡುವದಾಗಿ ಘೋಷಿಸಿದರು.

ಮಾಜಿ ಸೈನಿಕ ಚೆಟ್ರುಮಾಡ ಕಾಶಿ ತಮ್ಮಯ್ಯ ಮಾತನಾಡಿ, ಕರ್ನಾಟಕ ಸರ್ಕಾರ ಇಂದು ಕೊಡಗಿನ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ. ಸರ್ಕಾರ 49 ನೂತನ ತಾಲೂಕು ರಚನೆ ರಾಜಕೀಯ ಲೆಕ್ಕಚಾರದಿಂದ ಮಾಡಲು ಹೊರಟಿದೆ. ಹಲವು ವರ್ಷಗಳ ಹೋರಾಟಕ್ಕೆ ಸರ್ಕಾರ ಕಿವಿಗೊಡದಿರುವದು ದುರಾ ದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಅಲ್ಪಸಂಖ್ಯಾತ ಘಟಕದ ವತಿಯಿಂದ ರಶೀದ್ ಮಾತನಾಡಿ ತಾಲೂಕು ರಚನೆಯಲ್ಲಿ ರಾಜಕೀಯ ರಹಿತವಾಗಿ ಪ್ರತಿಯೊಬ್ಬರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೆಂಬಲವನ್ನು ನೀಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭ ಮಾಜಿ ಸೈನಿಕರ ಸಂಘದ ಆತಂರಿಕ ಲೆಕ್ಕ ಪರಿಶೋಧಕ ಚೋಡುಮಾಡ ರಾಜ ಮಾದಪ್ಪ, ಖಜಾಂಚಿ ಐನಂಡ ಬೇಬಿ ತಮ್ಮಯ್ಯ, ಪ್ರಮುಖರುಗಳಾದ ಚಿಂಡಮಾಡ ನಂಜಪ್ಪ, ಮಾಚಂಗಡ ಮುತ್ತಣ್ಣ, ಪೆಮ್ಮಂಡ ಶ್ಯಾಂ ಪ್ರಸಾದ್, ಕುಪ್ಪುಡಿರ ದೇವಯ್ಯ, ಮುಕ್ಕಾಟೀರ ಪೂಣಚ್ಚ, ಸಣ್ಣುವಂಡ ಸನ್ನಿ, ಬೋಡಂಗಡ ಅಶೋಕ್, ಚೊಟ್ಟೆಕಾಳಪಂಡ ಉತ್ತಯ್ಯ, ಸೋಮೆಯಂಗಡ ಗಣೇಶ್ ತಿಮ್ಮಯ್ಯ, ಪೊನ್ನಂಪೇಟೆ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಶಾಫಿ, ಸೇರಿದಂತೆ ನೂರಾರು ಸದಸ್ಯರು ಪಾಲ್ಗೊಂಡಿದ್ದರು.