ಮಡಿಕೇರಿ, ನ. 5: ಭಾರತದ ನೌಕಾಸೇನೆ, ವಾಯುಸೇನೆ, ಭೂಸೇನೆಗೆ ಪ್ರಪ್ರಥಮ ಮಹಾ ದಂಡ ನಾಯಕರಾಗಿದ್ದಲ್ಲದೆ, ಇಂದಿಗೂ ನಮ್ಮ ಸೈನಿಕರಿಗೆ ಮಾದರಿಯಾಗಿರುವ ಕೊಡಗಿನ ವೀರ ಸೇನಾನಿ ಫಿ.ಮಾ. ಕಾರ್ಯಪ್ಪ ಅವರಿಗೆ ಇದುವರೆಗೆ ಭಾರತ ರತ್ನ ಪುರಸ್ಕಾರ ಲಭಿಸದಿರುವ ಬಗ್ಗೆ ಪ್ರಸಕ್ತ ಸೇನಾ ಜನರಲ್ ಬಿಪಿನ್ ರಾವತ್ ವಿಷಾದ ವ್ಯಕ್ತಪಡಿಸಿದ್ದಾರೆ.

ನಿನ್ನೆ ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ಕೊಡಗಿನ ಇಬ್ಬರು ಮಹಾನ್ ಸೇನಾನಿಗಳಾದ ಕಾರ್ಯಪ್ಪ ಮತ್ತು ತಿಮ್ಮಯ್ಯ ಪ್ರತಿಮೆ ಅನಾವರಣಗೊಳಿಸಿ ಮಾತನಾಡುತ್ತಾ, ವಿಷಯ ಪ್ರಸ್ತಾಪಿಸಿದ ಅವರು, ಇದುವರೆಗೆ ಭಾರತರತ್ನ ಲಭಿಸದಿರುವ ಬಗ್ಗೆ ವಿಷಾದದೊಂದಿಗೆ, ಈ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯುವೆ ಎಂದು ನುಡಿದರು.

ಕಷ್ಟಕಾಲದಲ್ಲಿ ದೇಶವನ್ನು ಮುನ್ನಡೆಸಿದ ಫೀ.ಮಾ. ಕಾರ್ಯಪ್ಪ ಮತ್ತು ಜ. ತಿಮ್ಮಯ್ಯ ಭಾರತೀಯ ಸೇನೆಗೆ ಹಾಕಿಕೊಟ್ಟಿರುವ ಭದ್ರ ಬುನಾದಿಯಲ್ಲೇ ಇಂದಿಗೂ ಮುಂದುವರಿಯಲಾಗುತ್ತಿದೆ ಎಂದು ನೆನಪಿಸಿಕೊಂಡ ಬಿಪಿನ್ ರಾವತ್ ತಾವು ಕೂಡ ಕೊಡಗಿನಂತಹ ಪ್ರದೇಶದಿಂದಲೇ ಸೇನೆಗೆ ಬಂದಿರುವದಾಗಿ ಹೆಮ್ಮೆಯ ಮಾತನಾಡಿದಾಗ, ಜನಸ್ತೋಮ ಚಪ್ಪಾಳೆಯೊಂದಿಗೆ ಹರ್ಷ ವ್ಯಕ್ತಪಡಿಸಿದರು.

ಕೊಡಗಿನ ನಿವೃತ್ತ ಸೈನ್ಯಾಧಿಕಾರಿಗಳೊಂದಿಗೆ ವಿಶೇಷ ವೇದಿಕೆಯಲ್ಲಿ ಕುಶಲೋಪರಿ ಹಂಚಿಕೊಂಡ ಅವರು, ವೀರ ಸೇನಾನಿಗಳಿಬ್ಬರ ಪ್ರತಿಮೆ ಅನಾವರಣಗೊಳಿಸಿ ನಿಮಿಷಗಟ್ಟಲೆ ಮೌನ ಶ್ರದ್ದಾಂಜಲಿಯೊಂದಿಗೆ ಶಿರಭಾಗಿ ನಿಂತಿದ್ದು, ನಮ್ಮ ಸೈನ್ಯ ಕೊಡಗಿನ ಕಲಿಗಳಿಬ್ಬರ ಬಗ್ಗೆ ಇರಿಸಿಕೊಂಡಿರುವ ಗೌರವಕ್ಕೆ ಸಾಕ್ಷಿಯಂತಿತ್ತು.

ಸಭಾ ಕಾರ್ಯಕ್ರಮದ ಬಳಿಕ ಪ್ರತ್ಯೇಕ ವೇದಿಕೆಯಲ್ಲಿ ಆಸೀನರಾಗಿದ್ದ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರೊಂದಿಗೆ ಬೆರೆತು ಆತ್ಮೀಯ ಸಂದೇಶ ಹಂಚಿಕೊಂಡು ಅವರು ಚಹಾಕೂಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಅಲ್ಲಿದ್ದ ಪ್ರತಿಯೊಬ್ಬರು ಕೂಡ ನಮ್ಮ ದೇಶದ ರಕ್ಷಣಾ ದಳದ ಧಳಪತಿಯೊಂದಿಗೆ ಛಾಯಾಚಿತ್ರಕ್ಕೆ ಹಂಬಲಿಸುತ್ತಿದ್ದರೆ, ಬಳಗದ ಬಂಧುವಿನಂತೆ ಸ್ಪಂದಿಸಿದ ರಾವತ್ ಸರಳತೆ ಮತ್ತು ಆತ್ಮೀಯತೆ ನಡುವೆ ಕೊಡಗಿನ ಜನತೆಯ ಪ್ರೀತಿಪಾತ್ರರಾದರು.

ಚಹಾಕೂಟದಲ್ಲಿ ಕಿಕ್ಕಿರಿದು ನೆರೆದಿದ್ದ ಕೊಡಂದೇರ ಕುಟುಮಬ ಸದಸ್ಯರು ಹಾಗೂ ಕಾರ್ಯಕ್ರಮ ಸಂಘಟಕರ ಬಂಧುವರ್ಗದೊಂದಿಗೆ ಅರ್ಧಗಂಟೆಗೂ ಅಧಿಕ ಸಮಯ ಕಳೆದ ಬಿಪಿನ್ ರಾವತ್ ತಮ್ಮ ಸೇವಾ ಅವಧಿಯಲ್ಲಿ ಮುಂದೊಮ್ಮೆ ಅವಕಾಶ ಲಭಿಸಿದರೆ ಮತ್ತೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದರು.

ಕೊಡಗಿನ ಪ್ರತಿಷ್ಠಿತ ಕಾವೇರಿ ವಿದ್ಯಾಸಂಸ್ಥೆ ಆವರಣದಲ್ಲಿ ವೀರ ಸೇನಾನಿಗಳಿಬ್ಬರ ಪ್ರತಿಮೆ ಅನಾವರಣದೊಂದಿಗೆ ಭಾರತಸೇನೆಯ ಮಹಾ ದಂಡನಾಯಕ ಬಿಪಿನ್ ರಾವತ್ ಕಳೆದ ಕೆಲವು ಕ್ಷಣಗಳ ಅಪೂರ್ವ ನೋಟವಿದು....