ಸೋಮವಾರಪೇಟೆ, ನ. 5: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್), ಮೈಸೂರಿನ ಓ.ಡಿ.ಪಿ. ಸಂಸ್ಥೆಯ ಆಶ್ರಯದಲ್ಲಿ ತಾ. 6 ರಂದು (ಇಂದು) ಪಟ್ಟಣದಲ್ಲಿ ಭುವನಮಂದಾರ ರೈತ ಉತ್ಪಾದಕ ಕಂಪೆನಿ ಪ್ರಾರಂಭವಾಗಲಿದೆ ಎಂದು ಕಂಪೆನಿಯ ಮುಖ್ಯ ನಿರ್ದೇಶಕ ಎಸ್.ಎಂ. ಡಿಸಿಲ್ವಾ ಹೇಳಿದರು. ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಕಚೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಿಗ್ಗೆ 11 ಗಂಟೆಗೆ ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ನಬಾರ್ಡ್‍ನ ಮುಖ್ಯ ಮಹಾ ಪ್ರಬಂಧಕ ಎಂ.ಐ. ಗಾಣಗಿ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಪೂರ್ಣಿಮಾ ಗೋಪಾಲ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ನಬಾರ್ಡ್ ಜಿಲ್ಲಾ ಸಹಾಯಕ ಮಹಾ ಪ್ರಬಂಧಕ ಎಂ.ಸಿ. ನಾಣಯ್ಯ, ಓ.ಡಿ.ಪಿ. ಸಂಸ್ಥೆಯ ನಿರ್ದೇಶಕ ಸ್ಟ್ಯಾನಿ ಡಿ’ಅಲ್ಮೇಡಾ, ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಡಾ. ಸಾಜು ಜಾರ್ಜ್ ಮತ್ತಿತರರು ಭಾಗವಹಿಸಲಿದ್ದಾರೆ. ಸಮುದಾಯದಲ್ಲಿನ ರೈತರಿಗೆ ಅರಿವು ಮೂಡಿಸಿ, ರೈತ ಉತ್ಪಾದಕರ ಸಂಸ್ಥೆಯ ಮೂಲಕ ಸುಸ್ಥಿರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಲು ಹಾಗೂ ಸೂಕ್ತ ಮಾರುಕಟ್ಟೆ ಸೌಲಭ್ಯ ಕಲ್ಪಿಸುವದು ಕಂಪೆನಿಯ ಮುಖ್ಯ ಉದ್ದೇಶವಾಗಿದೆ. ಭುವನಮಂದಾರ ರೈತ ಉತ್ಪಾದಕರ ಕಂಪೆನಿ ಸರ್ಕಾರದ ನೋಂದಾಯಿತ ಸಂಸ್ಥೆಯಾಗಿದ್ದು, ಆರ್ಹ ರೈತರು ಷೇರು ಹೊಂದಬಹುದು. ಒಂದು ಷೇರಿಗೆ ರೂ. 100 ಗಳಿದ್ದು, ಒಬ್ಬ ರೈತ 250 ಷೇರುಗಳನ್ನು ಹೊಂದಬಹುದು. ಕಂಪೆನಿಯಲ್ಲಿ ಕನಿಷ್ಟ 1000 ಷೇರುದಾರರು ಇರುತ್ತಾರೆ. ಕಂಪೆನಿ ಲಾಭದಲ್ಲಿ ಶೇ. 50 ರಷ್ಟನ್ನು ಷೇರುದಾರರಿಗೆ ಡಿವಿಡೆಂಡ್ ಮೂಲಕ ವಾರ್ಷಿಕವಾಗಿ ನೀಡಲಾಗುವದು ಎಂದು ಹೇಳಿದರು. ಕಂಪೆನಿ ಮೂಲಕ ರಾಸಾಯನಿಕ ಗೊಬ್ಬರಗಳು, ಕೀಟನಾಶಕ, ವ್ಯವಸಾಯ ಉಪಕರಣಗಳು, ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಕಂಪೆನಿ ಸಿ.ಇ.ಓ. ಕೆ.ಟಿ. ದಯಾನಂದ, ನಿರ್ದೇಶಕರುಗಳಾದ ಪಿ.ಡಿ. ಮೋಹನ್ ದಾಸ್, ಪಿ.ಜೆ. ವಿನ್ಸೆಂಟ್, ಕೆ.ಜೆ. ಗುಂಡಪ್ಪ, ಎಂ.ಟಿ. ಲೋಕೇಶ್, ಕೆ.ಪಿ. ರಮೇಶ್ ಇದ್ದರು.