ಸಿದ್ದಾಪುರ, ನ. 5: ಸಾರ್ವಜನಿಕ ರುದ್ರ ಭೂಮಿಯನ್ನು ವ್ಯಕ್ತಿಯೋರ್ವ ಒತ್ತುವರಿ ಮಾಡಿಕೊಂಡು ನರ್ಸರಿ ಮಾಡಿಕೊಂಡಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಲ್ವತ್ತೇಕರೆ ಬರಡಿ ಗ್ರಾಮದಲ್ಲಿರುವ ಹಿಂದು ರುದ್ರಭೂಮಿಯ ಜಾಗವನ್ನು ಸ್ಥಳೀಯರೊಬ್ಬರು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನರ್ಸರಿಯನ್ನಾಗಿ ಮಾಡಿ ವ್ಯವಹಾರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಮೃತದೇಹಗಳನ್ನು ಅಂತ್ಯಕ್ರಿಯೆ ನಡೆಸಲು ಜಾಗದ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸ್ಥಳೀಯ ಪಂಚಾಯಿತಿಗೆ, ಜನಪ್ರತಿನಿಧಿಗಳಿಗೆ ಹಲವಾರು ಬಾರಿ ದೂರು ನೀಡಿದ್ದರೂ, ಕೂಡ ಒತ್ತುವರಿ ಮಾಡಿದ ವ್ಯಕ್ತಿಯ ವಿರುದ್ಧ ಯಾವದೇ ಕ್ರಮಕೈಗೊಳ್ಳದೆ ಇರುವದರಿಂದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ಒತ್ತುವರಿ ಮಾಡಿದ ವ್ಯಕ್ತಿಯೊಂದಿಗೆ ಗ್ರಾ.ಪಂ. ಸದಸ್ಯರುಗಳು ಹಾಗೂ ಗ್ರಾಮಸ್ಥರು ಚರ್ಚಿಸಿದ ಸಂದರ್ಭದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆಯಿತು. ಕೂಡಲೇ ಸ್ಮಶಾನ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಯಿಂದ ಕಂದಾಯ ಅಧಿಕಾರಿಗಳು ತೆರವು ಗೊಳಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂದರ್ಭ ಗ್ರಾ.ಪಂ. ಸದಸ್ಯರು ಗಳಾದ ಶೈಲಾ ಮಂಜುನಾಥ್, ಶಶಿ, ಗ್ರಾಮಸ್ಥರಾದ ಎಂ.ಬಿ. ಭರತ್, ಮಣಿ, ಪಿ.ಕೆ. ಮಂಜು, ದಾಸ ಮತ್ತಿತರರು ಹಾಜರಿದ್ದರು.