ಕುಶಾಲನಗರ, ನ. 6: ಪ್ರತಿಯೊಬ್ಬರು ಪ್ರಾಕೃತಿಕ ಸಂಪತ್ತನ್ನು ಉಳಿಸುವದರೊಂದಿಗೆ ಗಿಡಗಳನ್ನು ನೆಟ್ಟು ಬೆಳೆಸಿ ಅರಣ್ಯ ವೃದ್ಧಿಸಿದಲ್ಲಿ ಪರಿಸರ ಸಂರಕ್ಷಣೆಯಿಂದ ನದಿ ಉಳಿವು ಸಾಧ್ಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಮೇಲ್ವಿಚಾರಕ ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಹುಣ್ಣಿಮೆ ಅಂಗವಾಗಿ ಸ್ಥಳೀಯ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಜೀವನದಿ ಕಾವೇರಿಗೆ ನಡೆದ 73ನೇ ಮಹಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮ, ಪಟ್ಟಣಗಳ ತ್ಯಾಜ್ಯಗಳು ನೇರವಾಗಿ ನದಿಗೆ ಸೇರದಂತೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ನದಿ ತಟಗಳ ವ್ಯಾಪ್ತಿಯಲ್ಲಿ ಇಂಗು ಗುಂಡಿ ನಿರ್ಮಾಣಕ್ಕೆ ತಮ್ಮ ಯೋಜನೆಯ ಸದಸ್ಯರು ಬಳಗದೊಂದಿಗೆ ಕೈಜೋಡಿಸುವದಾಗಿ ಭರವಸೆ ನೀಡಿದರು.

ಈ ಸಂದರ್ಭ ಮಾತನಾಡಿದ ಬಳಗದ ಸಂಚಾಲಕ ಎಂ.ಎನ್. ಚಂದ್ರಮೋಹನ್, ಸ್ಥಳೀಯ ಪಟ್ಟಣ ಪಂಚಾಯ್ತಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ನದಿ ತಟಗಳ ವ್ಯಾಪ್ತಿಯ ಗ್ರಾಮ ಪಂಚಾಯ್ತಿಗಳ ಸಹಯೋಗದೊಂದಿಗೆ ಮುಂದಿನ ಡಿಸೆಂಬರ್ ತಿಂಗಳಿನಿಂದ ನದಿ ತಟಗಳಲ್ಲಿ ಇಂಗುಗುಂಡಿ ನಿರ್ಮಾಣ ಕಾರ್ಯಕ್ಕೆ ಯೋಜನೆ ರೂಪಿಸುವದಾಗಿ ತಿಳಿಸಿದರು. ಅರ್ಚಕರಾದ ಕೃಷ್ಣಮೂರ್ತಿ ಭಟ್ ಅಷ್ಟೋತ್ತರ ಪೂಜೆ ನಂತರ ನದಿಗೆ ಮಹಾ ಆರತಿ ಬೆಳಗಲಾಯಿತು.

ಈ ಸಂದರ್ಭ ಅಯ್ಯಪ್ಪಸ್ವಾಮಿ ದೇವಾಲಯ ಸಮಿತಿ ಮಾಜಿ ಅಧ್ಯಕ್ಷ ಕೆ.ಆರ್.ಶಿವಾನಂದನ್, ಟ್ರಸ್ಟಿ ಡಿ.ಆರ್. ಸೋಮಶೇಖರ್, ಕರ್ನಾಟಕ ಕಾವಲುಪಡೆಯ ಕೊಪ್ಪ ಘಟಕದ ಅಧ್ಯಕ್ಷರಾದ ಕೃಷ್ಣ, ಕಾವೇರಿ ಮಹಾ ಆರತಿ ಬಳಗದ ವನಿತಾ ಚಂದ್ರಮೋಹನ್ ಮತ್ತಿತರರು ಇದ್ದರು.