ಮಡಿಕೇರಿ, ನ. 7: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಲ್ಲಿನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಅಸಾಧಾರಣ ಪ್ರತಿಭೆ ಪ್ರಶಸ್ತಿ ನೀಡಿ ಗುರುತಿಸಲಾಯಿತು.

ಜಿಲ್ಲಾ ಬಾಲಭವನ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕೊಡಮಾಡುವ ಪ್ರಶಸ್ತಿಯನ್ನು ಏಳು ವಿಭಾಗಗಳಲ್ಲಿ ಒಟ್ಟು 14 ಮಂದಿ ವಿದ್ಯಾರ್ಥಿಗಳಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪತ್ರದೊಂದಿಗೆ ರೂ. 10 ಸಾವಿರ ಮೊತ್ತದ ಚೆಕ್ ಹಾಗೂ ಫಲ ತಾಂಬೂಲದೊಂದಿಗೆ ಗೌರವಿಸಲಾಯಿತು. ಇಂದು ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಪ್ರಶಸ್ತಿ ಪ್ರದಾನ, ಸ್ಪರ್ಧಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಣೆ ಮಾಡಲಾಯಿತು.

ಸಾಂಸ್ಕøತಿಕ ಕ್ಷೇತ್ರದಲ್ಲಿ ಅತ್ತೂರಿನ ಜ್ಞಾನಗಂಗಾ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿ.ಡಿ. ಸಿಂಚನ, ಬಳಗುಂದ ಸಂತ ಜೋಸೆಫರ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಎಸ್.ಎ. ರಿಶಾ, ಸಮಾಜ ಸೇವೆಯಲ್ಲಿ ಮಡಿಕೇರಿ ಸಂತ ಜೋಸೆಫರ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎ.ಜಿ. ಐಶ್ವರ್ಯ, ಕೊಡಗು ವಿದ್ಯಾಲಯದ ಪಿ.ಎಂ. ನಂಜಪ್ಪ, ಸಂಗೀತ ಕ್ಷೇತ್ರದಲ್ಲಿ ಗೋಣಿಕೊಪ್ಪ ಲಯನ್ಸ್ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಪಿ.ವೈ. ಅನನ್ಯ ಶರ್ಮ, ವೀರಾಜಪೇಟೆ ಸ.ಪ.ಪೂ. ಕಾಲೇಜಿನ 10ನೇ ತಗರತಿ ವಿದ್ಯಾರ್ಥಿ ಎಸ್.ಜಿ. ಶರತ್ ಕುಮಾರ್, ಕ್ರೀಡಾ ಕ್ಷೇತ್ರದಲ್ಲಿ ಮದೆಮಹೇಶ್ವರ ಪ್ರೌಢಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕೆ.ಆರ್. ಪ್ರವೀಣ್, ಬೆಂಗಳೂರು, ಸಂತ ಜೋಸೆಫರ ಪ.ಪೂ. ಕಾಲೇಜು ವಿದ್ಯಾರ್ಥಿ ಎನ್.ಎಂ. ಸೂರ್ಯ, ಚಿತ್ರಕಲೆಯಲ್ಲಿ ಗೋಣಿಕೊಪ್ಪ, ಸ.ಮಾ.ಪ್ರಾ. ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಜೆ. ಅಲ್ಫಿಯಾ, ವೀರಾಜಪೇಟೆ ಸಂತ ಅನ್ನಮ್ಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ, ಕ್ಲೈವ್ ಶಾನ್ ಡಿಮೆಲ್ಲೊ, ತಾರ್ಕಿಕ ಕ್ಷೇತ್ರದಲ್ಲಿ ವೀರಾಜಪೇಟೆ ಸಂತ ಅನ್ನಮ್ಮ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಎಂ.ಎಸ್. ಮೊಹಮ್ಮದ್ ಜೈದ್, ಸೋಮವಾರಪೇಟೆ ಓ.ಎಲ್.ವಿ. ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಎಸ್.ಎಂ. ನಿಮಿಷ, ನಾವಿನ್ಯತೆ ವಿಭಾಗದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪಿ.ಎನ್. ಆಶಿನ್ ಕೃಷ್ಣ, ಮಡಿಕೇರಿಯ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಜಿ.ಸಿ. ಸುಷ್ಮ ಅವರುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉದ್ಘಾಟನೆ: ಕನ್ನಡ ನಾಡಿನ ಸಾಂಸ್ಕøತಿಕ ಪರಂಪರೆಯನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವದು ಅಗತ್ಯ ಎಂದು ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು. ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ನಾಡಿನ ನೃತ್ಯ ಕಲೆ, ಜಾನಪದ, ಚಿತ್ರಕಲೆಗಳು ನಾಡ ಪರಂಪರೆಯನ್ನು ಬೆಳೆಸಿದ್ದು, ವಿದ್ಯಾರ್ಥಿಗಳು ಸ್ಪರ್ಧೆಗಳಲ್ಲಿ ಭಾಗವಹಿಸಿ, ಕಲೆಯ ಅಭಿರುಚಿ ಬೆಳೆಸಿಕೊಳ್ಳುವಂತೆ ಟಿ.ಪಿ. ರಮೇಶ್ ಸಲಹೆ ಮಾಡಿದರು.

ಕನ್ನಡ ಭಾಷೆಗೆ ಯಾವ ಕೊರತೆಯೂ ಇಲ್ಲ. ಕನ್ನಡ ನೆಲದ ಎಲ್ಲರೂ ಕನ್ನಡಿಗರಾಗಬೇಕು. ಆ ಮೂಲಕ ಕನ್ನಡ ಭಾಷೆಯನ್ನು ಮತ್ತಷ್ಟು ಬೆಳೆಸಬೇಕು ಎಂದು ಕರೆ ನೀಡಿದರು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಮಮ್ತಾಜ್ ಅವರು ಸರ್ವರನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ 6 ವರ್ಷದಿಂದ 16 ವರುಷದ ಒಳಗಿನ ವಿದ್ಯಾರ್ಥಿಗಳಿಗೆ 3 ವಿಭಾಗಗಳಾಗಿ ವಿವಿಧ ಸ್ಪರ್ದೆಗಳನ್ನು ಏರ್ಪಡಿಸಲಾಗಿತ್ತು.

ಭಾರತೀ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬಾಲಭವನ ಸಮಿತಿ ಮೇಲ್ವಿಚಾರಕಿ ಮೇಪಾಡಂಡ ಸವಿತಾ ಕೀರ್ತನ್, ತೀರ್ಪುಗಾರರಾದ ಚಿತ್ರಕಲಾವಿದರಾದ ಪ್ರಸನ್ನ, ಕೋಡಿ ಭರತ್, ಶಿಕ್ಷಕಿಯರಾದ ಸುಮತಿ, ಲಕ್ಷ್ಮಣ್, ಇಂದ್ರಾಣಿ, ಶೈಲಜಾ, ಮೊಂತಿ ಗಣೇಶ್ ಮುಂತಾದವರಿದ್ದರು. ಇದೇ ಸಂದರ್ಭ ಭರತನಾಟ್ಯ ಪ್ರವೀಣೆ ಶ್ರೀಲಕ್ಷ್ಮಿ ಅವರ ಭರತನಾಟ್ಯ ಹಾಗೂ ಸೋಮವಾರಪೇಟೆಯ ಟೀಂ ಆ್ಯಟಿಟ್ಯೂಡ್ ತಂಡದ ಕನ್ನಡ ಹಾಡಿನ ನೃತ್ಯಗಳು ರಂಜಿಸಿದವು.