ಮೂರ್ನಾಡು, ನ. 7: ಪಾಲೇಮಾಡು ಪೈಸಾರಿ ಗುಡಿಸಲು ನಿವಾಸಿಗಳು ಸ್ಮಶಾನ ಜಾಗ ಬಿಟ್ಟು ಕೊಡುವಂತೆ ಕಳೆದ ಐದು ದಿನಗಳಿಂದ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು ಜಿಲ್ಲಾಡಳಿತ ಸ್ಥಳಕ್ಕೆ ಭೇಟಿ ನೀಡುವದಾಗಿ ಭರವಸೆ ನೀಡಿ ಗಡುವು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸುವವರೆಗೆ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಪಾಲೇಮಾಡುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೊಡಗಿನಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಸರ್ವೆ ನಂ. 167/1ಎ ರಲ್ಲಿನ ಪೈಸಾರಿ ಜಾಗದಲ್ಲಿ ಸ್ಥಳ ಗುರುತಿಸಿ ಸಂಸ್ಥೆಯ ಹೆಸರಿಗೆ 12.70 ಏಕರೆ ಜಾಗವನ್ನು ನೀಡ ಲಾಗಿದೆ. ಕಳೆದ ಹತ್ತು ವರ್ಷಗಳಿಂದ ವಸತಿ ರಹಿತ ಕುಟುಂಬಗಳು ಪೈಸಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿ ಕೊಂಡು ವಾಸ ಮಾಡುತ್ತಿದ್ದು, ಸ್ಮಶಾನಬೇಕೆಂಬ ಉದ್ದೇಶದಿಂದ ಸ್ಥಳೀಯ ನಿವಾಸಿಗಳು 2 ಏಕರೆ ಜಾಗವನ್ನು ಬೇಲಿ ಹಾಕಿಕೊಂಡು ಶವ ಸಂಸ್ಕಾರಗಳನ್ನು ನಡೆಸುತ್ತಿದ್ದರು.
ಸ್ಟೇಡಿಯಂ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗದಲ್ಲಿ ಸ್ಮಶಾನ ಜಾಗ ಇದ್ದು, ಸ್ಥಳೀಯರು ಸ್ಮಶಾನ ಜಾಗವನ್ನು ಬಿಟ್ಟು ಕೊಡುವಂತೆ ಅನೇಕ ಬಾರಿ ಪ್ರತಿಭಟನೆ ನಡೆಸಿದರು. ಹಲವು ತಿಂಗಳ ಹಿಂದೆ ಪೈಸಾರಿ ಗುಡಿಸಲು ನಿವಾಸಿ ತಿಮ್ಮಪ್ಪ ಎಂಬವರು ಮೃತಪಟ್ಟಾಗ ಸ್ಟೇಡಿಯಂ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿದರು. ಶವ ಸಂಸ್ಕಾರಕ್ಕೆ ನಾವು ಬಳಸುತ್ತಿದ್ದ ಸ್ಮಶಾನದಲ್ಲಿಯೆ ನಡೆಯಬೇಕು ಎಂದು ನಿವಾಸಿಗಳು ಶವವನ್ನಿಟ್ಟು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಅದೇ ಸ್ಥಳದಲ್ಲಿ ಶವ ಸಂಸ್ಕಾರ ಮಾಡುವಂತೆ ಸೂಚಿಸಿತು.
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲೇಮಾಡಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮಂಜೂರಾಗಿರುವ ಸ್ಮಶಾನ ಜಾಗದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಹಾಕಿರುವ ತಂತಿ ಬೇಲಿಯನ್ನು ತೆರವುಗೊಳಿಸು ವಂತೆ ಹಾಗೂ ಸ್ಮಶಾನ ದುರಸ್ತಿಪಡಿಸು ವಂತೆ ಬಹುಜನ ಕಾರ್ಮಿಕ ಸಂಘದ ವತಿಯಿಂದ ಅ. 28ರಿಂದ ಅಹೋರಾತ್ರಿ ಧರಣಿ ಕೈಗೊಂಡು ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಬಾರದ ಇದ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರರು, ತಾ. 2ರಿಂದ ನಿವಾಸಿಗಳು ಸ್ಮಶಾನ ಜಾಗದಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡರು.
ನಿವಾಸಿಗಳ ಯಾವದೆ ಪ್ರತಿಭಟನೆಗಳಿಗೆ ಇದುವರೆಗೆ ಸೂಕ್ತ ನ್ಯಾಯ ದೊರಕದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡು ಉಪವಾಸ ನಿರತ ಬಹುಜನ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ಮೊಣ್ಣಪ್ಪ ಹಾಗೂ ಕಾರ್ಯಕರ್ತ ಮಹೇಶ್ ಸೋಮವಾರ ಬೆಳಿಗ್ಗೆ ತೀವ್ರ ಅಸ್ವಸ್ಥಗೊಂಡು ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ಬಳಿಕ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಗೊಂಡಿದ್ದ ಹಿನ್ನೆಲೆಯಲ್ಲಿ ಮಡಿಕೇರಿ ಯಿಂದ ಸೋಮವಾರ ರಾತ್ರಿ ಸ್ಥಳಕ್ಕಾಗಮಿಸಿದ ಉಪ ವಿಭಾಗಾಧಿ ಕಾರಿ ನಂಜುಂಡಸ್ವಾಮಿ ಮತ್ತು ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರೊಂದಿಗೆ ಮಾತುಕತೆ ನಡೆಸಿದರು. ತಾ. 11 ರಂದು ಜಿಲ್ಲಾಧಿಕಾರಿ ಬಂದು ಸ್ಮಶಾನ ಜಾಗವನ್ನು ಮಂಜೂರು ಮಾಡಿಕೊಡು ತ್ತಾರೆ ಎಂಬ ಭರವಸೆಯನ್ನು ಅಧಿಕಾರಿಗಳು ನೀಡಿದರು. ಇದಕ್ಕೆ ಬದ್ದರಾದ ಪ್ರತಿಭಟನಾಕಾರರು ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟು ಜಿಲ್ಲಾಧಿಕಾರಿ ಸ್ಥಳಕ್ಕಾಗಮಿಸುವವರೆಗೂ ಸ್ಮಶಾನ ಜಾಗದಲ್ಲಿಯೆ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಾಲೆಮಾಡುವಿನ ನಿವಾಸಿಗಳಿಗೆ ಈಗಾಗಲೆ ವಾಟೆಕಾಡುವಿನಲ್ಲಿ ಕಾವೇರಿ ಹೊಳೆ ಬದಿಯಲ್ಲಿ ಸ್ಮಶಾನಕ್ಕೆ ಸ್ಥಳ ನೀಡಲಾಗಿದ್ದರೂ ನಮಗೆ ಅಲ್ಲಿರುವ ಸ್ಮಶಾನ ಬೇಡ. ನಾವುಗಳು ಕಳೆದ ಹತ್ತು ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದ ಸ್ಮಶಾನ ಜಾಗ ನಾವು ಬಿಟ್ಟುಕೊಡುವದಿಲ್ಲ. ಈ ಹಿಂದೆ ನಿಧನರಾದ 45 ಮಂದಿಯ ಶವ ಸಂಸ್ಕಾರ ಇದೇ ಸ್ಥಳದಲ್ಲಿ ನಡೆಸಲಾಗಿದೆ. ಆದ್ದರಿಂದ ಈ ಸ್ಮಶಾನ ಜಾಗ ಪಾಲೆಮಾಡು ನಿವಾಸಿಗಳಿಗೆ ಮಂಜೂರಾಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಮುಖಂಡ ಮೊಣ್ಣಪ್ಪ ತಿಳಿಸಿದ್ದಾರೆ.