ಗೋಣಿಕೊಪ್ಪ, ನ. 7: ಚಿರತೆ ಧಾಳಿಗೆ ಕರು ಗಾಯಗೊಂಡಿರುವ ಘಟನೆ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಅಜ್ಜಿಕುಟ್ಟೀರ ನಾಚಪ್ಪ ಎಂಬವರಿಗೆ ಸೇರಿದ ಗಾಯಗೊಂಡಿರುವ ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ರಾತ್ರಿ 8 ಗಂಟೆ ಸುಮಾರಿಗೆ ಚಿರತೆಯು ಕೊಟ್ಟಿಗೆಯಲ್ಲಿದ್ದ ಕರುವಿನ ಮೇಲೆರಗಿದೆ. ಈ ಸಂದರ್ಭ ಮನೆಯವರು ಕೂಗಿಕೊಂಡಿದ್ದರಿಂದ ಕರುವನ್ನು ಬಿಟ್ಟು ತೋಟದಲ್ಲಿ ಸೇರಿಕೊಂಡಿದೆ. ಕರುವಿನ ಮುಖ, ಕುತ್ತಿಗೆ ಹಾಗೂ ಕಾಲಿನ ಭಾಗಕ್ಕೆ ಗಾಯವಾಗಿದ್ದು, ಅರಣ್ಯ ಇಲಾಖೆ ಮೂಲಕ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಅರಣ್ಯ ಇಲಾಖೆ ಚಿರತೆಯನ್ನು ಹಿಡಿಯುವ ಕೆಲಸಕ್ಕೆ ಮುಂದಾಗುತ್ತಿಲ್ಲ, ಭರವಸೆ ನೀಡಿ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಸಾಕುಪ್ರಾಣಿಗಳ ಮೇಲೆ ನಿರಂತರ ಧಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಗ್ರಾಮಸ್ಥರ ನೆರವಿಗೆ ಬರುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.