ಮಡಿಕೇರಿ, ನ. 7: ಮಡಿಕೇರಿ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣದ ಒಟ್ಟು ಕಾಮಗಾರಿ ರೂ. 17.50 ಕೋಟಿ ವೆಚ್ಚದ್ದಾಗಿದ್ದು, ಪ್ರಸಕ್ತ ರೂ. 4.95 ಕೋಟಿಯಲ್ಲಿ ಮೊದಲ ಹಂತದ ಕೆಲಸ ನಡೆಯುತ್ತಿದ್ದು, ಕಾಮಗಾರಿಯ ಗುಣಮಟ್ಟ ಕಾಯ್ದುಕೊಳ್ಳಲಾಗುವದು ಎಂದು ಈ ಯೋಜನೆಯ ತಾಂತ್ರಿಕ ಅಭಿಯಂತರ ಸುನಿಲ್ ಸ್ಪಷ್ಟಪಡಿಸಿದ್ದಾರೆ.ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಇಂದು ನಗರಸಭೆಯ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತೆ ಶುಭ ಸಹಿತ ತಾಂತ್ರಿಕ ಇಂಜಿನಿಯರ್ ಸುನಿಲ್ ಖುದ್ದು ಪರಿಶೀಲಿಸಿ, ತಾಂತ್ರಿಕ ಯೋಜನೆ ಪ್ರಕಾರ ಕಟ್ಟಡ ತಲೆಯೆತ್ತುತ್ತಿದೆ ಎಂದು ಸಮಜಾಯಿಷಿಕೆ ನೀಡಿದರು. ಕಟ್ಟಡದ ಆಧಾರ ಸ್ತಂಭಗಳನ್ನು 24 ಇಂಚು ಸುತ್ತಳತೆಯೊಂದಿಗೆ ನಿರ್ಮಿಸುತ್ತಿದ್ದು, ‘ಬೇಲ್ಟ್ ಭೀಮ್’

(ಮೊದಲ ಪುಟದಿಂದ) ಅನ್ನು 8 ಇಂಚು ಅಗಲದಲ್ಲಿ 2 ಅಡಿಯಷ್ಟು ಆಳದಿಂದ ನಿರ್ಮಿಸಲಾಗುತ್ತಿದ್ದು, ಇಲ್ಲಿ ಸುರಕ್ಷತೆ ಬಗ್ಗೆ ಸಂಶಯ ಬೇಡವೆಂದು ಇಂಜಿನಿಯರ್ ಸಮರ್ಥನೆ ನೀಡಿದರು.

ಪ್ರಸಕ್ತ ಮೊದಲ ಹಂತದಲ್ಲಿ 55 ಮೀಟರ್ ಉದ್ದ ಹಾಗೂ 12.8 ಮೀಟರ್ ಅಗಲದ ಸುತ್ತಳತೆಯೊಂದಿಗೆ ಬಸ್ ನಿಲ್ದಾಣ ಕಟ್ಟಡ ತಲೆಯೆತ್ತುತ್ತಿದ್ದು, ಎಲ್ಲವೂ ನೀಲಿ ನಕಾಶೆಯಲ್ಲಿರುವ ಕ್ರಿಯಾಯೋಜನೆ ಪ್ರಕಾರ ಕೆಲಸ ಮುಂದುವರಿಯುತ್ತಿರುವದಾಗಿ ‘ಶಕ್ತಿ’ಯೊಂದಿಗೆ ಮಾಹಿತಿಯಿತ್ತರು.

ಈಗ ಕೈಗೊಂಡಿರುವ ನೆಲ ಅಂತಸ್ತು ಕಟ್ಟಡವನ್ನು ಪೂರ್ಣಗೊಳಿಸಿದ ಬಳಿಕ ಮೊದಲ ಅಂತಸ್ತು ಕೆಲಸ ನಡೆಲಾಗುತ್ತದೆ ಎಂದ ಅವರು, ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವದರೊಂದಿಗೆ ಈ ಕಟ್ಟಡದ ಎರಡು ಬದಿಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲಾಗುತ್ತದೆ. ಹೀಗಾಗಿ ಹಂತ ಹಂತದ ಕಾಮಗಾರಿಗೆ ಯೋಜನೆ ರೂಪಿಸಲಾಗುವದು ಎಂದರು.

ಶೀತ ಪ್ರದೇಶದ ಕಾರಣ ಕಟ್ಟಡ ಕೆಲಸ ಪೂರ್ಣಗೊಂಡ ಬಳಿಕ ಸಮರ್ಪಕ ಒಳಚರಂಡಿಯೊಂದಿಗೆ ಎಲ್ಲಿಯೂ ನೀರು ನಿಲುಗಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವದು ಎಂದ ಅವರು, ಕಳಪೆ ಕೆಲಸವಾಗದಂತೆ ನಗರಸಭೆ ಅಭಿಯಂತರರು ನಿಗಾವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಆಯುಕ್ತೆ ಶುಭ ಪ್ರತಿಕ್ರಿಯಿಸಿ, ಜನತೆಯ ಅನುಕೂಲಕ್ಕಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ನಿಲ್ದಾಣದ ಕೆಲಸ ಕಳಪೆಯಾಗದಂತೆ ಕಾಳಜಿ ವಹಿಸಿದ್ದು, ವಿನಾಕಾರಣ ಯಾರೂ ಟೀಕೆ ಮಾಡುವದು ಸಮರ್ಥನೀಯವಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಈ ಸಂದರ್ಭ ನಗರಸಭಾ ಸದಸ್ಯರುಗಳಾದ ಹೆಚ್.ಎಂ. ನಂದಕುಮಾರ್ ಹಾಗೂ ಪ್ರಕಾಶ್ ಆಚಾರ್ಯ ಹಾಜರಿದ್ದು, ವಿಪಕ್ಷಗಳು ಅಭಿವೃದ್ಧಿ ವಿಷಯದಲ್ಲೂ ರಾಜಕಾರಣ ಮಾಡಬಾರದು ಎಂದು ಧ್ವನಿಗೂಡಿಸಿದರು. ಕಾಮಗಾರಿ ಪರಿಶೀಲನೆ ವೇಳೆ ನಗರಸಭೆಯ ಇತರ ಸಿಬ್ಬಂದಿ ಹಾಜರಿದ್ದರು.

ಶುಕ್ರವಾರ ನಗರಸಭೆ ಸಾಮಾನ್ಯ ಸಭೆಯಲ್ಲಿ ಬಸ್ ನಿಲ್ದಾಣ ಕಾಮಗಾರಿ ಸಂಬಂಧ ಚರ್ಚೆಯೊಂದಿಗೆ ತಾಂತ್ರಿಕ ಇಂಜಿನಿಯರ್ ಖುದ್ದು ಪರಿಶೀಲನೆ ತನಕ ಕಾಮಗಾರಿ ಸ್ಥಗಿತಕ್ಕೆ ನಿರ್ಧರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.