ಮಡಿಕೇರಿ, ನ. 7: ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ದಿಢೀರ್ ಘೋಷಣೆ ಮಾಡಿದ್ದ 500 ಹಾಗೂ 1000 ಮುಖಬೆಲೆಯ ನೋಟು ನಿಷೇಧದಿಂದ ದೇಶದ ಆರ್ಥಿಕ ವ್ಯವಸ್ಥೆ ತೀರಾ ಕುಸಿದಿದೆ. ಅಸಂಘಟಿತ ಕಾರ್ಮಿಕ ವರ್ಗ ಮತ್ತು ಬಡವರ್ಗ ಶೋಚನೀಯ ಸ್ಥಿತಿಯತ್ತ ತಳ್ಳಲ್ಪಟ್ಟಿದ್ದು, ರೈತರ ಪಾಲಿಗೆ ಅದು ಸಿಂಹ ಸ್ವಪ್ನವಾಗಿ ಪರಿಣಮಿಸಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟಿದ್ದಾರೆ.

ಪತ್ರಿಕೆ ಹೇಳಿಕೆ ನೀಡಿರುವ ಅವರು, ಕಳೆದ 2016 ನವೆಂಬರ್ 8ರಂದು ನೋಟು ನಿಷೇಧ ಮಾಡಿದ್ದ ಕೇಂದ್ರ ಸರಕಾರದ ಕಠೋರ ನಿರ್ಧಾರವನ್ನು ಜನತೆ ದೇಶದ ಒಳಿತಿಗಾಗಿ ಮಾಡಿರುವ ನಿರ್ಧಾರವೆಂದು ಸ್ವಾಗತ ಮಾಡಿದರಾದರೂ ಕಾಲಕ್ರಮೇಣ ಅದರಿಂದಾದ ಅನಾಕೂಲತೆಯನ್ನು ಸಹಿಸಿಕೊಂಡರು ಐವತ್ತು ದಿನಗಳಲ್ಲೇ ಎಲ್ಲವೂ ಸರಿಯಾಗುತ್ತದೆ ಎಂಬ ಮೋದಿಯ ಮಾತಿನ ಮೇಲೆ ನಂಬಿಕೆ ದಿನಕಳೆದಂತೆ ಕಡಿಮೆಯಾಗ ತೊಡಗಿದ್ದು, ಇದೀಗ ಒಂದು ವರ್ಷವಾದರೂ ದೇಶದ ಜನತೆಗೆ ಅದರ ಶುದ್ಧ ಚಿತ್ರ ಸಿಗದಂತಾಗಿದೆ ಎಂದು ಹೇಳಿದ್ದಾರೆ.

ಇದೊಂದು ಅವೈಜ್ಞಾನಿಕ ನಿರ್ಧಾರವಾಗಿದ್ದು, ಈ ನಿರ್ಧಾರದಿಂದ ದೇಶದ ಆರ್ಥಿಕ ವ್ಯವಸ್ಥೆ ತೀರಾ ಹದಗೆಟ್ಟಿದೆ, ಬಡ ಜನತೆ ದಿನಗೂಲಿ ವೇತನವನ್ನು ಸಮಯಕ್ಕೆ ಸರಿಯಾಗಿ ಪಡೆದುಕೊಳ್ಳಲಾಗದೆ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದು ಪೂರ್ವ ತಯಾರಿಲ್ಲದೆ ಯಾವದೇ ಅಧ್ಯಯನ ಮಾಡದೆ ಮಾಡಿದ ಈ ನಿರ್ಧಾರದಿಂದ ಇದೊಂದು ಸಂಘಟಿತ ಲೂಟಿಯಾಗಿದ್ದು, ಆಯ್ದ ಪ್ರತಿಷ್ಠಿತ ಸಂಸ್ಥೆಗಳಿಗೆ ಮತ್ತು ಉದ್ಯಮಗಳಿಗೆ ಅನುಕೂಲವಾಗಿದೆ ಎಂದು ಆರೋಪಿಸಿದ್ದಾರೆ.

ಇಂತಹ ಏಕಪಕ್ಷೀಯ ನಿರ್ಧಾರಗಳಿಂದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಕೊಡಲಿಪೆಟ್ಟು ಬಿದ್ದಂತಾಗಿದ್ದು ಜನರ ವಿಶ್ವಾಸವನ್ನು ಗಳಿಸಿ ಕೇಂದ್ರ ಸರಕಾರ ಮುಂದಿನ ಹೆಜ್ಜೆಯನ್ನು ಇಡಬೇಕಿದೆ ಎಂದು ಹೇಳಿದ್ದಾರೆ.