ಕುಶಾಲನಗರ, ನ. 7: ಕೊಡಗು ಜಿಲ್ಲೆಯಲ್ಲಿ ವೇಶ್ಯಾವಾಟಿಕೆಗೆ ಯುವತಿಯರನ್ನು ಸಾಗಾಟ ಮಾಡುತ್ತಿದ್ದ ಅಂತರ್ಜಿಲ್ಲಾ ಮಟ್ಟದ ತಂಡವೊಂದನ್ನು ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಮೈಸೂರಿನ ಓರ್ವ ಮಹಿಳೆ ಮತ್ತು ಕುಶಾಲನಗರದ ಮೂವರು ಯುವಕರು ಸೇರಿದಂತೆ ಒಟ್ಟು 4 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಸಂದರ್ಭ ಮೂವರು ಯುವತಿಯರನ್ನು ರಕ್ಷಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕುಶಾಲನಗರದ ಪ್ರದೀಪ್, ಅಬ್ದುಲ್ ಅಜೀಜ್, ಶರೀಫ್, ಮತ್ತು ಮೈಸೂರಿನ ವಿಜಯನಗರದ ಮಹಿಳೆಯೊಬ್ಬಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಅಬ್ದುಲ್ ಅಜೀಜ್ ಚಾಲಿಸುತ್ತಿದ್ದ ಟಾಟಾ ಕ್ಸೈಲೋ (ಕೆಎ.01.ಎಎ.1527) ವಾಹನವನ್ನು ವಶಪಡಿಸಿಕೊಂಡಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.
ಖಚಿತ ಮಾಹಿತಿ ಮೇರೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್
(ಮೊದಲ ಪುಟದಿಂದ) ಮಾರ್ಗದರ್ಶನದಲ್ಲಿ ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಮಹೇಶ್ ನೇತೃತ್ವದಲ್ಲಿ ಪತ್ತೆದಳದ ತಂಡ ಇತ್ತೀಚೆಗೆ ಮಡಿಕೇರಿ ಸಮೀಪ ಮೇಕೇರಿ ಬಳಿ ಕಾರ್ಯಾಚರಣೆ ನಡೆಸಿದ್ದು ಈ ಸಂದರ್ಭ ಧಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಚಾರಣೆ ಸಂದರ್ಭ ಹಲವು ಮಾಹಿತಿಗಳು ಹೊರಬಿದ್ದಿದ್ದು ಮೈಸೂರು, ಮಂಗಳೂರು ಸೇರಿದಂತೆ ವಿವಿಧೆಡೆಯಿಂದ ಯುವತಿಯರ ಫೋನ್ ಸಂಪರ್ಕ ಮಾಡಿ ಜಿಲ್ಲೆಗೆ ಕರೆಸಿಕೊಂಡು ಈ ತಂಡ ಲಾಡ್ಜ್, ರೆಸಾರ್ಟ್ಗಳಿಗೆ ಪೂರೈಸುವ ಮೂಲಕ ಭಾರೀ ದಂಧೆ ನಡೆಯುತ್ತಿತ್ತು ಎನ್ನಲಾಗಿದೆ.
ಕಾರ್ಯಾಚರಣೆ ಸಂದರ್ಭ ದೊರೆತ ದಾಖಲೆಗಳಿಂದ ಈ ದಂಧೆ ನಡೆಸುತ್ತಿದ್ದ ತಂಡ ಯುವತಿಯರನ್ನು ಗಂಟೆ, ದಿನ ಲೆಕ್ಕದಲ್ಲಿ ಜಿಲ್ಲೆಯ ವಿವಿಧೆಡೆ ದಂಧೆಗೆ ಸಾಗಿಸುತ್ತಿದ್ದ ಬಗ್ಗೆ ಮಾಹಿತಿ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಧಾಳಿ ಸಂದರ್ಭ ಮೂವರು ಯುವತಿಯರನ್ನು ಪೊಲೀಸರ ವಶಕ್ಕೆ ಪಡೆದಿದ್ದು ಇಬ್ಬರು ಮೈಸೂರು ಹಾಗೂ ಓರ್ವ ಯುವತಿ ಮಂಗಳೂರಿನ ನಿವಾಸಿಯಾಗಿದ್ದು ವಿಚಾರಣೆ ನಂತರ ಅವರನ್ನು ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್ ಶಕ್ತಿಗೆ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಕುಶಾಲನಗರದ ಸಮೀಪದ ಜನತಾ ಕಾಲನಿ, ಕೂಡಿಗೆ ಮತ್ತು ಬೈಲುಕೊಪ್ಪೆ ನಿವಾಸಿಗಳಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ಅಪರಾಧ ಪತ್ತೆದಳದ ಇನ್ಸ್ಪೆಕ್ಟರ್ ಮಹೇಶ್, ಎಎಸ್ಐಗಳಾದ ತಮ್ಮಯ್ಯ, ಹಮೀದ್, ನಿರಂಜನ್, ಯೋಗೀಶ್, ಅನಿಲ್, ವೆಂಕಟೇಶ್, ವಸಂತ್, ಶಶಿಕಿರಣ್, ಶೇಷಪ್ಪ ಪಾಲ್ಗೊಂಡಿದ್ದರು.