ಗೋಣಿಕೊಪ್ಪ, ನ. 7 : ಹಾಕಿಕೂರ್ಗ್ ವತಿಯಿಂದ ಪೊನ್ನಂಪೇಟೆ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಆರಂಭ ಗೊಂಡಿರುವ ಪ್ರೌಢಶಾಲಾ ಮಟ್ಟದ ಬಾಲಕ, ಬಾಲಕಿಯರ ಕೋದಂಡ ಎ. ಪೂವಯ್ಯ ಜ್ಞಾಪಕಾರ್ಥ ಹಾಕಿ ಟೂರ್ನಿಯಲ್ಲಿ 5 ತಂಡಗಳು ಗೆಲುವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದಿವೆ. ಬಾಲಕಿಯರಲ್ಲಿ ಬಾಳೆಲೆ ಪ್ರತಿಭಾ, ಬಾಲಕರ ವಿಭಾಗದಲ್ಲಿ ಪ್ರಗತಿ, ಪೊನ್ನಂಪೇಟೆ ಜಿಪಿಯು, ವೀರಾಜಪೇಟೆ ರೋಟರಿ ತಂಡಗಳು ಗೆಲುವು ಪಡೆದವು.
ಬಾಲಕಿಯರ ವಿಭಾಗದಲ್ಲಿ ಬಾಳೆಲೆ ಪ್ರತಿಭಾ ತಂಡವು ಹಾತೂರು ತಂಡದ ವಿರುದ್ಧ 3-0 ಗೋಲುಗಳ ಗೆಲುವು ಪಡೆಯಿತು. ವಿಜೇತ ತಂಡದ ಪರ 12 ನೇ ನಿಮಿಷದಲ್ಲಿ ಅಣ್ಣಪ್ಪ, 21 ನೇ ನಿಮಿಷದಲ್ಲಿ ದಿಯಾ, 37 ನೇ ನಿಮಿಷದಲ್ಲಿ ಸುನಿತಾ ಗೋಲು ಬಾರಿಸಿದರು.
ಬಾಲಕರಲ್ಲಿ ವೀರಾಜಪೇಟೆ ಪ್ರಗತಿ ತಂಡವು ನಾಪೋಕ್ಲು ಸರ್ಕಾರಿ ಶಾಲೆ ವಿರುದ್ಧ 2-1 ಗೋಲುಗಳಿಂದ ಗೆಲುವು ಪಡೆಯಿತು. 19 ನೇ ನಿಮಿಷದಲ್ಲಿ ಧನುಶ್, 19ನೇ ನಿಮಿಷದಲ್ಲಿ ಸಂದೀಪ್ ಗೋಲು ಹೊಡೆದರು.
ಪೊನ್ನಂಪೇಟೆ ಜಿಪಿಯು ತಂಡವು ಕಾಪ್ಸ್ ತಂಡವನ್ನು 2-1 ಗೋಲುಗಳಿಂದ ಸೋಲಿಸಿತು. ಪೊನ್ನಂಪೇಟೆ ಪರ 1 ರಲ್ಲಿ ಯಶ್ವಂತ್, 36 ರಲ್ಲಿ ಪ್ರೀತಂ, ಕಾಪ್ಸ್ ಪರ 26 ನೇ ನಿಮಿಷದಲ್ಲಿ ಪೊನ್ನಣ್ಣ ಗೋಲು ಬಾರಿಸಿದರು.
ವೀರಾಜಪೇಟೆ ರೋಟರಿ ತಂಡವು ಮೂರ್ನಾಡು ಶಾಲೆ ವಿರುದ್ಧ 2-1 ಗೋಲುಗಳಿಂದ ಜಯ ಪಡೆಯಿತು. ರೋಟರಿ ಪರ 12 ನೇ ನಿಮಿಷದಲ್ಲಿ ರೋಹನ್, 27 ನೇ ನಿಮಿಷದಲ್ಲಿ ಬೆಳ್ಯಪ್ಪ, ಮೂರ್ನಾಡು ಪರ 24 ನೇ ನಿಮಿಷದಲ್ಲಿ ರವಿ ಗೋಲು ದಾಖಲಿಸಿದರು.
ಪೊನ್ನಂಪೇಟೆ ಜಿಪಿಯು ತಂಡ ಪ್ರಗತಿ ವಿರುದ್ಧ 3-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಪೊನ್ನಂಪೇಟೆ ಪರ 6 ನೇ ನಿಮಿಷದಲ್ಲಿ ಹುಮೈಝ್, 10 ನೇ ನಿಮಿಷದಲ್ಲಿ ದರ್ಶನ್, 19 ನೇ ನಿಮಿಷದಲ್ಲಿ ಗೌತಂ, ಪ್ರಗತಿ ಪರ 21 ನೇ ನಿಮಿಷದಲ್ಲಿ ಮಂದಣ್ಣ ಗೋಲು ಹೊಡೆದರು.
ಹಾಕಿ ಕೂರ್ಗ್ ಉಪಾಧ್ಯಕ್ಷ ಮೇಕೇರಿರ ರವಿ ಪೆಮ್ಮಯ್ಯ ಉದ್ಘಾಟಿಸಿದರು. ಈ ಸಂದರ್ಭ ಹಾಕಿಕೂರ್ಗ್ ಪಂದ್ಯಾವಳಿ ಕಮಿಟಿ ಮುಖ್ಯಸ್ಥ ಬುಟ್ಟಿಯಂಡ ಚೆಂಗಪ್ಪ, ಟೂರ್ನಿ ನಿರ್ದೇಶಕ ಕುಪ್ಪಂಡ ದಿಲನ್, ಟೂರ್ನಿ ಅಂಪೈಯರ್ ಕಮಿಟಿ ವ್ಯವಸ್ಥಾಪಕ ಬೊಳ್ಳಚಂಡ ನಾಣಯ್ಯ ಉಪಸ್ತಿತರಿದ್ದರು. ಅಂಪೈರ್‍ಗಳಾಗಿ ಪೊನ್ನಣ್ಣ, ದರ್ಶನ್, ಕೀರ್ತಿ, ಕಾಳಪ್ಪ, ಅಯ್ಯಪ್ಪ ಕಾರ್ಯನಿರ್ವಹಿಸಿದರು.