ಶ್ರೀಮಂಗಲ, ನ. 8: ಕರಿಮೆಣಸು ಆಮದಿನಿಂದ ದೇಶಿಯ ಕರಿಮೆಣಸು ದರ ತೀವ್ರ ಕುಸಿತವಾಗಿರುವದನ್ನು ತಡೆಗಟ್ಟಲು ಆಮದು ಮಾಡಿಕೊಂಡ ಕರಿಮೆಣಸನ್ನು ಮರು ರಫ್ತಿಗೆ ಅವಕಾಶ ನೀಡದಂತೆ ಹಾಗೂ ಅಡಿಕೆಗೆ ಕನಿಷ್ಠ ಆಮದು ಬೆಲೆ ನಿಗದಿಪಡಿಸಿದಂತೆ ಕರಿಮೆಣಸಿಗೂ ಕನಿಷ್ಟ ಆಮದು ಬೆಲೆ ನಿಗದಿಪಡಿಸುವಂತೆ ಸೇರಿದಂತೆ ಬೆಳೆಗಾರರನ್ನು ಪ್ರತಿನಿಧಿಸುವ ದಕ್ಷಿಣ ಭಾರತದ ಪ್ರಮುಖ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ತಂದು ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಗೋಣಿಕೊಪ್ಪದಲ್ಲಿ ನಡೆದ ಕೊಡಗು ಬೆಳೆಗಾರ ಒಕ್ಕೂಟದ ಆಶ್ರಯದಲ್ಲಿ ನಡೆದ ಬೆಳೆಗಾರರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಒಕ್ಕೂಟದ ಅಧ್ಯಕ್ಷ ಕೈಬೀಲಿರ ಹರೀಶ್ ಅಪ್ಪಯ್ಯರವರ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯಕೈಗೊಳ್ಳಲಾಯಿತು.
ಕರಿಮೆಣಸು ಆಮದು ತಡೆದರೆ ಮಾತ್ರ ಬೆಳೆಗಾರರ ಉಳಿವು: ಕಾಫಿ ದರ ಕುಸಿತದಿಂದ ತೀವ್ರ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಆಸರೆಯಾಗಿದ್ದ ಕರಿಮೆಣಸು ಇದೀಗ ಆಮದಿನಿಂದ ಶೇ. 50 ರಷ್ಟು ದರ ಕುಸಿತವಾಗಿದೆ. ಅಡಿಕೆ ಆಮದಿನಿಂದ ದರ ಕುಸಿತ ತಡೆಗಟ್ಟಲು ಕನಿಷ್ಟ ಆಮದು ದರವನ್ನು ಕೆ.ಜಿ.ಗೆ ರೂ. 164 ರಿಂದ 254ಕ್ಕೆ ನಿಗದಿ ಪಡಿಸುವ ಮೂಲಕ ಕಡಿಮೆ ದರಕ್ಕೆ ಆಮದು ಮಾಡಿಕೊಳ್ಳುವದಕ್ಕೆ ಕಡಿವಾಣ ಹಾಕಲಾಗಿದೆ. ಅದೇ ರೀತಿ ಕರಿಮೆಣಸಿಗೂ ಕನಿಷ್ಟ ಆಮದು ದರ ನಿಗದಿಪಡಿಸಬೇಕು. ಭಾರತಕ್ಕೆ ಆಮದು ಮಾಡಿಕೊಂಡ ಕರಿಮೆಣಸನ್ನು ಮರು ರಫ್ತಿಗೆ ಮೌಲ್ಯ ವರ್ಧಿತ ಮಾಡಿ ಮಾತ್ರ ಅವಕಾಶ ನೀಡಬೇಕು. ಮೂಲ ಸ್ವರೂಪವನ್ನು ಬದಲಾವಣೆ ಮಾಡದೆ ಹಾಗೂ ಕೇವಲ ಸ್ವಚ್ಛಮಾಡಿ ವಿಂಗಡಿಸಿ ಮರು ರಫ್ತಿಗೆ ಅವಕಾಶ ನೀಡಬಾರದು. ತೆರಿಗೆ ವಂಚನೆ ಹಾಗೂ
ರಾಸಾಯನಿಕ ಮಿಶ್ರಿತ ಸೇರಿದಂತೆ ಇತರ ಮಾನದಂಡಗಳನ್ನು ಉಲ್ಲಂಘಿಸಿ ಕರಿಮೆಣಸು ಭಾರತಕ್ಕೆ ಪ್ರವೇಶ ತಡೆಗೆ ಏಕ ಬಂದರು ಮೂಲಕ ಮಾತ್ರ ಆಮದಿಗೆ ಅವಕಾಶ ನೀಡಬೇಕು. ಈಗಾಗಲೇ ಸಂಬಾರ ಮಂಡಳಿ ರಾಸಾಯನಿಕ ಮಿಶ್ರಿತ ಇನ್ನಿತರ ಮಾನದಂಡಗಳನ್ನು ಉಲ್ಲಂಘಿಸಿ ಬರುವ ಕರಿಮೆಣಸನ್ನು ಪರೀಕ್ಷಿಸಲು ಬೇರೆ ಎನ್.ಸಿ.ಎಂ.ಎಸ್. ಎಂಬ ಸಂಸ್ಥೆಗೆ ಅವಕಾಶ ಕಲ್ಪಿಸಿದ್ದು ಇವುಗಳನ್ನು ಕರಿಮೆಣಸು ವ್ಯಾಪಾರಿಗಳು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಭೆಯಲ್ಲಿ ವಿಸ್ತ್ರತವಾಗಿ ಚರ್ಚಿಸಲಾಯಿತು.
ಗೋಣಿಕೊಪ್ಪ ಎ.ಪಿ.ಎಂ.ಸಿ. ಕರಿಮೆಣಸು ಆಮದು ಅಸಮಾದಾನ: ಗೋಣಿಕೊಪ್ಪ ಎ.ಪಿ.ಎಂ.ಸಿ.ಗೆ ವಿಯೆಟ್ನಾಮ್ ದೇಶದಿಂದ ಕರಿಮೆಣಸು ಆಮದು ಮಾಡಿಕೊಂಡು ಹೆಚ್ಚಿನ ದರಕ್ಕೆ ಮಾರಾಟ ಮಾಡಿ, ಕಲಬೆರಕೆ ಮಾಡಿರುವ ಪ್ರಕರಣದ ಬಗ್ಗೆ ಚರ್ಚೆ ನಡೆಯಿತು. ಬೆಳೆಗಾರರ ಒಕ್ಕೂಟದಿಂದ ನೀಡಿದ ಮನವಿಗೆ ಸಿ.ಎಂ. ಸಿದ್ದರಾಮಯ್ಯರವರು ಸ್ಪಂದಿಸಿ ಕೇಂದ್ರಕ್ಕೆ ಅಕ್ರಮ ಮತ್ತು ಕಳಪೆ ಕರಿಮೆಣಸು ಆಮದು ತಡೆಗೆ ಪತ್ರ ಬರೆದು ಬೆಳೆಗಾರರ ಹಿತ ಕಾಪಾಡುವದನ್ನು ಕೋರಿರುವದನ್ನು ಹಾಗೂ ಪ್ರಕರಣವನ್ನು ಸಿಒಡಿಗೆ ಒಪ್ಪಿಸಿರುವದನ್ನು ಸಭೆಯಲ್ಲಿ ಸ್ವಾಗತಿಸಲಾಯಿತು. ಪ್ರಸ್ತಕ ವರ್ಷ ಜುಲೈ 13 ರಿಂದ ಆಗಸ್ಟ್ 16ರ ವರಗೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಗೋಣಿಕೊಪ್ಪ ಎಪಿಎಂಸಿಗೆ 384.5 ಟನ್ ಕರಿಮೆಣಸು ವಿಯೆಟ್ನಾಮ್ ನಿಂದ ಪ್ರತೀ ಕೆ.ಜಿ.ಗೆ ಸರಾಸರಿ ರೂ. 227ರಂತೆ 8 ಕೋಟಿ 73 ಲಕ್ಷಕ್ಕೆ ಆಮದಾಗಿದ್ದು, ಇದನ್ನು ರೂ. 475 ರಂತೆ 18 ಕೋಟಿ 26 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ವ್ಯಾಪಾರಿಗಳು ಒಂದು ತಿಂಗಳ ಅವಧಿಯಲ್ಲಿ ಸುಮಾರು 9 ಕೋಟಿ 52 ಲಕ್ಷ ಲಾಭ ಗಳಿಸಿದ್ದಾರೆ ಎಂದು ಸಭೆಯಲ್ಲಿ ದಾಖಲೆ ಸಹಿತ ಚರ್ಚಿಸಲಾಯಿತು.
ಕಾಫಿ ಮಂಡಳಿ ವಿಲೀನಕ್ಕೆ ಆಕ್ಷೇಪ: ಕಾಫಿ ಮಂಡಳಿಯನ್ನು ಟೀ ಮತ್ತು ರಬ್ಬರ್ ಮಂಡಳಿಯೊಂದಿಗೆ ವಿಲೀನ ಮಾಡುವ ಪ್ರಸ್ತಾವನೆ ಇರುವದು ತಿಳಿದು ಬಂದಿದೆ. ಆದರೆ, 1942ರಲ್ಲಿ ಸ್ಥಾಪನೆಯಾದ ಕಾಫಿ ಮಂಡಳಿಯನ್ನು 75 ವರ್ಷದ ನಂತರ ವಿಲೀನ ಮಾಡುವದು ಸರಿಯಲ್ಲ. ಪ್ರಸ್ತುತ ಮಂಡಳಿಯಲ್ಲಿ ಬೆಳೆಗಾರರೇ ಅಧ್ಯಕ್ಷರಾಗುವ ಅವಕಾಶವಿದ್ದು, ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ಬಹುತೇಕ ಉದ್ಯಮಿಗಳ ಹಿಡಿತದಲ್ಲಿರುವ ರಬ್ಬರ್ ಹಾಗೂ ಟೀ ಉದ್ಯಮದೊಂದಿಗೆ ಕಾಫಿ ಮಂಡಳಿ ವಿಲೀನವಾದರೆ ಸಣ್ಣ ರೈತರು ಸೇರಿದಂತೆ ಕಾಫಿ ಬೆಳೆಗಾರರಿಗೆ ತೀವ್ರ ತರದ ತೊಂದರೆಯಾಗಲಿದೆ. ಕಾಫಿ ತೋಟಗಳು ಪರಿಸರ ಸ್ನೇಹಿ ವನ್ಯಜೀವಿಗಳಿಗೆ ಆಶ್ರಯ ತಾಣವಾಗಿದ್ದು, ಕರ್ನಾಟಕದಲ್ಲಿ ಕಾಫಿ ಉದ್ಯಮವು ಸುಮಾರು 50 ಸಾವಿರ ಮಾನವ ನಿರ್ಮಿತ ಕೆರೆ ಹೊಂದುವ ಮೂಲಕ ತನ್ನದೆ ಆದ ಕೊಡುಗೆಯನ್ನು ನೀಡಿದೆ. ಆದ್ದರಿಂದ ಕಾಫಿ ಮಂಡಳಿಯನ್ನು ಈಗ ಇರುವಂತೆಯೇ ಪ್ರತ್ಯೇಕವಾಗಿ ಮುಂದುವರೆಸಲು ಆಗ್ರಹಿಸಲು ನಿರ್ಧರಿಸಲಾಯಿತು.
ಅಡಿಕೆ ಮಾರುಕಟ್ಟೆ: ಅಡಿಕೆಗೆ ಕೊಡಗು ಜಿಲ್ಲೆಯ ಹೊರ ಭಾಗದಲ್ಲಿ ದೊರೆಯುತ್ತಿರುವ ಮಾರುಕಟ್ಟೆ ದರ ಜಿಲ್ಲೆಯ ವ್ಯಾಪಾರಿಗಳಿಂದ ದೊರೆಯದೇ ಇರುವದರಿಂದ ಉತ್ತಮ ದರದಿಂದ ಬೆಳೆಗಾರರು ವಂಚಿತರಾಗಿದ್ದಾರೆ. ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳು ಬೆಳೆಗಾರರಿಗೆ ದೊರೆಯಬೇಕಾದ ಮಾರುಕಟ್ಟೆಯನ್ನು ತಮಗೆ ದೊರಕಿಸಿಕೊಳ್ಳುತ್ತಿದ್ದಾರೆ. ಕೊಡಗಿನ ಹೊರ ಭಾಗದಲ್ಲಿ ಪ್ರಸ್ತುತ ಪ್ರತಿ ಕೆ.ಜಿ. ಅಡಿಕೆಗೆ ಕೊಡಗಿನಲ್ಲಿ ದೊರೆಯುವ ದರಕ್ಕಿಂತ 10ರಿಂದ 12 ರೂ. ಹೆಚ್ಚು ಧಾರಣೆಯಿದೆ. ಇದನ್ನು ದೊರಕಿಸಿಕೊಳ್ಳಲು ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಉತ್ತಮ ದರ ದೊರೆಯುವ ಸ್ಥಳಕ್ಕೆ ಆರ್ಟಿಸಿ ಹಾಗೂ ಬೆಳೆ ನಮೂದಿಸಿದ ಇತರೆ ದಾಖಲೆಯೊಂದಿಗೆ ಮಾರಾಟ ಮಾಡಲು ಮುಂದಾಗಬೇಕು. ರೈತರು ತಮ್ಮ ಬೆಳೆಯನ್ನು ಹೆಚ್ಚಿನ ಬೆಲೆ ದೊರೆಯುವ ಎಲ್ಲಿಗಾದರೂ ಕೊಂಡೊಯ್ಯಲು ಹಕ್ಕು ಹೊಂದಿದ್ದಾರೆ. ಆದ್ದರಿಂದ ಈ ನಿಟ್ಟಿನಲ್ಲಿ ಪ್ರಯತ್ನಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಹೈಟೆನ್ಷನ್ ಹೋರಾಟಗಾರರ ಮೇಲೆ ಹಾಕಿರುವ ಮೊಕದ್ದಮೆ ಕೈಬಿಡಲು ಆಗ್ರಹ: ಹೈಟೆನ್ಷನ್ ವಿದ್ಯುತ್ ಮಾರ್ಗದ ವಿರುದ್ಧ ಹೋರಾಟ ನಡೆಸಿದ ರೈತರ ಮೇಲೆ ಹಾಕಿರುವ ಮೊಕದ್ದಮೆಯನ್ನು ಸರ್ಕಾರ ಕೈಬಿಡಬೇಕು. ಪೊನ್ನಂಪೇಟೆ ತಾಲೂಕು ಹೋರಾಟಕ್ಕೆ ಬೆಳೆಗಾರ ಒಕ್ಕೂಟದಿಂದ ಬೆಂಬಲಕ್ಕೆ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಸಾಲ ಮನ್ನ: ಕಾಫಿ ದರ ಅಸ್ಥಿರತೆ, ಕರಿಮೆಣಸು ದರ ಕಳೆದ ಒಂದು ವರ್ಷದಿಂದ ಶೇ 50 ರಷ್ಟು ಕುಸಿತದಿಂದ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದು ಬ್ಯಾಂಕ್ಗಳು ಬೆಳೆಗಾರರ ಸಾಲ ಮರುಪಾವತಿಗೆ ಯಾವದೇ ಒತ್ತಾಯ ಮಾಡಬಾರದು. ರಾಜ್ಯ ಸರ್ಕಾರ ಸಹಕಾರ ಸಂಘದಲ್ಲಿ ರೂ. 50 ಸಾವಿರದವರೆಗೆ ಸಾಲ ಮನ್ನ ಮಾಡಿರುವದು ಸ್ವಾಗತರ್ಹ. ಆದರೆ, ಕೇಂದ್ರ ಹಾಗೂ ರಾಜ್ಯ ಎಲ್ಲಾ ಬ್ಯಾಂಕ್ಗಳ ಸಾಲವನ್ನು ಸಂಪೂರ್ಣವಾಗಿ ಮನ್ನ ಮಾಡಬೇಕೆಂದು ಒತ್ತಾಯಿಸಲು ನಿರ್ಧರಿಸಲಾಯಿತು.
ಸಂಸದರಿಂದ ಪ್ರಣಾಳಿಕೆ ಆಶ್ವಾಸನೆ ಈಡೇರಿಸಲು ಆಗ್ರಹ: ಕೊಡಗು ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ನೀಡಿದ ಆಶ್ವಾಸನೆಯಂತೆ ಕಾಫಿ ಬೆಳೆಗಾರರ ಎಲ್ಲಾ ಸಾಲ ಮನ್ನ ಮಾಡುವಂತೆ ಭರವಸೆ ನೀಡಿದ್ದಾರೆ. ಅವರು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಲು ನಿರ್ಧರಿಸಲಾಯಿತು.
2 ದಶಕದಿಂದ ಏರಿಕೆಯಾಗದ ಕಾಫಿ ದರ: ಕಾಫಿ ದರ 1994ರಲ್ಲಿ ಮುಕ್ತ ಮಾರುಕಟ್ಟೆಗೆ ಬಂದ ನಂತರ ಪ್ರತಿ ಚೀಲಕ್ಕೆ ಒಂದು ವರ್ಷಕ್ಕೆ ಸೀಮಿತವಾಗಿ 3 ಸಾವಿರ ರೂ. ದರವಿತ್ತು. 2 ದಶಕ ಕಳೆದ ನಂತರವೂ ಇದೇ ದರವಿದೆ. ಇದರ ನಡುವೆ ಹಲವು ವರ್ಷ ಕೇವಲ ರೂ 400 ರಿಂದ 1500ರ ನಡುವೆ ದರವಿತ್ತು. ಆದರೆ, ರಸಗೊಬ್ಬರ, ಕಾರ್ಮಿಕರ ವೇತನ, ತೋಟ ನಿರ್ವಹಣೆ ಸೇರಿದಂತೆ ಉತ್ಪಾದನ ವೆಚ್ಚ ಶೇ 300 ರಷ್ಟು ಏರಿಕೆಯಾಗಿದೆ. ಸರಕಾರಿ ಅಧಿಕಾರಿಗಳು, ನೌಕರರು ಮತ್ತು ಸಂಸದರು ಹಾಗೂ ಶಾಸಕರ ವೇತನ, ಸೌಲಭ್ಯ ಸಹ 250 ರಿಂದ 300 ರಷ್ಟು ಏರಿಕೆಯಾಗಿದೆ. ಆದರೆ, ಜನಪ್ರತಿನಿಧಿಗಳು ಕಾಫಿ ಮತ್ತು ಕರಿಮೆಣಸು ಬೆಳೆಗಾರರ ಸಮಸ್ಯೆ ಬಗ್ಗೆ ಸರಕಾರದ ಗಮನ ಸೆಳÉಯಲು ಮುಂದಾಗಿಲ್ಲ. ಬೆಳೆಗಾರರ ಸಂಘಟನೆಗಳೇ ಸರ್ಕಾರಕ್ಕೆ ತಮ್ಮ ಸಮಸ್ಯೆ ಗಮನ ಸೆಳೆಯುತ್ತಿವೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಎಲ್ಲಾ ಸಂಘಟನೆಗಳು ಸೇರಿ ಹೋರಾಟ ಮಾಡಲು ನಿರ್ಧಾರ: ಕೆ.ಜಿ.ಎಫ್, ಕೆ.ಪಿ.ಎ, ಸಿ.ಪಿ.ಎ, ಉಪಾಸಿ ಸೇರಿದಂತೆ ಕರ್ನಾಟಕ, ಕೇರಳ, ತಮಿಳುನಾಡುವಿನ ಕಾಫಿ ಮತ್ತು ಬೆಳೆಗಾರರ ಸಂಘಟನೆಗಳನ್ನು ಒಂದೇ ವೇದಿಕೆಯಲ್ಲಿ ತಂದು ಸರ್ಕಾರಕ್ಕೆ ಒಂದಾಗಿ ಬೆಳೆಗಾರರ ಸಮಸ್ಯೆ ಪರಿಹರಿಸಲು ಒತ್ತಾಯಿಸಲು ನಿರ್ಧರಿಸಲಾಯಿತು.
ವೇದಿಕೆಯಲ್ಲಿ ಕರ್ನಾಟಕ ಬೆಳೆಗಾರ ಒಕ್ಕೂಟದ ವಕ್ತಾರ ಕೆ.ಕೆ. ವಿಶ್ವನಾಥ್, ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ, ಸಲಹೆಗಾರ ಚೆಪ್ಪುಡೀರ ಶೆರಿ ಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ ನಂಜಪ್ಪ, ಜಂಟಿ ಕಾರ್ಯದರ್ಶಿ ಬಾಚಂಗಡ ದಾದ ದೇವಯ್ಯ, ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷೆ ಆದೇಂಗಡ ತಾರ ಅಯ್ಯಮ್ಮ, ಸೇರಿದಂತೆ ಬೆಳೆಗಾರರ ಪ್ರಮುಖರು ಭಾಗವಹಿಸಿದ್ದರು.