ಮಡಿಕೇರಿ, ನ. 8 : ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ತಾ. 10 ರಂದು (ನಾಳೆ) ಕೊಡಗು ಬಂದ್ಗೆ ಕರೆ ನೀಡಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಅಭಿಮನ್ಯು ಕುಮಾರ್ ಜಿಲ್ಲೆಯ ಜನತೆಗೆ ಬೇಡವಾದ ಟಿಪ್ಪು ಜಯಂತಿಯನ್ನು ರಾಜ್ಯ ಸರಕಾರ ಬಲವಂತವಾಗಿ ಆಚರಿಸಲು ಮುಂದಾಗಿದ್ದು, ಇದನ್ನು ಖಂಡಿಸಿ ತಾ. 10 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಕೊಡಗು ಬಂದ್ ನಡೆಸುವಂತೆ ಕರೆ ನೀಡುವದಾಗಿ ತಿಳಿಸಿದರು. ಅಂದು ಎಲ್ಲಾ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳನ್ನು ಬಂದ್ಗೆ ಸಹಕಾರ ನೀಡಬೇಕೆಂದು ಚೇಂಬರ್ ಆಫ್ ಕಾಮರ್ಸ್ ಬಳಿ ಹಾಗೂ ಖಾಸಗಿ ಬಸ್ಗಳ ಸಂಚಾರವನ್ನು ಸ್ಥಗಿv Àಗೊಳಿಸುವಂತೆ ಖಾಸಗಿ ಬಸ್ ಮಾಲೀಕರ ಬಳಿ ಮನವಿ ಮಾಡಿ ಕೊಳ್ಳುವದಾಗಿ ಅವರು ಹೇಳಿದರು. ಮಕ್ಕಳ ಹಿತದೃಷ್ಟಿಯಿಂದ ಶಾಲಾ, ಕಾಲೇಜುಗಳನ್ನು ಕೂಡ ಬಂದ್ ಮಾಡುವದು ಸೂಕ್ತವೆಂದು ಅಭಿಮನ್ಯುಕುಮಾರ್ ತಿಳಿಸಿದರು.
ಸರಕಾರ ಎಷ್ಟೇ ಬಿಗಿ ಬಂದೋಬಸ್ತ್ ಕೈಗೊಂಡರೂ ಟಿಪ್ಪು ಜಯಂತಿ ಆಚರಣೆಗೆ ತೀವ್ರ ಪ್ರತಿರೋಧ ಒಡ್ಡುವದಾಗಿ ಅವರು ಎಚ್ಚರಿಕೆ ನೀಡಿದರು. ಜಿಲ್ಲೆಯಲ್ಲಿ ಭಯದ ವಾತಾವರಣದಲ್ಲಿ ಬಲವಂತವಾಗಿ ಟಿಪ್ಪು ಜಯಂತಿ ಯನ್ನು ಆಚರಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದ್ದು, ಇದು ಕಾಂಗ್ರೆಸ್ ಸರ್ಕಾರದ ವಿನಾಶದ ಆಚರಣೆ ಯೆಂದು ಟೀಕಿಸಿದರು.
ಜಯಂತಿ ಆಚರಣೆÉಗೆ ಜನಪ್ರತಿ ನಿಧಿಗಳನ್ನು ಹೊರತು ಪಡಿಸಿದಂತೆ ಇತರರಿಗೆ ಅಥವಾ ಒಂದು ಪಕ್ಷದ ಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆ ನೀಡಿದ್ದೇ ಆದಲ್ಲಿ ಹೋರಾಟ ಸಮಿತಿ ಕಾರ್ಯಕ್ರಮ
(ಮೊದಲ ಪುಟದಿಂದ) ನಡೆಯುವ ಸ್ಥಳದಲ್ಲಿ ಹಾಜರಾಗಲಿದೆ ಇಂದು ಎಚ್ಚರಿಕೆ ನೀಡಿದರು. ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ನೇರ ಹೊಣೆಯೆಂದು ತಿಳಿಸಿದ ಅಭಿಮನ್ಯು ಕುಮಾರ್, ತಾ. 10ನ್ನು ಕರಾಳ ದಿನವನ್ನಾಗಿ ಆಚರಿಸಲು ಕೊಡಗು ಬಂದ್ಗೆ ಕರೆ ನೀಡುತ್ತಿರುವದಾಗಿ ತಿಳಿಸಿದರು.
ತೋಟ ಮಾಲೀಕರು ಕಾರ್ಮಿಕರಿಗೆ ರಜೆ ಘೋಷಿಸಬೇಕು, ಆಟೋ ರಿಕ್ಷಾ ಸೇರಿದಂತೆ ಇನ್ನಿತರ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಬೇಕೆಂದು ಅವರು ಮನವಿ ಮಾಡಿದರು. ಬಂದ್ ಸಂದರ್ಭ ವಿವಾಹ ಹಾಗೂ ಶವ ಸಂಸ್ಕಾರ ಮೊದಲಾದ ಕಾರ್ಯಕ್ರಮಗಳಿಗೆ ತೊಂದರೆಯನ್ನು ಉಂಟು ಮಾಡುವದಿಲ್ಲವೆಂದು ಸ್ಪಷ್ಟಪಡಿಸಿದರು. ತಾ. 10 ರಂದು ಮೂರೂ ತಾಲೂಕುಗಳಲ್ಲಿ ವಿಹೆಚ್ಪಿ ಮುಖಂಡ ಕುಟ್ಟಪ್ಪ ಅವರ ಹುತಾತ್ಮ ದಿನವÀನ್ನು ಆಚರಿಸುವದಾಗಿ ಅಭಿಮನ್ಯು ಕುಮಾರ್ ತಿಳಿಸಿದರು.
ಭಜರಂಗ ದಳದ ಜಿಲ್ಲಾ ಸಂಚಾಲಕ ಅಜಿತ್ಕುಮಾರ್ ಮಾತನಾಡಿ, ಎರಡು ವರ್ಷಗಳ ಹಿಂದೆ ಟಿಪ್ಪು ಜಯಂತಿ ಸಂದರ್ಭ ಕೊಡಗಿನಲ್ಲಿ ದಾಂಧಲೆ ನಡೆಸಿದ ಕೇರಳದ ವ್ಯಕ್ತಿಗಳನ್ನು ಬಂಧಿಸಲಾಗಿದೆಯೇ ಮತ್ತು ವಾಹನಗಳನ್ನು ವಶಪಡಿಸಿಕೊಳ್ಳಾಗಿದೆಯೇ ಎನ್ನುವ ಬಗ್ಗೆ ಸರಕಾರ ಮಾಹಿತಿ ನೀಡುತ್ತದೆಯೇ ಎಂದು ಪ್ರಶ್ನಿಸಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಕುಟ್ಟಪ್ಪ ಅವರ ಹತ್ಯೆ ಪ್ರಕರಣ ಸೇರಿದಂತೆ ಅಹಿತಕರ ಘಟನೆಗಳ ಬಗ್ಗೆ ಸಿಬಿಐ ಮತ್ತು ಎನ್ಐಎ ತನಿಖೆಯಾಗಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜಾಗರಣಾ ವೇದಿಕೆಯ ತಾಲೂಕು ಸಹ ಸಂಚಾಲಕ ಅಜಿತ್, ಬಿಜೆಪಿ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಧನಂಜಯ್, ಪ್ರಮುಖರಾದ ಪಿ.ಜಿ.ಕಮಲ್ ಹಾಗೂ ಧರ್ಮೇಂದ್ರ ಉಪಸ್ಥಿತರಿದ್ದರು.
ಮಹಿಳಾ ಮೋರ್ಚಾ ಟೀಕೆ
ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ನಿಷೇದಾಜ್ಞೆಯ ನಡುವೆ ನಡೆಸಲು ಮುಂದಾಗಿದ್ದು, ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವಾಗಿದೆಯೆಂದು ಕೊಡಗು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಟೀಕಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷರಾದ ಯಮುನಾ ಚಂಗಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಮಹಿಳಾ ಮೋರ್ಚಾದ ನಗರಾಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯಲ್ಲಿ ಭಯದ ವಾತಾವರಣವನ್ನು ಮೂಡಿಸಿದೆಯೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಗೀತಾ ಪವಿತ್ರ, ತಾಲೂಕು ಅಧ್ಯಕ್ಷೆ ಕವಿತಾ ಬೆಳ್ಯಪ್ಪ, ರಾಜ್ಯ ಸಮಿತಿ ಸದಸ್ಯರಾದ ಸುಮಾ ಸುದೀಪ್ ಹಾಗೂ ಮಿನಾಜ್ ಪ್ರವೀಣ್ ಉಪಸ್ಥಿತರಿದ್ದರು.
ಟಿಪ್ಪು ಜಯಂತಿಗೆ ಖಂಡನೆ
ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ಎರಡು ವರ್ಷಗಳಿಂದ ಇಡೀ ರಾಜ್ಯದಲ್ಲಿ ಟಿಪ್ಪು ಜಯಂತಿಗೆ ವಿರೋಧ ಇದ್ದರೂ ಟಿಪ್ಪು ಜಯಂತಿ ಆಚರಣೆ ಮಾಡುವದರ ಮೂಲಕ ಇಡೀ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡಿದ್ದು, ಕೊಡಗಿನಲ್ಲಿ ಸಾವು ನೋವುಗಳು ಸಂಭವಿಸಿದ್ದರೂ, ಟಿಪ್ಪು ಜಯಂತಿಯನ್ನು ಮಾಡಿಯೇ ತೀರುತ್ತೇವೆ ಎನ್ನುವ ಸರ್ಕಾರದ ಈ ನಿರ್ಧಾರ ಖಂಡನೀಯ.
ಹಾಗಾಗಿ ಕೊಡಗಿನಲ್ಲಿ ನಡೆಯುವ ಟಿಪ್ಪು ಜಯಂತಿಗೆ ವಿರೋಧವಾಗಿ ಟಿಪ್ಪು ಜಯಂತಿ ವಿರೋಧ ಹೋರಾಟ ಸಮಿತಿಯು ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ ಹಿಂದೂ ಜಾಗರಣ ವೇದಿಕೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಹಿಂದೂ ಜಾಗರಣ ವೇದಿಕೆಯ ಮಡಿಕೇರಿ ತಾಲೂಕು ಅಧ್ಯಕ್ಷ ಪೊನ್ನಪ್ಪ ಹಾಗೂ ತಾಲೂಕು ಸಂಚಾಲಕ ಮಹೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
* ಕರ್ನಾಟಕ ರಾಜ್ಯ ಸರಕಾರ ತಾ. 10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಆಚರಣೆಗೆ ಕೊಡಗು ಜಿಲ್ಲಾ ಬಿ.ಎಂ.ಎಸ್. ಕಾರ್ಮಿಕ ಸಂಘಟನೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಬಿ.ಎಂ.ಎಸ್.ನ ಘಟಕಗಳಾದ ಬಿ.ಎಂ.ಎಸ್. ಆಟೋ ಘಟಕ, ಕಟ್ಟಡ ಕಾರ್ಮಿಕರ ಘಟಕ, ಟ್ಯಾಕ್ಸಿ ವಾಹನ ಚಾಲಕರ ಘಟಕ, ತೋಟಗಾರಿಕಾ ಘಟಕ, ವೈದ್ಯಕೀಯ ಘಟಕಗಳು ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯ ನೇತೃತ್ವದ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿ ಹೋರಾಟದಲ್ಲಿ ಪಾಲ್ಗೊಳ್ಳಲಿವೆ ಎಂದು ಪ್ರಕಟಣೆ ತಿಳಿಸಿದೆ.
ಗಡಿಪಾರು ಮಾಡಲು ಆಗ್ರಹ
ಪೊನ್ನಂಪೇಟೆ : ಇದೇ ತಿಂಗಳ 10ರಂದು ಆಚರಿಸಲ್ಪಡುವ ‘ಟಿಪ್ಪು ಸುಲ್ತಾನ್ ಜಯಂತಿ’ ಎಲ್ಲಾ ಜಯಂತಿಗಳಂತೆ ಸರಕಾರಿ ಕಾರ್ಯಕ್ರಮವಾಗಿದೆ. ಶಾಸನಬದ್ದವಾಗಿ ಜಾರಿಗೆ ಬಂದ ಸರಕಾರವೊಂದು ಆಚರಿಸುವ ಯಾವದೇ ಜಯಂತಿಯನ್ನು ವಿರೋಧಿಸುವದು ಉತ್ತಮ ನಾಗರಿಕರ ಲಕ್ಷಣವಲ್ಲ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಆಪಟ್ಟೀರ ಎಸ್. ಮೊಣ್ಣಪ್ಪ ಅಭಿಪ್ರಾಯಿಸಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಗಡಿಪಾರು ಮಾಡುವಂತೆ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಶಾಂತಿ ಕಾಪಾಡಲು ಮನವಿ
ಪ್ರತಿವರ್ಷದಂತೆ ಈ ಬಾರಿ ಕೂಡ ರಾಜ್ಯ ಸರ್ಕಾರದ ವತಿಯಿಂದ ರಾಜ್ಯದಾದ್ಯಂತ ಟಿಪ್ಪು ಜಯಂತಿ ಯನ್ನು ಆಚಾರಿಸಲಾಗುತ್ತಿದೆ. ಇದನ್ನೆ ನೆಪಮಾಡಿಕೊಂಡು ಕೆಲವರು ಆಶಾಂತಿಯ ವಾತಾವರಣವನ್ನು ಸೃಷ್ಟಿಸಲು ಯತ್ನಿಸುತ್ತಿದ್ದು, ಕೊಡಗಿನ ಜನತೆ ಯಾವದೇ ವದಂತಿಗಳಿಗೆ ಕಿವಿ ಗೊಡದೆ ಶಾಂತಿಯನ್ನು ಕಾಪಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಾಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾದ ಕೆ.ಎ. ಯಾಕುಬ್ ಮನವಿ ಮಾಡಿದ್ದಾರೆ.