*ಗೋಣಿಕೊಪ್ಪಲು, ನ. 8: ಟಿಪ್ಪು ಜಯಂತಿಯನ್ನು ವಿರೋಧಿಸಿ ಪೊನ್ನಂಪೇಟೆ ಕೊಡವ ಸಮಾಜ ಹಾಗೂ ಅದರ ಅಧೀನದಲ್ಲಿರುವ 8 ಕೊಡವ ಸಮಾಜಗಳು 50ಕ್ಕೂ ಅಧಿಕ ವಾಹನಗಳಲ್ಲಿ ಜಾಥಾ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.ಪೊನ್ನಂಪೇಟೆ ಕೊಡವ ಸಮಾಜದಿಂದ 8 ಕೊಡವ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಪ್ಪುಪಟ್ಟಿ ಧರಿಸಿ ವೀರಾಜಪೇಟೆ ಯವರೆಗೆ ವಾಹನ ಜಾಥಾ ನಡೆಸಿ ತಹಶೀಲ್ದಾರ್ ಗೋವಿಂದ ರಾಜು ಅವರಿಗೆ ಮನವಿ ಸಲ್ಲಿಸಿ ಜಯಂತಿ ಆಚರಿಸಲು ವಿರೋಧ ವ್ಯಕ್ತಪಡಿಸಿದರು.ನೂರಕ್ಕೂ ಅಧಿಕ ಪ್ರತಿಭಟನಾ ಕಾರರು ವಾಹನ ಜಾಥಾದಲ್ಲಿ ಪಾಲ್ಗೊಂಡಿದ್ದರು.ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ ಕೊಡವರನ್ನು ಹತ್ಯೆಮಾಡಿ ಕೊಡವ ಸಂಸ್ಕøತಿಯನ್ನು ನಾಶ ಮಾಡಿದ ಟಿಪ್ಪು ಜಯಂತಿ ಆಚರಣೆಯನ್ನು ಕೊಡಗಿನ ಜನತೆ ವಿರೋಧಿಸುತ್ತಾರೆ ಎಂದರು.

ರಾಷ್ಟ್ರೀಯ ಕಾಫಿ ಹೋರಾಟ ಸಮಿತಿ ಸಂಚಾಲಕ ಎಂ.ಎಂ. ರವೀಂದ್ರ ಮಾತನಾಡಿ, ಟಿಪ್ಪು ಒಬ್ಬ ಮತಾಂಧ. ಕೊಡವರನ್ನು ಮತಾಂತರಗೊಳಿಸಿ ಕೊಡವ ಮುಸ್ಲಿಂರಾಗಿ ಪರಿವರ್ತಿಸಿದ ಕುಖ್ಯಾತಿ ಹೊಂದಿದ್ದಾನೆ. ಇಂತಹ ವ್ಯಕ್ತಿಯ ಜನ್ಮದಿನಾಚರಣೆಗೆ ಸರಕಾರ ಮುಂದಾಗಿರುವದರ ಹಿಂದೆ ಮತಬ್ಯಾಂಕಿನ ಷಡ್ಯಂತ್ರ ಅಡಗಿದೆ ಎಂದು ದೂರಿದರು.