ಮಡಿಕೇರಿ, ನ. 8 : ತಾ. 10ರಂದು (ನಾಳೆ) ನಡೆಯಲಿರುವ ಟಿಪ್ಪು ಜಯಂತಿ ಹಿನ್ನೆಲೆ ಕೊಡಗು ಜಿಲ್ಲೆಯಾದ್ಯಂತ ಸೆಕ್ಷನ್ 144 ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35ರಡಿಯಲ್ಲಿ ತಾ. 9ರ (ಇಂದು) ಬೆಳಿಗ್ಗೆ 6 ಗಂಟೆಯಿಂದ ತಾ. 11ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ಈ ಸಂಬಂಧ ಜಿಲ್ಲಾಡಳಿತದಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಹಾಗೆಯೇ ವೀರಾಜಪೇಟೆಯ ತಾಲೂಕು ಕಚೇರಿಯಲ್ಲಿ ಮತ್ತು ಸೋಮವಾರ ಪೇಟೆಯ ಜೂನಿಯರ್ ಕಾಲೇಜಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಟಿಪ್ಪು ಜಯಂತಿ ನಿಗದಿತ ಸಮಯದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕರ್ನಾಟಕ ಸರ್ಕಾರದ ಆದೇಶದಂತೆ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ. ಯಾರು ಸಹ ಆತಂಕಪಡುವ ಅಗತ್ಯವಿಲ್ಲ. ಇತರೆ ಜಯಂತಿಗಳಂತೆ ಈ ಜಯಂತಿಯೂ ಜರುಗಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ

(ಮೊದಲ ಪುಟದಿಂದ) ಜನಜಂಗುಳಿ ತಪ್ಪಿಸಲು ಶುಕ್ರವಾರದ ಸಂತೆಯನ್ನು ರದ್ದುಗೊಳಿಸಲಾಗಿದ್ದು,

ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಎಸ್ಪಿ ಹೇಳಿಕೆ : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ತಾ. 10 ರಂದು ಯಾವದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಕಾರ್ಯ ಕೈಗೊಳ್ಳಲಾಗಿದೆ ಎಂದರು. ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್ ಪೋಸ್ಟ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಒಟ್ಟು 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿರುತ್ತದೆ ಎಂದು ಅವರು ಮಾಹಿತಿ ನೀಡಿದರು.

ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಬರುವಂತಹ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ 60 ಆಂತರಿಕ ವಿಶೇಷ ಚೆಕ್ ಪೋಸ್ಟ್‍ಗಳು ಪೊಲೀಸ್ ಠಾಣಾ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ. ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆಗಳಲ್ಲಿ ಒಟ್ಟು 249 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಿಸಲಾಗಿದ್ದು, 1 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 8 ಡಿವೈಎಸ್‍ಪಿಗಳು, 23 ಪೊಲೀಸ್ ಇನ್ಸ್‍ಪೆಕ್ಟರ್‍ಗಳು, 68 ಸಬ್ ಇನ್ಸ್‍ಪೆಕ್ಟರ್‍ಗಳು, 113 ಎಎಸ್‍ಐಗಳು ಹಾಗೂ 1500 ಪೊಲೀಸ್ ಸಿಬ್ಬಂದಿಗಳನ್ನು ಮಹಿಳಾ ಆರಕ್ಷಕರನ್ನು ಒಳಗೊಂಡಂತೆ ನಿಯೋಜಿಸಲಾಗಿದೆ. ಅಲ್ಲದೆ, 27 ಡಿಎಆರ್ ತುಕಡಿಗಳು, 15 ಕೆಎಸ್‍ಆರ್‍ಪಿ ತುಕಡಿಗಳು ಹಾಗೂ ಕ್ಷಿಪ್ರ ಕಾರ್ಯಪಡೆಯ ಒಂದು ತುಕಡಿ ಒಳಗೊಂಡಿದೆ ಎಂದರು.

ಹಾಗೆಯೇ 100 ವಾಹನಗಳನ್ನು ದಿನದ 24 ಗಂಟೆ ಗಸ್ತಿಗೆ ನೇಮಿಸಲಾಗಿರುತ್ತದೆ. ಇದಲ್ಲದೇ ಅರಣ್ಯ ಇಲಾಖೆಯ ವತಿಯಿಂದ 14 ರ್ಯಾಪಿಡ್ ರೆಸ್‍ಪಾನ್ಸ್ ತಂಡವನ್ನು ಹಾಗೂ 75 ಸಿಬ್ಬಂದಿಗಳನ್ನು ಪೊಲೀಸರೊಂದಿಗೆ ಸಹಕರಿಸಲು ನಿಯೋಜಿಸಲಾಗಿದೆ. ಕಂದಾಯ ಇಲಾಖೆಯ ವತಿಯಿಂದ 16 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ಎಲ್ಲಾ ಹೋಬಳಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್, ಪೊಲೀಸ್ ವೃತ್ತ ನಿರೀಕ್ಷಕರುಗಳಾದ ಐ.ಪಿ. ಮೇದಪ್ಪ, ಮಹೇಶ್ ಇತರರು ಇದ್ದರು.

ಶಾಂತಿ ಸಭೆ : ಸರ್ಕಾರದ ನಿರ್ದೇಶನದಂತೆ ತಾ. 10 ರಂದು ಟಿಪ್ಪು ಜಯಂತಿಯನ್ನು ಜಿಲ್ಲಾಡಳಿತದಿಂದ ಆಚರಿಸಲಾಗುತ್ತಿದ್ದು, ಶಾಂತಿ ಸುವ್ಯವಸ್ಥೆಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಈ ಮುನ್ನ ನಡೆದ ಶಾಂತಿ ಸಭೆಯಲ್ಲಿ ಕೋರಿದ್ದಾರೆ. ಧಾರ್ಮಿಕ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಶಾಂತಿ ಸುವ್ಯವಸ್ಥೆಗೆ ಹೆಸರಾದ ಕೊಡಗು ಜಿಲ್ಲೆಯಲ್ಲಿ ಅಶಾಂತಿ ಉಂಟಾಗಬಾರದು. ಆ ನಿಟ್ಟಿನಲ್ಲಿ ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, ಆ ದಿಸೆಯಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಭದ್ರತೆ ಕೊಡುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಆ ದಿಸೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಯಾರೂ ಸಹ ಆತಂಕಪಡುವ ಅಗತ್ಯವಿಲ್ಲ, ಜೊತೆಗೆ ಭಯದ ವಾತಾವರಣವೂ ಇಲ್ಲ ಎಂದು ಹೇಳಿದರು.

ಜಿಲ್ಲೆಗೆ ಯಾವದೇ ರೀತಿಯ ಕಳಂಕ ಉಂಟಾಗದಂತೆ, ಎಲ್ಲರೂ ಒಟ್ಟಿಗೆ ಸೇರಿ ಶಾಂತಿ ಕಾಪಾಡಲು ಸಹಕರಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಅವರು ಕೋರಿದರು. ಶಾಂತಿ ಸಭೆಯಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಸೇರಿದಂತೆ ಇತರರು ಮಾತನಾಡಿದರು.

ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳ ಸಭೆ : ಶಾಂತಿ ಸಭೆ ಬಳಿಕ ಸೆಕ್ಟರ್ ಮ್ಯಾಜಿಸ್ಟ್ರೇಟ್‍ಗಳ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಜಿಲ್ಲೆಯ 16 ಹೋಬಳಿಗೆ ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳನ್ನು ನಿಯೋಜಿಸಲಾಗಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳು ತಮ್ಮ ವ್ಯಾಪ್ತಿಯ ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ಕರ್ತವ್ಯ ನಿರ್ವಹಣೆ ಮಾಡುವಂತೆ ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಸೆಕ್ಟರ್ ಮ್ಯಾಜಿಸ್ಟ್ರೇಟರ್‍ಗಳು ತಮ್ಮ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸುವದು, ಜೊತೆಗೆ ಯಾವದೇ ನ್ಯೂನ್ಯತೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ತಿಳಿ ಹೇಳಿದರು.