ನಾಪೆÇೀಕ್ಲು, ನ. 8: ಪಾಲೆಮಾಡು ಕಾಲೋನಿ ನಿವಾಸಿಗಳ ಬೇಡಿಕೆಗೆ ಮಾಜಿ ಮಂತ್ರಿ ಜೀವಿಜಯ ಅವರ ನೇತೃತ್ವದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.

ಪಾಲೆಮಾಡುವಿನಲ್ಲಿ ಬಹುಜನ ಕಾರ್ಮಿಕ ಸಂಘದ ವತಿಯಿಂದ ಬೇಡಿಕೆ ಈಡೇರಿಕೆಗಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಲವಾರು ವರ್ಷಗಳಿಂದ ಇಲ್ಲಿ ನೆಲೆಯೂರಿರುವ ಬಡ ವರ್ಗದ ಪೈಸಾರಿ ನಿವಾಸಿಗಳಿಗೆ ಸೂಕ್ತವಾದ ಭರವಸೆಯನ್ನು ನೀಡಿ ಅದರ ಸಾಕಾರತೆಗೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.

ಅಭಿವೃದ್ಧಿಯತ್ತ ಕೊಡಗು ಜಿಲ್ಲೆ ಸಾಗಬೇಕು. ಆದರೆ ಬಡವರ ಕಣ್ಣೀರಿನಲ್ಲಿ ಯಾವ ಅಭಿವೃದ್ಧಿ ಯಾದರೂ ಅದು ಸೂತಕದ ಮನೆಯಂತಾಗಿರುತ್ತದೆ ಎಂದರು. ಮನುಷ್ಯರು ವಾಸಿಸಲು ಸೂಕ್ತವಾದ ಜಾಗ ಅಗತ್ಯ. ಆದರೆ ಸ್ಟೇಡಿಯಂ ಎಲ್ಲಿ ಬೇಕಾದರೂ ನಿರ್ಮಿಸಬಹುದು. ಬಡಪಾಯಿಗಳ ವಾಸ ಸ್ಥಳದಲ್ಲಿ ಸ್ಟೇಡಿಯಂ ನಿರ್ಮಿಸಲು ಉದ್ದೇಶಿಸಿರುವದು ಸೂಕ್ತವಾದ ಕ್ರಮವಲ್ಲ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ, ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಎಂ.ಹೆಚ್.ಮತಿನ್ ಇದ್ದರು.