ಮಡಿಕೇರಿ, ನ. 8: ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರಿನಲ್ಲಿ ವಿಶಾಲ 38 ಸೆಂಟ್ ನಿವೇಶನದಲ್ಲಿ ಇಂದು ರಾಜ್ಯದ 106ನೇ ಕೊಡಗು ಜಿಲ್ಲಾ ಹಾಪ್ ಕಾಮ್ಸ್ನ ಸಂಸ್ಥೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿತು.1967 ರಿಂದ ಜಿಲ್ಲೆಯಲ್ಲಿ ಹಾಪ್ ಕಾಮ್ಸ್ ಚಟುವಟಿಕೆಯಿದ್ದು, ಪ್ರಸಕ್ತ 50ನೇ ವರ್ಷದ ಸುವರ್ಣ ಸಂಭ್ರಮ ವೇಳೆ ಸ್ವಂತ ನೆಲೆ ಕಂಡುಕೊಳ್ಳುತ್ತಿರುವದು ಹೆಮ್ಮೆಯ ವಿಚಾರವೆಂದು, ಭೂಮಿ ಪೂಜೆ ನೆರವೇರಿಸಿದ ಶಾಸಕ ಕೆ.ಜಿ. ಬೋಪಯ್ಯ ನುಡಿದರು.ತಾವು ವಿಧಾನಸಭಾ ಅಧ್ಯಕ್ಷರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಶಯದಂತೆ ಎಲ್ಲ ಜಿಲ್ಲೆಗಳಲ್ಲಿ ರೈತರ ಹಿತದೃಷ್ಟಿಯಿಂದ ಹಾಪ್ ಕಾಮ್ಸ್ ಮಾರಾಟ ಮಳಿಗೆಗೆ ಆದ್ಯತೆಯೊಂದಿಗೆ ಕೊಡಗಿಗೆ ರೂ. 6 ಕೋಟಿ ಅನುದಾನ ಘೋಷಿಸಿದ್ದಾಗಿ ವಿವರಿಸಿದರು. ಅನಂತರದಲ್ಲಿ ಬದಲಾದ ಸರಕಾರದಿಂದ ಈ ಅನುದಾನ 2.25 ಕೋಟಿಗೆ ಇಳಿಮುಖಗೊಂಡಿದೆ ಎಂದು ಅವರು ಮಾರ್ನುಡಿಯುತ್ತಾ, ಈ ಹಾಪ್ ಕಾಮ್ಸ್ ಕಟ್ಟಡ ಶೀಘ್ರ ಪೂರ್ಣ ಗೊಂಡು ರೈತರಿಗೆ ಆಸರೆಯಾಗಲೆಂದು ಆಶಿಸಿದರು.
(ಮೊದಲ ಪುಟದಿಂದ) ಅಲ್ಲದೆ, ಮೂಡಾದಿಂದ ಕಾಮಗಾರಿಗೆ ಅಗತ್ಯ ಸಹಕಾರ ನೀಡುವಂತೆ ಸಲಹೆ ಮಾಡಿದರು. ಸಂಘದ ಅಧ್ಯಕ್ಷ ಬಿ.ಎ. ರಮೇಶ್ ಚಂಗಪ್ಪ, ನಿವೇಶನ ಪಡೆಯುವಲ್ಲಿ ಅಂದು ವಿಧಾನ ಸಭಾ ಅಧ್ಯಕ್ಷರಾಗಿದ್ದ ಕೆ.ಜಿ. ಬೋಪಯ್ಯ ನೀಡಿದ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿ, ಆದಷ್ಟು ಬೇಗ ಕಟ್ಟಡ ನಿರ್ಮಿಸಿ ಗ್ರಾಹಕರು ಹಾಗೂ ರೈತರಿಗೆ ಸಂಸ್ಥೆ ಸ್ಪಂದಿಸುವ ಭರವಸೆ ನೀಡಿದರು.
ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಕಾನೂನಿನ ತೊಡಕುಗಳನ್ನು ಬೊಟ್ಟು ಮಾಡುತ್ತಾ, ಹಾಪ್ ಕಾಮ್ಸ್ ಕಟ್ಟಡಕ್ಕೆ ಸಹಕಾರದ ಭರವಸೆ ನೀಡಿದರು. ಸಂಘದ ಉಪಾಧ್ಯಕ್ಷ ಪಿ.ಎಸ್. ರಮೇಶ್, ವ್ಯವಸ್ಥಾಪಕ ನಿರ್ದೇಶಕ ಚಕ್ಕೇರ ಪ್ರಮೋದ್, ನಿರ್ದೇಶಕರುಗಳಾದ ರಾಜಾ ನಂಜಪ್ಪ, ಮನು ಮಹೇಶ್, ತಾಕೇರಿ ಪೊನ್ನಪ್ಪ, ಉಮೇಶ ರಾಜ್ ಅರಸ್, ಬೇಬಿ ಪೂವಯ್ಯ, ಲೀಲಾ ಮೇದಪ್ಪ, ಕಮಲ ಮುರುಗೇಶ್, ಅಣ್ಣು ನಾಯಕ್, ಗುತ್ತಿಗೆದಾರ ಆನಂದ ಕುಮಾರ್, ನಾಗೇಶ್ ಕುಂದಲ್ಪಾಡಿ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ, ಸಹಕಾರ ಒಕ್ಕೂಟ ಅಧ್ಯಕ್ಷ ಮನು ಮುತ್ತಪ್ಪ, ಕಾಫಿ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಎಂ.ಬಿ. ದೇವಯ್ಯ, ಕಾರ್ಯದರ್ಶಿ ರೇಷ್ಮಾ ಸೇರಿದಂತೆ ಇತರರು ಪಾಲ್ಗೊಂಡಿದ್ದು, ಗೋಪಾಲಕೃಷ್ಣ ಭಟ್ ಪೂಜೆ ನೆರವೇರಿಸಿದರು.