ಮಡಿಕೇರಿ, ನ. 8: ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿ ಒಂದು ವರ್ಷವಾದ ಹಿನೆÀ್ನಲೆಯಲ್ಲಿ ಕಾಂಗ್ರೆಸ್ ವತಿಯಿಂದ ಬುಧವಾರ ಕರಾಳ ದಿನವನ್ನು ಆಚರಿಸಲಾಯಿತು. ಇದರ ಅಂಗವಾಗಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಮತ್ತು ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ‘ಸಂಪಾಜೆಗೆ ಪೋಯಿ’ ಬೃಹತ್ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಸುಳ್ಯ ನಗರದಿಂದ ಬುಧವಾರ ಬೆಳಿಗ್ಗೆ ಆರಂಭಗೊಂಡ ಪಾದಯಾತ್ರೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು. ಚಂಡೆ, ವಾದ್ಯ ಮೇಳ, ಹುಲಿ ವೇಷ, ಕೀಲು ಕುದುರೆ, ಬೊಂಬೆಯಾಟಗಳು ಪಾದಯಾತ್ರೆಗೆ ಸಾಥ್ ನೀಡಿದವು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಮತ್ತು ನೋಟು ಅಮಾನ್ಯೀಕರಣದ ವಿರುದ್ಧ ಘೋಷಣೆ ಕೂಗುತ್ತಾ ಪಾದ ಯಾತ್ರೆಯಲ್ಲಿ ಪಾಲ್ಗೊಂಡರು. ಜ್ಯೋತಿ ವೃತ್ತದಿಂದ ಪಾದಯಾತ್ರೆ ಆರಂಭ ಗೊಂಡು ಖಾಸಗಿ ಬಸ್ ನಿಲ್ದಾಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಪಾದಯಾತ್ರೆಗೆ ಚಾಲನೆ ನೀಡಿದರು. ಕೆಪಿಸಿಸಿ ಪ್ರಧಾನ

(ಮೊದಲ ಪುಟದಿಂದ) ಕಾರ್ಯದರ್ಶಿ ಮಹಮ್ಮದ್ ಹುಸೇನ್, ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಸಚಿವೆ ಸುಮಾ ವಸಂತ್, ಕೆಪಿಸಿಸಿ ಸುಳ್ಯ ಬ್ಲಾಕ್ ಉಸ್ತುವಾರಿ ಸವಿತಾ ರಮೇಶ್ ಗೌಡ, ಕೆಪಿಸಿಸಿ ಸದಸ್ಯರಾದ ಅರುಣ್ ಮಾಚಯ್ಯ, ಎಂ.ವೆಂಕಪ್ಪ ಗೌಡ, ಡಾ.ಬಿ.ರಘು, ಕೆಪಿಸಿಸಿ ಸದಸ್ಯೆ ಹಾಗೂ ಚಿತ್ರ ನಟಿ ಭಾವನಾ, ಕೊಡಗು ಕಾಂಗ್ರೆಸ್ ಅಧ್ಯಕ್ಷ ಶಿವಮಾದಪ್ಪ, ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯನ್.ಜಯಪ್ರಕಾಶ್ ರೈ, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಕರಿಕೆ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಾಂ, ಸುಳ್ಯ ಬ್ಲಾಕ್ ಮಹಿಳಾ ಘಟಕದ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಕೋಲ್ಚಾರ್, ಮತ್ತಿತರ ಪ್ರಮುಖರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಳ್ಯದಿಂದ ಹೊರಟ ಪಾದಯಾತ್ರೆಗೆ ಅರಂಬೂರು, ಪೆರಾಜೆ, ಅರಂತೋಡು, ಗೂನಡ್ಕ, ಕಲ್ಲುಗುಂಡಿ, ಸಂಪಾಜೆ ಮತ್ತಿತರ ಕಡೆಗಳಲ್ಲಿ ಸ್ವಾಗತ ನೀಡಲಾಯಿತು. ಅಲ್ಲಲ್ಲಿ ಸ್ವಾಗತ ಸಭೆಗಳು ನಡೆಯಿತು. ಸುಳ್ಯದಿಂದ ಹೊರಟು 25 ಕಿ.ಮಿ. ಸಂಚರಿಸಿದ ಪಾದಯಾತ್ರೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಸಂಪಾಜೆಯಲ್ಲಿ ಸಮಾಪನಗೊಂಡಿತು.

ನೋಟು ಅಮಾನ್ಯದಿಂದ ಜನರು ಬೀದಿಗೆ

ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿದ ಕಾರಣ ಕಳೆದ ಒಂದು ವರ್ಷದಲ್ಲಿ ಜನ ಸಾಮಾನ್ಯರ ಬದುಕು ದುಸ್ತರವಾಗಿದ್ದು ಆರ್ಥಿಕ ಸಮಸ್ಯೆಯಿಂದ ಜನರು ಬೀದಿಗೆ ಬೀಳುವಂತಾಗಿದೆ ಎಂದು ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು. ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.