ಶ್ರೀಮಂಗಲ, ನ. 8: ದೇಶದ ಜನರ ಆರೋಗ್ಯಕ್ಕೆ ದೇಶದ ಮಣ್ಣಿನ ಆರೋಗ್ಯವೇ ಮುಖ್ಯವಾಗಿದೆ. ಮಣ್ಣಿನ ಆರೋಗ್ಯವನ್ನು ನೋಡಿಕೊಂಡರೆ ಬೆಳೆಯ ಆರೋಗ್ಯ ನೋಡಿಕೊಳ್ಳುವ ಅಗತ್ಯತೆ ಇಲ್ಲ. ಯಾವದೇ ಆಹಾರ ಪದಾರ್ಥ ಮಣ್ಣಿನ ಮೂಲಕವೇ ಉತ್ಪದನೆಯಾಗಬೇಕು. ಯಾವದೇ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನ ಕಾರ್ಖಾನೆಯಲ್ಲಿ ಉತ್ಪಾದನೆ ಮಾಡಲು ಸಾಧ್ಯವಿಲ್ಲದ ಕಾರಣ ಕೃಷಿ ಹಾಗೂ ತೋಟಗಾರಿಕಾ ಬೆಳೆ ಬೆಳೆಯುವ ಮಣ್ಣಿನ ಆರೋಗ್ಯದ ಕಡೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕೆಂದು ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ (ಐ.ಸಿ.ಎ.ಆರ್) ಮುಖ್ಯಸ್ಥರು ಹಾಗೂ ಪ್ರಧಾನ ವಿಜ್ಞಾನಿಯಾದ ಎಂ.ಎನ್.ಗಣೇಶ್ ಮೂರ್ತಿ ಸಲಹೆ ನೀಡಿದರು. ಗೋಣಿಕೊಪ್ಪ ಕೆವಿಕೆಯಲ್ಲಿ 30 ಟನ್ ಉತ್ಪಾದನೆ ಸಾಮಥ್ರ್ಯ ಹೊಂದಿದ್ದು ಬೆಂಗಳೂರು ಐಸಿಎಆರ್ ಘಟಕ 500 ಟನ್ ಉತ್ಪಾದನೆ ಸಾಮಥ್ರ್ಯ ಹೊಂದಿದೆ. ಮುಂದಿನ ದಿನಗಳಲ್ಲಿ ದ್ರವರೂಪದ ಎಎಂಸಿ ಉತ್ಪಾದಿಸಲು ಗೋಣಿಕೊಪ್ಪ ಕೆವಿಕೆಯ ಮುಖ್ಯಸ್ಥ ಸಾಜು ಜಾರ್ಜ್ ಅವರಿಗೆ ಸಲಹೆ ನೀಡಿದರು.

ಗೋಣಿಕೊಪ್ಪದ ಐ.ಸಿ.ಎ.ಆರ್ ಕೃಷಿ ವಿಜ್ಞಾನ ಕೇಂದ್ರ (ಕೆ.ವಿ.ಕೆ) ಗೋಣಿಕೊಪ್ಪಲಿನ ಪುತ್ತರಿ ರೈತ ಉತ್ಪಾದಕ ಸಂಸ್ಥೆ, ವೀರಾಜಪೇಟೆ ತಾಲ್ಲೂಕು ಕೃಷಿ ಇಲಾಖೆಯ ಆತ್ಮ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಸಂಮಿಶ್ರಣ ಜೀವಾಣು, (ಎ.ಎಂ.ಸಿ) ಬಗ್ಗೆ ಮತ್ತು ಮಣ್ಣಿನ ಆರೋಗ್ಯದ ಬಗ್ಗೆ ನಡೆದ ಬೆಳೆಗಾರರ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಣ್ಣು, ತೋಟ, ಬೆಳೆ, ಪ್ರಾಣಿ ಹಾಗೂ ಮನುಷ್ಯರ ಆರೋಗ್ಯವು ಒಂದು ವಿಧದ ಸರಪಳಿಯಾಗಿದ್ದು, ಇವೆಲ್ಲದರ ಆರೋಗ್ಯವು ಮಣ್ಣಿನ ಆರೋಗ್ಯದ ಮೇಲೆ ಅವಲಂಭಿತವಾಗಿದೆ ಎಂದು ಅಭಿಪ್ರಾಯಪಟ್ಟ ಅವರು ಎ.ಎಂ.ಸಿ. ಯಲ್ಲಿ ಮೂರು ವಿಧದ ಜೀವಾಣುಗಳಿದ್ದು ಒಂದಕ್ಕೊಂದು ಸರಿ ಹೊಂದುವ ಜೀವಾಣು ಇದಾಗಿದ್ದು, ಮಣ್ಣಿನ ಆರೋಗ್ಯವನ್ನು ಮತ್ತು ಬೆಳೆಗೆ ತಗಲುವ ರೋಗಾಣು ವಿರುದ್ಧ ಇವು ಹೋರಾಟ ಮಾಡುವ ಶಕ್ತಿ ಹೊಂದಿದೆ. ಈ ಎ.ಎಂ.ಸಿಯಲ್ಲಿ ಸುಡೋಮಾನಸ್, ತೈವಾನಿಸಸ್, ಬೈಸಿಲಾಸ್ ಆರ್ಯಭಟಾಯಮ್, ಅಸಿಟೋ ಬ್ಯಾಕ್ಟರ್ ಎಂಬ ಸೂಕ್ಷ್ಮ ಜೀವಾಣುಗಳು ಬೆಳೆಗಳಿಗೆ ಪೋಷಕಾಂಶವನ್ನು ಹೀರಿಕೊಡುವ ಹಾಗೂ ಬೆಳೆಗಳಿಗೆ ರೋಗಗಳನ್ನು ಹರಡುವ ರೋಗಾಣು ವಿರುದ್ಧ ಹೋರಾಡುತ್ತದೆ ಮತ್ತು ಮಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ಹೇಳಿದರು. ಬೆಂಗಳೂರಿನ ಎ.ಎಸ್.ಎಸ್.ಆರ್ ನಿಂದ 2005ರಲ್ಲಿ ಎ.ಎಂ.ಸಿ.ಯ ಬಗ್ಗೆ ಸಂಶೋಧನೆಯನ್ನು ಕೈಗೊಂಡು ಸುಮಾರು 10 ವರ್ಷಗಳ ಕಾಲ ಈ ಬಗ್ಗೆ ಅಧ್ಯಯನ ನಡೆಸಿ ಸಾವಿರಾರು ಸೂಕ್ಷ್ಮಾಣುಜೀವಿಗಳ ಬಗ್ಗೆ ಸಂಶೋಧನೆ ಮಾಡಿ ಕೇವಲ ಮೂರು ಸೂಕ್ಷ್ಮಾಣುಗಳನ್ನು ಹುಡುಕಿ ತೆಗೆದು ಮಣ್ಣಿನ ಆರೋಗ್ಯವನ್ನು ವೃದ್ಧಿಸುವ, ಬೆಳೆಗಳಿಗೆ ಮಾರಕ ರೋಗಗಳನ್ನು ಹರಡುವ ರೋಗಾಣುಗಳ ವಿರುದ್ಧ ಹೋರಾಡುವ ಹಾಗೂ ಮೂರು ಜೀವಾಣುಗಳು ಪ್ರತ್ಯೇಕವಾದ ಅನುಕೂಲ ಒದಗಿಸುವದರೊಂದಿಗೆ ಒಂದಾಗಿ ಬೆರೆಯುವ ಸೂಕ್ಷ್ಮಾಣುಗಳನ್ನು ಸಂಶೋಧನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐ.ಸಿ.ಎ.ಆರ್)ನ ಇನ್ನೋರ್ವ ಪ್ರಧಾನ ವಿಜ್ಞಾನ ಸೆಲ್ವಕುಮಾರ್ ಮಾತನಾಡಿ ಎ.ಎಂ.ಸಿ ಬಳಕೆಯಿಂದ ಮಣ್ಣಿನ ಆರೋಗ್ಯ ಫಲವತ್ತತೆಯಾಗುತ್ತದೆ. ನಿರಂತರವಾಗಿ ಮಣ್ಣುಗಳಿಗೆ ರಾಸಾಯನಿಕ ಬಳಸುವದರಿಂದ ಮಣ್ಣಿನ ಆರೋಗ್ಯ ಹಾಳಾಗಿದೆ. ವರ್ಷಕ್ಕೆ 2 ರಿಂದ 3 ಬಾರಿ ಎ.ಎಂ.ಸಿ.ಯನ್ನು ಬೆಳೆಗಳಿಗೆ ಮತ್ತು ಮಣ್ಣಿಗೆ ಬಳಸಬೇಕು. ಇದೀಗ ಪುಡಿ ರೂಪದಲ್ಲಿ ಹಾಗೂ ದ್ರವರೂಪದಲ್ಲಿಯೂ ಸಹ ಈ ಉತ್ಪನ್ನ ಬೆಳೆಗಾರರಿಗೆ ದೊರೆಯುತ್ತಿದೆ ಎಂದು ಮಾಹಿತಿ ನೀಡಿದರು. ಎ.ಎಂ.ಸಿ ಯ ಮಹತ್ವ, ಉಪಯೋಗಿಸುವ ವಿಧಾನ, ಕಾಂಪೋಸ್ಟ್ ತಯಾರಿಕೆಯ ವಿಧಾನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.

ಕೆವಿಕೆಯ ಮುಖ್ಯಸ್ಥ ಸಾಜು ಜಾರ್ಜ್ ಅವರು ಮಾತನಾಡಿ ಎ.ಎಂ.ಸಿ.ಯನ್ನು ಪ್ರಾಯೋಗಿಕವಾಗಿ ತರಕಾರಿ ಹಾಗೂ ಹಣ್ಣುಗಳ ಮೇಲೆ ಬಳಸಲಾಗಿತ್ತು. ಇದೀಗ ಇತರ ತೋಟಗಾರಿಕಾ ಬೆಳೆ ಹಾಗೂ ಕರಿಮೆಣಸಿಗೂ ಬಳಸಲಾಗುತ್ತಿದ್ದು, ಉತ್ತಮ ಫಲಿತಾಂಶ ದೊರೆಯುತ್ತಿದೆ.

ಈ ಬಳಕೆಯ ಪ್ರಯೋಜನದ ಬಗ್ಗೆ ಅರಿತುಕೊಳ್ಳಲು ಹಾಗೂ ಇದರ ಉತ್ಪಾದನೆಯ ಬಗ್ಗೆ ಬೆಳೆಗಾರರಿಂದ ಸಲಹೆ ಸೂಚನೆ ಪಡೆಯಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭ ಬೆಳೆಗಾರರು ಎ.ಎಂ.ಸಿ ಬಳಕೆಯ ಬಗ್ಗೆ ತಮ್ಮ ಅನುಭವವನ್ನು ಕಾರ್ಯಾಗಾರರಲ್ಲಿ ಹಂಚಿಕೊಂಡರು.

ವೇದಿಕೆಯಲ್ಲಿ ಪುತ್ತರಿ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ನಿವೃತ್ತ ಬ್ರೀಗೇಡಿಯರ್ ದೇವಯ್ಯ ಹಾಜರಿದ್ದರು. ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಕೆವಿಕೆ ವಿಜ್ಞಾನಿ ಪ್ರಭಾಕರ್‍ರವರು ಮಾಡಿದರು. ಕೆವಿಕೆ ವಿಜ್ಞಾನಿ ವೀರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.