ಕುಶಾಲನಗರ, ನ. 9: ಸಂಗೊಳ್ಳಿ ರಾಯಣ್ಣ ಕುರುಬರ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಭಕ್ತ ಕನಕದಾಸರ 130ನೇ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು.
ಸ್ಥಳೀಯ ಮಹಾಲಕ್ಷ್ಮೀ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮವನ್ನು ತಾಲೂಕು ಪಂಚಾಯಿತಿ ಸದಸ್ಯ ಡಿ.ಎಸ್. ಗಣೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾಮಾ ಜಿಕ ಪರಿವರ್ತನೆಯ ಚಿಂತನೆಗಳು, ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಮಹಾನ್ ಚೇತನ ಕನಕದಾಸರು ಎಂದು ಸ್ಮರಿಸಿದರು.
ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಕೆ. ವಸಂತ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಕೆ. ಉದಯ ಕುಮಾರ್, ಗೌರವಾಧ್ಯಕ್ಷರು ಗಳಾದ ದೊಡ್ಡಯ್ಯ, ರಂಗೇಗೌಡ, ಕಾರ್ಯದರ್ಶಿ ಬಿ.ಎಸ್. ಮಂಜುನಾಥ್, ಬೆಸೂರು ಗ್ರಾಮ ಪಂಚಾಯಿತಿ ಸದಸ್ಯರಾದ ಸುಜಾತ, ವಾಲ್ನೂರು-ತ್ಯಾಗತ್ತೂರು ಪಂಚಾಯಿತಿ ಉಪಾಧ್ಯಕ್ಷೆ ಕಮಲಮ್ಮ, ಗುಡ್ಡೆಹೊಸೂರು ಪಂಚಾಯಿತಿ ಸದಸ್ಯ ಬಸವರಾಜು, ಪ್ರಮುಖರಾದ ಪ್ರಭಾಕರ್ ಮತ್ತಿತರರು ಇದ್ದರು. ಇದೇ ಸಂದರ್ಭ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ನಮನ ಸಲ್ಲಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಸಮಿತಿ ಸಂಚಾಲಕರಾದ ಜಗದೀಶ್ ಮತ್ತು ಪುನಿತ್ ಅವರಿಂದ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ನಡೆಯಿತು.
ಸಂಘದ ಸಹ ಕಾರ್ಯದರ್ಶಿ ಭರಮಣ್ಣ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು.