ನಾಪೋಕ್ಲು, ನ. 9: ಗ್ರಾಮೀಣ ಕ್ರೀಡಾಕೂಟಗಳಿಂದ ವಿವಿಧ ಜನಾಂಗಗಳ ನಡುವಿನ ಸಾಮರಸ್ಯ ವೃದ್ಧಿಯಾಗಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ವತಿಯಿಂದ ಪಾರಾಣೆ ಮಾದರಿ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ 56ನೇ ವರ್ಷದ ಅಂತರ ಗ್ರಾಮಾಂತರ ಕೈಲು ಮುಹೂರ್ತ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಸಹಕಾರ ಮಂಡಲ ನಿರ್ದೇಶಕ ಹೊಸೂರು ಸತೀಶ್ ಕುಮಾರ್ ಮಾತನಾಡಿ, ಕ್ರೀಡಾ ಕ್ಷೇತ್ರದ ತವರೂರು ಕೊಡಗಿನಲ್ಲಿ ಪಾರಾಣೆ ಕ್ರೀಡಾ ಮಂಡಳಿ 56 ವರ್ಷಗಳಿಂದ ನಿರಂತರವಾಗಿ ಕ್ರೀಡಾಕೂಟ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಮಾತನಾಡಿ, ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ ಅನುದಾನದಲ್ಲಿ ಜಿಲ್ಲೆಗೆ ರೂ. 1.30 ಕೋಟಿ ಬಿಡುಗಡೆಯಾಗಿದೆ ಎಂದರು.

ನಿವೃತ್ತ ಸೂಪರಿಂಡೆಂಟ್ ಆಫ್ ಪೊಲೀಸ್ ಬಲ್ಯಾಟಂಡ ಸಿ. ಮಾಚಯ್ಯ, ಕಾಫಿ ಬೆಳೆಗಾರ ಕನ್ನಂಡ ಮನು ಕಾರ್ಯಪ್ಪ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ, ನಗರಸಭಾ ಸದಸ್ಯ ಅಪ್ಪನೆರವಂಡ ಚುಮ್ಮಿ ದೇವಯ್ಯ, ಬೆಂಗಳೂರು ಕೊಡವ ಸಮಾಜದ ಮಾಜಿ ಉಪಾಧ್ಯಕ್ಷ ಐಚೋಡಿಯಂಡ ದೇವಪ್ಪ, ಉದ್ಯಮಿ ಅರೆಯಡ ಪವಿನ್ ಪೊನ್ನಣ್ಣ ಮಾತನಾಡಿದರು. ಪಾರಾಣೆ ಕೇಂದ್ರ ಕ್ರೀಡಾ ಮಂಡಳಿ ಅಧ್ಯಕ್ಷ ಪಾಡೆಯಂಡ ಕಟ್ಟಿ ಕುಶಾಲಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಟ್ರೋಫಿ ಹಾಗೂ ನಗದು ಬಹುಮಾನಗಳನ್ನು ವಿತರಿಸಲಾಯಿತು. ಸಮಾರಂಭದಲ್ಲಿ ಪಾರಾಣೆ ಕೇಂದ್ರ ಕ್ರೀಡಾಮಂಡಳಿಗೆ ಕೊಡುಗೆ ನೀಡಿದ ಹಿರಿಯರಾದ ನಾಯಕಂಡ ಬೋಪಣ್ಣ ಅವರನ್ನು ಸನ್ಮಾನಿಸಲಾಯಿತು. ಮಮತಾ ಸ್ವಾಗತಿಸಿ, ಎನ್.ಕೆ. ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಸುರಿದ ಮಳೆ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಅಡ್ಡಿಪಡಿಸಿದ್ದು, ಬಹುಮಾನ ವಿತರಣಾ ಕಾರ್ಯಕ್ರಮವನ್ನು ತರಾತುರಿಯಲ್ಲಿ ಮುಗಿಸುವಂತಾಯಿತು.