ಮಡಿಕೇರಿ, ನ. 9: ಕರ್ನಾಟಕ ರಾಜ್ಯ ಸರಕಾರದಿಂದ ಆಚರಿಸಲ್ಪಡುವ ಸುಮಾರು 24 ಮಹಾಪುರುಷರ ಜಯಂತಿಗಳಂತೆ, ಟಿಪ್ಪು ಜಯಂತಿ ಕೂಡ ತಾ. 10 ರಂದು (ಇಂದು) ಆಚರಿಸಲ್ಪಡುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಎಲ್ಲ ಸವಾಲುಗಳೊಂದಿಗೆ ಕೊಡಗಿನ ಜನತೆಯ ಹಿತವನ್ನು ಕಾಪಾಡಲು ಸನ್ನದ್ಧವಿರುವದಾಗಿ ಎಡಿಜಿಪಿ ಭಾಸ್ಕರ ರಾವ್ ಭರವಸೆ ನೀಡಿದ್ದಾರೆ.ಕೊಡಗಿನಲ್ಲಿ ಟಿಪ್ಪು ಜಯಂತಿ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಜ್ಯ ಸರಕಾರದಿಂದ ಜಿಲ್ಲೆಗೆ ನಿಯೋಜನೆ ಗೊಂಡಿರುವ ಅವರು, ಇಂದು ಮಧ್ಯಾಹ್ನ ಆಗಮಿಸುವದರೊಂದಿಗೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರೊಡನೆ ಸಮಾಲೋಚನೆ ನಡೆಸಿದರು. ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕೊಡಗಿನ ಜನತೆ ಶಾಂತಿ ಪ್ರಿಯರಾಗಿದ್ದು,
(ಮೊದಲ ಪುಟದಿಂದ) ಈ ದಿಸೆಯಲ್ಲಿ ಟಿಪ್ಪು ಜಯಂತಿ ಸಂದರ್ಭ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಮನವಿ ಮಾಡಿಕೊಂಡರು.
ಹಿಂದಿನ ನೆನಪು: 20 ವರ್ಷ ಹಿಂದೆ ಕೊಡಗಿನಲ್ಲಿ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಅನುಭವದೊಂದಿಗೆ ಸರಕಾರ ಇಲ್ಲಿ ಪ್ರಸಕ್ತ ಉಸ್ತುವಾರಿಗೆ ನಿಯೋಜಿಸಿರು ವದಾಗಿ ಪ್ರಸ್ತಾಪಿಸಿದ ಅವರು, ಶಾಂತಿಪ್ರಿಯರಾದ ಜಿಲ್ಲೆಯ ಜನತೆ ಯಾವದೇ ಊಹಾಪೋಹಾಗಳಿಗೆ ಕಿವಿಗೊಡದೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಕಾನೂನನ್ನು ಗೌರವಿಸುವಂತೆ ಕಳಕಳಿಯ ಮನವಿ ಮಾಡುತ್ತಾ, ಇಲಾಖೆಯ ಕೋರಿಕೆಯನ್ನು ದೌರ್ಬಲ್ಯವೆಂದು ಪರಿಗಣಿಸದಂತೆ ಮಾರ್ನುಡಿದರು.
ಕೊಡಗಿನ ಶಾಂತಿ ಸುವ್ಯವಸ್ಥೆ ಕಾಪಾಡುವದು ಜನತೆಯ ಕರ್ತವ್ಯವೆಂದು ನೆನಪಿಸಿದ ಅವರು, ಈಗಾಗಲೇ ಸೆ. 144 ಜಾರಿಯಲ್ಲಿದ್ದು, ಕಾನೂನು ಉಲ್ಲಂಘಿಸಿ ಸಾರ್ವಜನಿಕ ಹಿತಕ್ಕೆ ಭಂಗ ಉಂಟುಮಾಡದಂತೆ ತಿಳಿ ಹೇಳುತ್ತಾ, ಶಾಂತಿ ಭಂಗಕ್ಕೆ ಯತ್ನಿಸಿದರೆ ಕಾನೂನು ತನ್ನದೇ ಕ್ರಮಕೈಗೊಳ್ಳಲಿದೆ ಎಂದು ಸೂಚ್ಯವಾಗಿ ನುಡಿದರು.
ಜಿಲ್ಲೆಯಲ್ಲಿ ಆಡಳಿತ ಯಂತ್ರ ಮತ್ತು ಪೊಲೀಸ್ ಇಲಾಖೆಗಳು ತಮ್ಮ ತಮ್ಮ ಕರ್ತವ್ಯ ನಿರ್ವಹಿಸಲಿದ್ದು, ಕೊಡಗಿನ ಜನತೆ, ವಿದ್ಯಾರ್ಥಿ ಸಮೂಹ, ಸಂಘ ಸಂಸ್ಥೆಗಳು, ಶಿಕ್ಷಣ ಕೇಂದ್ರಗಳ ಸಹಿತ ಎಲ್ಲರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಭರವಸೆ ನೀಡುವದಾಗಿ ಎಡಿಜಿಪಿ ಘೋಷಿಸಿದರು.
ಎಂದಿನಂತೆ ಪೋಷಕರು ತಮ್ಮ ಮಕ್ಕಳನ್ನು ಆತಂಕಕ್ಕೆ ಒಳಗಾಗದೆ ಶಾಲಾ-ಕಾಲೇಜುಗಳಿಗೆ ಕಳುಹಿಸುವಂತೆ ಕರೆ ನೀಡಿದ ಅವರು, ಯಾರಿಂದಲೇ ಕಾನೂನು ಉಲ್ಲಂಘಿಸಿದರೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸುವದಾಗಿ ಮಾರ್ನುಡಿದರು. ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್ ಈ ವೇಳೆ ಉಪಸ್ಥಿತರಿದ್ದರು.