ಮಡಿಕೇರಿ, ನ. 9: ಪ್ರಸಕ್ತ 3ನೇ ವರ್ಷದ ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತವು ಕರ್ನಾಟಕ ಸರಕಾರದ ನಿರ್ದೇಶನದಂತೆ ತಯಾರಿಯೊಂದಿಗೆ, ಪರಿಸ್ಥಿಯನ್ನು ಎದುರಿಸಲು ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ವ್ಯಾಪಕ ಕಣ್ಗಾವಲು ಇರಿಸಿದೆ. ಜಿಲ್ಲೆಯ ಕೇಂದ್ರ ಸ್ಥಳ ಮಡಿಕೇರಿ, ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿಗೆ ವೇದಿಕೆ ಸಜ್ಜುಗೊಂಡಿದೆ.ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಕೊಡಗಿನ 16 ಹೋಬಳಿಗಳೊಂದಿಗೆ ಆಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ತಂಡಗಳು ನೂರಾರು ಸಂಖ್ಯೆಯಲ್ಲಿ ಕರ್ತವ್ಯ ನಿರ್ವಹಿಸಲಿದೆ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಈ ಹಂತದಲ್ಲಿಯೇ 16 ಮಂದಿ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ದಿನ ಪೂರ್ತಿ ಕಣ್ಗಾವಲು ಇರಿಸಲಿದ್ದಾರೆ.

ಎಡಿಜಿಪಿ ಭಾಸ್ಕರ್‍ರಾವ್ ನೇತೃತ್ವದೊಂದಿಗೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು, ಕೆಎಸ್‍ಆರ್‍ಪಿ ಕಮಾಂಡೆಂಟ್‍ಗಳು, ರ್ಯಾಪಿಡ್ ಆಕ್ಷನ್ ಪಡೆಯ ಕೇಂದ್ರ ಮೀಸಲು ಪೊಲೀಸ್ ತಂಡ ಸೇರಿದಂತೆ ಜಿಲ್ಲ್ಲೆಯಾದ್ಯಂತ ಸುಮಾರು 2000 ಮಂದಿ ಬಂದೋಬಸ್ತ್‍ನಲ್ಲಿ 24 ಗಂಟೆ ಹಗಲಿರುಳು ಶ್ರಮಿಸಲು ಸಜ್ಜುಗೊಂಡಿದ್ದಾರೆ.

ರಚಿತ ನೇತೃತ್ವ : ಕೇಂದ್ರ ಮೀಸಲು ಪೊಲೀಸ್ ಪಡೆಯ ಕೊಯಮತ್ತೂರು 105ನೇ ತುಕಡಿಯ ಡೆಪ್ಯುಟಿ ಕಮಾಂಡೆಂಟ್, ಎಸ್.ಪಿ. ರಚಿತ ನೇತೃತ್ವದ ವಿಶೇಷ ಬ್ರೆವೋ ತಂಡ ವ್ಯಾಪಕ ಕಣ್ಗಾವಲು ಇಡಲು ನಿಯೋಜನೆಗೊಂಡಿದೆ.

ಕೆಎಸ್‍ಆರ್‍ಪಿ ತುಕಡಿ : ಇದರೊಂದಿಗೆ 15

(ಮೊದಲ ಪುಟದಿಂದ) ಕೆಎಸ್‍ಆರ್‍ಪಿ ತುಕಡಿಗಳು ಹಾಸನ ವಿಭಾಗದ ಕಮಾಂಡೆಂಟ್ ಕೃಷ್ಣಪ್ಪ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದು, ವಿವಿಧ ಜಿಲ್ಲೆಗಳ ಪೊಲೀಸ್ ಸಶಸ್ತ್ರದಳ ಮತ್ತು ಇತರ ಪೊಲೀಸ್ ಸಿಬ್ಬಂದಿ ಸಹಿತ ಒಂದು ಸಾವಿರದ ಐದು ನೂರಕ್ಕೂ ಆಧಿಕ ಮಂದಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅಲ್ಲದೆ ನಾಲ್ಕು ನೂರಕ್ಕೂ ಅಧಿಕ ಗೃಹ ರಕ್ಷಕ ಸಿಬ್ಬಂದಿ ಪಾಲ್ಗೊಂಡಿದ್ದಾರೆ.

ಚಾಮರಾಜನಗರ ಜಿಲ್ಲಾ ಹೆಚ್ಚುವರು ಪೊಲೀಸ್ ಅಧೀಕ್ಷಕರಾಗಿರುವ ಮಹಿಳಾ ಅಧಿಕಾರಿ ಗೀತಾ ಅವರು, ವಿಶೇಷವಾಗಿ ವೀರಾಜಪೇಟೆ ತಾಲೂಕಿನಲ್ಲಿ ಡಿವೈಎಸ್ಪಿ ನಾಗಪ್ಪ ಜತೆಗೂಡಿ ಬಂದೋಬಸ್ತ್ ಗಮನಿಸಲಿದ್ದಾರೆ.

ಕೊಡಗಿನ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚೆರದೊಂದಿಗೆ ಕಾನೂನು ಭಂಗವಾಗದಂತೆ ಸದಾ ಜಾಗೃತರಿರುವಂತೆ ಕೆಳ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಡಿಜಿಪಿ ಭಾಸ್ಕರ್‍ರಾವ್ ಹಾಗೂ ಎಸ್ಪಿ ರಾಜೇಂದ್ರ ಪ್ರಸಾದ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪಥಸಂಚಲನ : ಈಗಾಗಲೇ ಜನತೆಯಲ್ಲಿ ಆತ್ಮವಿಶ್ವಾಸ ತುಂಬವದರೊಂದಿಗೆ ಸಮಾಜಘಾತುಕರ ಸೊಲ್ಲಡಗಿಸಲು ಎಲ್ಲ ತುಕಡಿಗಳ ಸಹಿತ ಪೊಲೀಸರು ಪ್ರತ್ಯೇಕ ತಂಡಗಳಲ್ಲಿ ಕೊಡಗಿನಾದ್ಯಂತ ಪಥ ಸಂಚಲನ ನಡೆಸಿದ್ದು, ಜಿಲ್ಲಾ ಕೇಂದ್ರದಲ್ಲಿಯೂ ಸಾವಿರಾರು ಮಂದಿ ಈ ಸಂಜೆ ಎಲ್ಲ ಮುಖ್ಯ ಬೀದಿಗಳಲ್ಲಿ ಸಂಚಲನ ಮಾಡಿದರು.

ಕೋಟೆಯಲ್ಲಿ ವೇದಿಕೆ ಸಜ್ಜು : ಟಿಪ್ಪು ಜಯಂತಿಗೆ ಆಹ್ವಾನಿತ ಜನಪ್ರತಿನಿಧಿಗಳ ಸಹಿತ ಮೈಸೂರಿನ ಸಾಹಿತಿ ರಂಗಸ್ವಾಮಿ ಭಾಷಣಕಾರರಾಗಿ ಆಮಂತ್ರಣದೊಂದಿಗೆ ಹಳೆಯ ಕೋಟೆ ವಿಧಾನ ಸಭಾಂಗಣದಲ್ಲಿ ವೇದಿಕೆ ಈಗಾಗಲೇ ಸಜ್ಜುಗೊಂಡಿದೆ.

ಬೆತ್ತದ ಲಾಠಿ ಗೋಚರ : ಸರಕಾರದ ಆದೇಶದಂತೆ ರೂಪುಗೊಂಡಿರುವ ನಿಗಧಿತ ಟಿಪ್ಪು ಜಯಂತಿ ಹೊರತಾಗಿ ಸೆ. 144ನೇ ಕಾಯ್ದೆ ಉಲ್ಲಂಘಿಸಿ ಯಾರಾದರೂ ಸಮಾಜಘಾತುಕ ಕೃತ್ಯಕ್ಕೆ ಮುಂದಾದರೆ ಅಂತಹವರಿಗೆ ಲಾಠಿಯ ರುಚಿ ತೋರಿಸಲು ಪೊಲೀಸ್ ಕಾರ್ಯಪಡೆ ಸಜ್ಜುಗೊಂಡಿದ್ದು, ಇಲಾಖೆಯ ಕಚೇರಿಗಳಲ್ಲಿ ಮತ್ತು ಠಾಣೆಗಳಲ್ಲಿ ಬೆತ್ತದ ಲಾಟಿಗಳು ಸಂಗ್ರಹಗೊಂಡಿರುವದು ಗೋಚರವಾಯಿತು.

ಒಟ್ಟಿನಲ್ಲಿ ಎಡಿಜಿಪಿ ಭಾಸ್ಕರ್‍ರಾವ್ ನಿಲುವಿನಂತೆ ತಾ. 10ರಂದು (ಇಂದು) ಆಚರಿಸಲ್ಪಡುವ ಟಿಪ್ಪು ಜಯಂತಿ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ಜಿಲ್ಲಾಡಳಿತ ಎಂತಹ ಪರಿಸ್ಥಿತಿ ಎದುರಿಸಲು ಸನ್ನದ್ಧಗೊಂಡಿದೆ.

ಸೋಮವಾರಪೇಟೆ ವರದಿ

ಸೋಮವಾರಪೇಟೆ ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಒಟ್ಟು 15 ಸಿ.ಸಿ. ಕ್ಯಾಮೆರಾಗಳು, ಕಾನೂನು ಸುವ್ಯವಸ್ಥೆ ನಿಮಿತ್ತ 500ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ಪ್ರಸಕ್ತ ಸಾಲಿನ ಟಿಪ್ಪು ಜಯಂತಿಯನ್ನು ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ತಾ. 10 ರಂದು (ಇಂದು) ಪೂರ್ವಾಹ್ನ 10.30ಕ್ಕೆ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮವಾದ ಟಿಪ್ಪು ಜಯಂತಿ ನಡೆಯಲಿದ್ದು, ಆಯ್ದ 88 ಮಂದಿಗೆ ಆಹ್ವಾನ ಪತ್ರಿಕೆ ನೀಡಲಾಗಿದೆ.

ಈಗಾಗಲೇ ಸೋಮವಾರಪೇಟೆ ಪಟ್ಟಣದ ಅಲ್ಲಲ್ಲಿ ಖಾಕಿಧಾರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ನಾಲ್ಕು ಜಿಲ್ಲಾ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗಳು ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಎರಡು ದಿನದ ಹಿಂದೆಯೇ 2 ಕೆಎಸ್‍ಆರ್‍ಪಿ ತುಕಡಿ ನಿಯೋಜನೆಯಾಗಿದ್ದು, ನಿನ್ನೆ ಸಂಜೆ ವೇಳೆಗೆ ಹೆಚ್ಚುವರಿಯಾಗಿ 2 ತುಕಡಿ ಪೊಲೀಸ್ ಸಿಬ್ಬಂದಿಗಳು, ಒಂದು ರ್ಯಾಪಿಡ್ ಆಕ್ಷನ್ ಫೋರ್ಸ್‍ನ ಸಿಬ್ಬಂದಿಗಳು ಆಗಮಿಸಿದ್ದಾರೆ. ಇವರೊಂದಿಗೆ ಹೆಚ್ಚುವರಿಯಾಗಿ 2 ಜಿಲ್ಲಾ ಮೀಸಲು ಪಡೆಯ ಪೊಲೀಸರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಬಂದೋಬಸ್ತ್‍ನ ಉಸ್ತುವಾರಿ ವಹಿಸಿರುವ ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಠಾಣಾಧಿಕಾರಿ ಎಂ. ಶಿವಣ್ಣ ತಿಳಿಸಿದ್ದಾರೆ.

ರೌಡಿ ಶೀಟರ್‍ಗಳ ಪೆರೇಡ್: ಟಿಪ್ಪು ಜಯಂತಿ ಹಿನ್ನೆಲೆ ರೌಡಿ ಶೀಟರ್‍ಗಳ ಪೆರೇಡ್ ನಡೆಸಲಾಗಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ತಾಲೂಕು ದಂಡಾಧಿಕಾರಿಗಳೂ ಆಗಿರುವ ತಹಶೀಲ್ದಾರ್ ಮಹೇಶ್ ಅವರು ರೌಡಿ ಶೀಟರ್‍ಗಳಾಗಿರುವ ವ್ಯಕ್ತಿಗಳನ್ನು ವಿಚಾರಣೆ ನಡೆಸಿದ್ದಾರೆ.