ವೀರಾಜಪೇಟೆ, ನ. 9: ಪರಿಶಿಷ್ಟ ಜಾತಿ ಮತ್ತು ಪಂಗಡದ ಪ್ಯಾಕೇಜ್‍ನಲ್ಲಿ ಬೇಟೋಳಿ ಗ್ರಾಮಗಳ ಭಾಗದಲ್ಲಿ ವಿವಿಧ ರಸ್ತೆ ಅಬಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಇದರಿಂದ ಈ ಭಾಗದ ವಿವಿಧ ಕಾಲೋನಿಗಳ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಹೆಗ್ಗಳ ಗ್ರಾಮದ ಭಟ್ಟಮಕ್ಕಿ ಪರಿಶಿಷ್ಟ ಕಾಲೋನಿಗೆ ರೂ,19.65 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಗ್ರಾಮದ ಮಾಯಿಲಮಕ್ಕಿ ಗಿರಿಜನ ಕಾಲೋನಿಗೆ ರೂ. 15 ಲಕ್ಷ ವೆಚ್ಚದ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು ಈ ವರ್ಷದಲ್ಲಿ ಹೆಚ್ಚು ಮಳೆ ಇದ್ದಕಾರಣ ಗ್ರಾಮೀಣ ಪ್ರದೇಶದ ರಸ್ತೆಗಳು ತೀರಾ ಹದಗೆಟ್ಟಿದ್ದು, ರಸ್ತೆಯ ಅಭಿವೃದ್ಧಿಯ ಅನುದಾನವನ್ನು ಸೂಕ್ತವಾಗಿ ಹಂಚಿಕೆ ಮಾಡಿ ಕಾಮಗಾರಿ ನಡೆಸಲಾಗುತ್ತದೆ. ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗಳ ಕಾಲೋನಿಗೆ ಹೋಗುವ ಬಂಗಲೆ ಮೊಟ್ಟೆ ರಸ್ತೆ ಅಭಿವೃದ್ಧಿಗೆ ರೂ. 5 ಲಕ್ಷ ನೀಡಲಾಗಿದೆ. ಉಳಿದಂತೆ ತೋಮರ ಕುಪ್ಪ ಮೊಟ್ಟೆ ಗಿರಿಜನ ಕಾಲೋನಿ ರಸ್ತೆಗೆ ರೂ. 12,90 ಲಕ್ಷ ಪಾಲಂಗಾಲ ಮೇದರ ಹರಿಜನ ಕಾಲೋನಿಗೆ ರೂ, 10 ಲಕ್ಷ ತೋಮರದ ಕುಡಿಯರ ಕಾಲೋನಿ ಹಾಗೂ ಗಿರಿಜನ ಕಾಲೋನಿಗೆ ರೂ. 15 ಲಕ್ಷ, ತೋಮರ ಆಂಜನೇಯ ದೇವಾಲಯ ರಸ್ತೆಯ ಗಿರಿಜನ ಕಾಲೋನಿಗೆ ರೂ. 15 ಲಕ್ಷ ನೀಡಲಾಗಿದ್ದು ಉಳಿದಂತೆ ಈ ಭಾಗದ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಇತರ ಕಾಲೋನಿಗಳಿಗೆ ಕಾಂಕ್ರಿಟ್ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಕಾಮಗಾರಿ ನಡೆಯುವ ಸಂದರ್ಭ ಗುಣಮಟ್ಟ ಕಾಪಾಡುವಂತೆ ಸ್ಥಳೀಯರು ಕಾಳಜಿ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ ಈ ಕ್ಷೇತ್ರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಿದ ಅನುದಾನವನ್ನು ಸರ್ಮಪಕವಾಗಿ ಬಳಸಿಕೊಂಡು ಗ್ರಾಮಗಳು ಮತ್ತು ಕಾಲೋನಿಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಿಕೆರೆ ರಸ್ತೆ, ಬೇಟೋಳಿ ಮಕ್ಕಿಬಾಣೆ, ಚಿಟ್ಟಡೆ ಲಿಂಕ್ ರಸ್ತೆ, ಬೇಟೋಳಿ ಶಾಲೆಯ ಪಕ್ಕದ ರಸ್ತೆ, ಎಡಮಕ್ಕಿ ದೇವಾಲಯ ಬಳಿ ಹರೀಶ್, ಸುರೇಶ್ ಮತ್ತು ಮನೋಹರ ಮನೆ ಬಳಿಯ ರಸ್ತೆ, ಬೇಟೋಳಿ ಪಟ್ಟಡ, ಚಿಟ್ಟಡೆ ಐನ್ ಮನೆ ಪಕ್ಕದ ರಸ್ತೆ, ಹೆಗ್ಗಳ ಹರಿಜನ ಕಾಲೋನಿ ರಸ್ತೆ, ಬಂಗ್ಲಿ ಮೊಟ್ಟೆ ರಸ್ತೆ, ಘೋರಣಿ ಮಕ್ಕಿ ರಸ್ತೆ ಗಳನ್ನು ರೂ,50 ಲಕ್ಷ ವೆಚ್ಚದಲ್ಲಿ ತಕ್ಷಣ ಕೈಗೆತ್ತಿಕೊಳ್ಳಲಾಗುತ್ತದೆ, ಗ್ರಾಮಸ್ತರು ಗ್ರಾಮದಲ್ಲಿ ನಡೆಯುವ ಎಲ್ಲ ಕಾಮಗಾರಿಗಳು ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳುವದು ಗ್ರಾಮಸ್ತರ ಕರ್ತವ್ಯವಾಗಿದೆ ಎಂದು ಹೇಳಿದರು.

ಭೂಮಿ ಪೂಜೆ ಸಂದರ್ಭ ಜಿಲ್ಲಾ ಪಂಚಾಯತ್ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್, ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ.ಗಣೇಶ್, ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸದಸ್ಯ ಪಟ್ರಪಂಡ ರಘುನಾಣಯ್ಯ, ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಜೋಕಿಂ ರಾಡ್ರಿಗಾಸ್, ಬೇಟೋಳಿ ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್, ಗ್ರಾಮಸ್ತರಾದ ಬಾರಿಕಾಡು ವಿಜಯ, ಹರೀಶ್, ಸುದೀಶ್, ಇನ್ನಿತರರು ಹಾಜರಿದ್ದರು.