ಮಡಿಕೇರಿ, ನ. 9: ದೇಶಕ್ಕೆ ಆದರ್ಶ ಪ್ರಾಯರಾಗಿರುವ ಮಹಾಪುರುಷ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ‘ಭಾರತ ರತ್ನ’ ಗೌರವ ನೀಡಬೇಕೆನ್ನುವದು ಹಲವು ವರ್ಷಗಳ ಬೇಡಿಕೆಯಾಗಿದ್ದು, ಇದಕ್ಕೆ ಪೂರಕವಾಗಿ ಹೇಳಿಕೆ ನೀಡಿರುವ ಸೇನಾದಂಡನಾಯಕ ಜನರಲ್ ಬಿಪಿನ್ ರಾವತ್ ಅವರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರನ ನಡೆ ಖಂಡನೀಯವೆಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ಮನು ಮುತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೀ. ಮಾ. ಕಾರ್ಯಪ್ಪರಿಗೆ ಭಾರತ ರತ್ನ ನೀಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಇಂಗಿತ ವ್ಯಕ್ತಪಡಿಸಿದ ಬಿಪಿನ್ ರಾವತ್ ಹೇಳಿಕೆಯನ್ನು ಟೀಕಿಸಿದ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರರ ಧೋರಣೆಯನ್ನು ಸ್ಥಳೀಯ ಕಾಂಗ್ರೆಸ್ ನಾಯಕರಾರು ಟೀಕಿಸಿಲ್ಲ. ಇದು ಕಾಂಗ್ರೆಸ್ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸ್ವಾತಂತ್ರ್ಯಾನಂತರದ ಅವಧಿಯಲ್ಲಿ ಅಂದಿನ
(ಮೊದಲ ಪುಟದಿಂದ) ಜನರಲ್‍ಗಳಾಗಿದ್ದ ಕಾರ್ಯಪ್ಪ ಹಾಗೂ ತಿಮ್ಮಯ್ಯ ಅವರಿಗೆ ಆಗಿನ ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಲೆ ಬಂದಿರುವದಾಗಿ ಆರೋಪಿಸಿದ ಮನುಮುತ್ತಪ್ಪ, ಮಹಾನ್ ವ್ಯಕ್ತಿ ಕಾರ್ಯಪ್ಪರಿಗೆ ಭಾರತ ರತ್ನ ನೀಡುವ ಬಗ್ಗೆ ಆಕ್ಷೇಪದ ನುಡಿಗಳನ್ನಾಡುವ ಕಾಂಗ್ರೆಸ್ ದೇಶದ್ರೋಹಿಗಳ ಜಯಂತಿ ಆಚರಿಸುವದಕ್ಕೆ ಉತ್ಸಾಹ ತೋರುತ್ತಿದೆಯೆಂದು ಆರೋಪಿಸಿದರು.
ಬಿಜೆಪಿ ಸೈನಿಕ ಪ್ರಕೋಷ್ಠದ ಜಿಲ್ಲಾಧ್ಯಕ್ಷರಾದ ಮೇಜರ್ ಒ.ಎಸ್. ಚಿಂಗಪ್ಪ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಭಾರತ ರತ್ನ ನೀಡುವದರ ಬಗ್ಗೆ ಕಾಂಗ್ರೆಸ್ ವಕ್ತಾರ ಆಕ್ಷೇಪಾರ್ಹ ಹೇಳಿಕೆ ನೀಡಿರುವದು ದುರದೃಷ್ಟಕರ ಮತ್ತು ಮಾಜಿ ಸೈನಿಕರಿಗೆ ನೋವನ್ನುಂಟು ಮಾಡುವ ವಿಚಾರವಾಗಿದೆ ಎಂದರು.
ಕಾಂಗ್ರೆಸ್ಸಿಗರು ನೀಡುವ ನೋವನ್ನು ಮಾಜಿ ಸೈನಿಕರು ಸವಾಲಾಗಿ ಸ್ವೀಕರಿಸಲಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಸೇವೆಗೆ ಅಡ್ಡಿಯಾಗಿತ್ತಲ್ಲದೆ, ಜನರಲ್ ಪದವಿ ನೀಡಲು ಕೂಡ ಹಿಂದೇಟು ಹಾಕಲಾಗಿತ್ತೆಂದು ಟೀಕಿಸಿದರು. ಕಾರ್ಯಪ್ಪ ಅವರಿಗೆ ಭಾರತ ರತ್ನ ಗೌರವ ಸಿಗುವಲ್ಲಿಯವರೆಗೆ ಬಿಜೆಪಿ ಹಾಗೂ ಸೈನಿಕ ಪ್ರಕೋಷ್ಠದ ಹೋರಾಟ ಮುಂದುವರಿಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರವಿ ಬಸಪ್ಪ, ಬೆಲ್ಲು ಸೋಮಯ್ಯ, ತಳೂರು ಕಿಶೋರ್ ಕುಮಾರ್ ಹಾಗೂ ಹೆಚ್.ಆರ್. ವಾಸಪ್ಪ ಉಪಸ್ಥಿತರಿದ್ದರು.