ಮಡಿಕೇರಿ, ನ. 9: ವಿಯೆಟ್ನಾಂ ಕಾಳು ಮೆಣಸು ಆಮದು ಪ್ರಕರಣದ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವದೆಂದು ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಎ ಅಧ್ಯಕ್ಷ ಡಾ. ಬೊಪ್ಪಂಡ ಬೋಪಯ್ಯ ಮಾತನಾಡಿ, ಆಮದು ಕಾಳು ಮೆಣಸಿನಿಂದಾಗಿ ಕೊಡಗಿನ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಸ್ಥಳೀಯ ಕಾಳು ಮೆಣಸಿನ ಬೆಲೆ 650-700 ರೂ.ಗಳಿಂದ ಇದೀಗ 390-400 ರೂ.ಗಳಿಗೆ ಇಳಿಕೆಯಾಗಿದೆ. ವಿಯೆಟ್ನಾಂ ಆಮದು ಕಾಳು ಮೆಣಸಿನಿಂದ ವರ್ತಕರಿಗೆ ಮಾತ್ರ ಲಾಭವಾಗುತ್ತಿದ್ದು, ಬೆಳೆಗಾರರಿಗೆ ಸಾಕಷ್ಟು ನಷ್ಟವಾಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕಾಫಿ ಬೆಲೆÉ ಕೂಡ ಕುಸಿಯುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಯೆಟ್ನಾಂ ಅಥವಾ ಶ್ರೀಲಂಕಾದಿಂದ ಕಾಳು ಮೆಣಸು ಆಮದಾಗುವದನ್ನು ನಿಷೇಧಿಸ ಬೇಕೆಂದು ಅವರು ಆಗ್ರಹಿಸಿದರು.

ಸಿಪಿಎ ಮಾಜಿ ಉಪಾಧ್ಯಕ್ಷ ಎಂ.ಎನ್. ತಿಮ್ಮಯ್ಯ ಮಾತನಾಡಿ, ರಫ್ತ್ತು ಮತ್ತು ಆಮದು ನೀತಿಯನ್ನು ಕೆಲವು ವರ್ತಕರು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದರು. ಲಾಭವನ್ನೆ ಗುರಿಯಾಗಿಸಿಕೊಂಡು ತೆರಿಗೆಯನ್ನು ವಂಚಿಸುವದಕ್ಕಾಗಿ ನಿಯಮ ಉಲ್ಲಂಘನೆ ಮಾಡಲಾಗುತ್ತಿದೆ. ಅತೀ ಕಡಿಮೆ ಗುಣಮಟ್ಟದ ಮತ್ತು ಕ್ರಿಮಿನಾಶಕ ಬೆರೆತಿರುವ ಕಲಬೆರಕೆ ಕಾಳು ಮೆಣಸನ್ನು ರಫ್ತು ಮಾಡಲಾಗುತ್ತಿದೆ. ಇದರಿಂದ ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಳುಮೆಣಸಿನ ಪ್ರತಿಷ್ಠೆ ನೆಲ ಕಚ್ಚಿದೆಯೆಂದು ಬೇಸರ ವ್ಯಕ್ತಪಡಿಸಿದರು.

ಕಾಳು ಮೆಣಸು ಆಮದು ಮತ್ತು ರಫ್ತಿನ ಬಗ್ಗೆ ಸೂಕ್ತ ತನಿಖೆÉ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕೆಂದು ತಿಮ್ಮಯ್ಯ ಹೇಳಿದರು.

ಮಾಜಿ ಅಧ್ಯಕ್ಷ ಬೋಸ್ ಮಂದಣ್ಣ ಮಾತನಾಡಿ, ಸಂಬಾರ ಪದಾರ್ಥಗಳ ಕ್ಷೇತ್ರದಲ್ಲಿ ನ್ಯಾಯಯುತ ವಾದ ಸ್ಪರ್ಧೆಗೆ ಬೆಳೆಗಾರರು ಹೆದರುವದಿಲ್ಲ. ಆದರೆ, ಈ ರೀತಿ ನಿಯಮ ಬಾಹಿರ ವ್ಯವಹಾರದಿಂದ ಸ್ಥಳೀಯ ಬೆಳೆಗಾರರಿಗೆ ಆತಂಕ ಸೃಷ್ಟಿಯಾಗಿದೆ ಎಂದರು. ತೆರಿಗೆ ಪಾವತಿಸಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ ವಿಯೆಟ್ನಾಂನಿಂದ ಶ್ರೀಲಂಕಾಕ್ಕೆ, ಶ್ರೀಲಂಕಾದಿಂದ ಭಾರತಕ್ಕೆ ಕಾಳು ಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ವ್ಯವಹಾರದಿಂದ ವಿಶ್ವ ಶ್ರೇಷ್ಠವಾಗಿದ್ದ ಕೊಡಗಿನ ಕಾಳು ಮೆಣಸು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟರು.

ಈ ಹಿಂದೆ ಇದೇ ರೀತಿಯ ಬೆಳವಣಿಗೆಯಿಂದಾಗಿ ಏಲಕ್ಕಿ ಬೆಲೆಗೆ ಸಂಚಕಾರ ಎದುರಾಗಿತ್ತು. ಇದೀಗ ಕಾಳು ಮೆಣಸು ಕೂಡ ಇದೇ ಹಾದಿಯಲ್ಲಿ ಸಾಗಿದೆಯೆಂದು ಬೋಸ್ ಮಂದಣ್ಣ ಆತಂಕ ವ್ಯಕ್ತಪಡಿಸಿದರು. ಭಾರತದ ಕರಿಮೆಣಸಿನ ಕ್ಷೇತ್ರಕ್ಕೆ ಹಾನಿಯಾಗುವ ಸಾಧ್ಯತೆಗಳಿದೆ ಎಂದರು.

ಮತ್ತೋರ್ವ ಮಾಜಿ ಅಧ್ಯಕ್ಷ ಚೌರೀರ ಪೆಮ್ಮಯ್ಯ ಮಾತನಾಡಿ, ಕಾಫಿ, ಟೀ, ರಬ್ಬರ್, ಕಾಳು ಮೆಣಸು ಬೆಳೆಗಾರರು ಇಂದು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಆದರೆ ಬೆಳೆÉಗಾರರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲವೆಂದು ಟೀಕಿಸಿದರು. ಕಾಳು ಮೆಣಸು ಬೆಳೆಯುವ ಪ್ರದೇಶದ ಸಂಸದರುಗಳು ಸೂಕ್ತ ಉತ್ತರ ನೀಡಬೇಕೆಂದು ಅಭಿಪ್ರಾಯಪಟ್ಟ ಪೆಮ್ಮಯ್ಯ, ಕಾಫಿ ಮಂಡಳಿಯ ಚಟುವಟಿಕೆ ಕೂಡ ಸರಿಯಾಗಿ ನಡೆಯುತ್ತಿಲ್ಲವೆಂದು ಆರೋಪಿಸಿದರು.

ವಿಯೆಟ್ನಾಂನಿಂದ ಕಾಳು ಮೆಣಸು ಆಮದಾಗುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಅಥವಾ ಶೇ.80 ರಷ್ಟು ಸುಂಕ ವಿಧಿಸಬೇಕು, ಆಮದು ಮಾಡಿಕೊಂಡ ಕಾಳುಮೆಣಸನ್ನು ಮರು ರಫ್ತು ಮಾಡುವದನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ಶ್ರೀಲಂಕಾ ಸಾರ್ಕ್ ಒಪ್ಪಂದವನ್ನು ತನ್ನದಾಗಿಸಿಕೊಂಡು ಅದಕ್ಕೆ ವ್ಯತಿರಿಕ್ತವಾಗಿ ಕಾಳುಮೆಣಸನ್ನು ವಿಯೆಟ್ನಾಂನಿಂದ ಆಮದು ಮಾಡಿ ಭಾರತಕ್ಕೆ ರಫ್ತು ಮಾಡುತ್ತಿದೆ. ಆದ್ದರಿಂದ ಶ್ರೀಲಂಕಾದಿಂದ ಭಾರತಕ್ಕೆ ಆಮದಾಗುವ ಕಾಳುಮೆಣಸಿನ ಪ್ರಮಾಣವನ್ನು ವಾರ್ಷಿಕ 2 ಸಾವಿರ ಟನ್‍ಗಳಿಗೆ ಸೀಮಿತಗೊಳಿಸಬೇಕು. ರಾಜ್ಯ ಸರ್ಕಾರ ಕಾಳುಮೆಣಸು ಮತ್ತು ಅಡಿಕೆ ಮೇಲಿನ ಎಪಿಎಂಸಿ ಶುಲ್ಕವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದ ಪ್ರಮುಖರು, ಶುಲ್ಕ ವಿಧಿಸುವದರಿಂದ ಕರಿಮೆಣಸನ್ನು ಯಾರು ಬೇಕಾದರು ಸುಂಕ ಪಾವತಿಸಿ ಯಾವದೇ ನಿರ್ಬಂಧವಿಲ್ಲದೆ ಸಾಗಿಸಬಹುದಾಗಿದೆ, ಇದರಿಂದ ಲಂಚ ಪ್ರಕರಣಗಳಿಗೆ ಎಡೆಮಾಡಿಕೊಟ್ಟಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಕಾಫಿ ಬೆಳೆಗಾರರ ಒಕ್ಕ್ಕೂಟದ ಉಪಾಧ್ಯಕ್ಷ ರಾಜೀವ್ ಹಾಗೂ ಬೆಳ್ಯಪ್ಪ ಉಪಸ್ಥಿತರಿದ್ದರು.