ಕುಶಾಲನಗರ, ನ. 9: ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಮರ್ಪಕ ವಾಹನ ಸಂಚಾರ ವ್ಯವಸ್ಥೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ವಿಶೇಷ ಯೋಜನೆ ಹಮ್ಮಿಕೊಂಡಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ಅಧ್ಯಕ್ಷೆ ರೇಣುಕಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚಿಸಿ ಸಭೆ ಈ ನಿರ್ಣಯ ಕೈಗೊಂಡಿದೆ.

ಪಟ್ಟಣದ ಹೃದಯ ಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ, ಇಕ್ಕಟ್ಟಾದ ಪ್ರದೇಶಗಳಲ್ಲಿ ಏಕಮುಖ ಸಂಚಾರ ವ್ಯವಸ್ಥೆ, ವಾಹನ ಮುಕ್ತ ರಸ್ತೆಗಳು, ಪಾದಚಾರಿಗಳ ರಸ್ತೆ, ಖಾಸಗಿ ಬಸ್ ನಿಲ್ದಾಣ, ದ್ವಿಚಕ್ರ ವಾಹನ ನಿಲುಗಡೆ ಸೇರಿದಂತೆ 22 ಅಂಶಗಳ ಯೋಜನೆಗಳನ್ನು ಒಳಗೊಂಡಂತೆ ಸುವ್ಯವಸ್ಥಿತ ಸಂಚಾರಿ ವ್ಯವಸ್ಥೆ ಕಲ್ಪಿಸಲು ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರೇಣುಕಾ ತಿಳಿಸಿದ್ದಾರೆ.

ಈ ಸಂಬಂಧ ಸಭೆಯಲ್ಲಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಅಪ್ಪಾಜಿ, ಎಎಸ್‍ಐ ಕುಶಾಲಪ್ಪ ಅವರುಗಳು ಮಾಹಿತಿ ನೀಡುವದರೊಂದಿಗೆ ಸಂಬಂಧಿಸಿದ ಕಾರ್ಯ ಯೋಜನೆ ಬಗ್ಗೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವದು ಎಂದರು.

ಸಭೆಯಲ್ಲಿ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಟ್ಟಡ ಅಥವಾ ಮನೆ ನಿರ್ಮಾಣ ಸಂದರ್ಭ ನೋಂದಾವಣೆಗೆ ಇರುವ ಅಡ್ಡಿ ನಿವಾರಣೆ ಬಗ್ಗೆ ಕಾನೂನು ಸಲಹೆಗಾರ ರೊಂದಿಗೆ ಚರ್ಚಿಸಲಾಯಿತು. ಕುಡಾ ಮತ್ತು ಪಟ್ಟಣ ಪಂಚಾಯಿತಿ ನಡುವೆ ಇರುವ ತಾಂತ್ರಿಕ ತೊಂದರೆಯನ್ನು ನಿವಾರಣೆಗೊಳಿಸಿ ಜನತೆಗೆ ಸೌಲಭ್ಯ ಕಲ್ಪಿಸುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು.

ಕುಶಾಲನಗರ ಪಟ್ಟಣ ಪಂಚಾಯಿತಿಯ ಗುಂಡೂರಾವ್ ಬಡಾವಣೆಯ ನಿವೇಶನಗಳ ಹರಾಜು ಪ್ರಕ್ರಿಯೆಗೆ ಇದೀಗ ನಗರಾಭಿವೃದ್ಧಿ ಇಲಾಖೆ ಸ್ಥಿರೀಕರಣ ಆದೇಶ ನೀಡಿದ್ದು, 50 ನಿವೇಶನಗಳ ನೋಂದಾವಣೆ ಕಾರ್ಯ ಈ ಮೂಲಕ ಪೂರ್ಣಗೊಳ್ಳಲಿದೆ. ಈ ಬಗ್ಗೆ ಸಭೆಯ ಗಮನಕ್ಕೆ ತಂದ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಪ್ರಯತ್ನದೊಂದಿಗೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದ ಯೋಜನೆ ಇದೀಗ ಕಾರ್ಯಕಲ್ಪ ಕಂಡಿದ್ದು ಬಡಾವಣೆಯ 50 ನಿವೇಶನಗಳು ರೂ. 5.5 ಕೋಟಿಗೆ ಹರಾಜಾಗಿವೆ ಬಡಾವಣೆಯ ಅಭಿವೃದ್ಧಿಪಡಿಸುವದು ನಂತರ ಒಟ್ಟು 405 ನಿವೇಶನಗಳ ಪೈಕಿ 285 ರಲ್ಲಿ 154 ನಿವೇಶನಗಳನ್ನು ಆರ್ಥಿಕವಾಗಿ ಮತ್ತು ಹಿಂದುಳಿದ ಕಡಿಮೆ ಆದಾಯವುಳ್ಳ ಜನರಿಗೆ ಹಂಚಿಕೆ ಮಾಡುವದು. ಉಳಿದಂತೆ 131 ನಿವೇಶನಗಳನ್ನು ಬಹಿರಂಗ ಹರಾಜು ಮಾಡಲು ಸರಕಾರ ಆದೇಶ ನೀಡಿದೆ ಎಂದು ಸಭೆಗೆ ಮಾಹಿತಿ ಒದಗಿಸಿದರು.

ಕುಶಾಲನಗರ ಪಟ್ಟಣದಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಿರುವ ಬಗ್ಗೆ ಚರ್ಚೆ ನಡೆದು ಸಭೆಯಲ್ಲಿ ನಡೆದ ನಿರ್ಣಯಗಳನ್ನು ಅನುಷ್ಠಾನ ಗೊಳಿಸುವ ಸಂದರ್ಭ ಜನಪ್ರತಿನಿಧಿ ಗಳು ಕೈಜೋಡಿಸಬೇಕೆಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಮನವಿ ಮಾಡಿದರು.

ಪಂಚಾಯಿತಿಯ ನೂತನ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಈಗಾಗಲೆ ರೂ. 7.5 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಪಟ್ಟಣ ಪಂಚಾಯಿತಿಗೆ ಒಳಪಟ್ಟ ಅಂಗಡಿ ಮಳಿಗೆಗಳನ್ನು ತಕ್ಷಣ ತೆರವುಗೊಳಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಸಂಬಂಧ ಸಭೆಯಲ್ಲಿ ಕಾನೂನು ಸಲಹೆಗಾರರಾದ ಆರ್.ಕೆ. ನಾಗೇಂದ್ರ ಬಾಬು ಅವರೊಂದಿಗೆ ಜನಪ್ರತಿನಿಧಿಗಳು ಚರ್ಚಿಸಿದರು. ಮಳಿಗೆದಾರರಿಗೆ ಪರ್ಯಾಯ ವ್ಯವಸ್ಥೆಕಲ್ಪಿಸುವ ಬಗ್ಗೆ ಪಂಚಾಯಿತಿ ಸದಸ್ಯರಾದ ಡಿ.ಕೆ. ತಿಮ್ಮಪ್ಪ, ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಎಂ.ಎಂ. ಚರಣ್ ಸಭೆಯಲ್ಲಿ ಆಗ್ರಹಿಸಿದರು.

ಪಟ್ಟಣ ಪಂಚಾಯಿತಿಯಲ್ಲಿ ಕಂದಾಯ ನಿರೀಕ್ಷಕರಾಗಿದ್ದ ಜೀವನ್ ಎಂಬವರು ನಕಲಿ ಸೀಲ್ ಹಾಗೂ ಸಹಿ ಮಾಡುವ ಮೂಲಕ ಅಕ್ರಮ ಕಟ್ಟಡವೊಂದಕ್ಕೆ ನಿರಾಕ್ಷೇಪಣಾ ಪತ್ರ ನೀಡಿದ ಪ್ರಕರಣದ ಚರ್ಚೆಗೆ ಒಳಗಾಗಿ ಈ ಬಗ್ಗೆ ಸಂಬಂಧಿಸಿದ ಸಿಬ್ಬಂದಿ ಮೇಲೆ ಶಿಸ್ತು ಕ್ರಮಕೈಗೊಳ್ಳುವದು ಹಾಗೂ ಕಟ್ಟಡಕ್ಕೆ ನೀಡಿದ ನಿರಾಕ್ಷೇಪಣಾ ಪತ್ರವನ್ನು ರದ್ದುಗೊಳಿಸುವ ಬಗ್ಗೆ ಚರ್ಚೆ ನಡೆಯಿತು.

ಈ ಸಂದರ್ಭ ಮಾತನಾಡಿದ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್ ಸಂಬಂಧಿಸಿದ ನೌಕರನ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂದು ಸಭೆಯಲ್ಲಿ ಒತ್ತಾಯಿಸಿದರು. ಘನತ್ಯಾಜ್ಯ ನಿರ್ವಹಣೆ ಸಂಬಂಧ ನಿರ್ವಹಣಾ ವೆಚ್ಚ ಕಡಿತಗೊಳಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದು ಹೆಚ್ಚುವರಿ ಪೌರಕಾರ್ಮಿಕರನ್ನು ನಿಯೋಜಿಸಲು ಕ್ರಮಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಭೂಪರಿವರ್ತನೆ ಕೋರಿ ಬಂದಿರುವ ಅರ್ಜಿಗಳ ಬಗ್ಗೆ ಚರ್ಚಿಸಲಾಗಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಕ್ರಮಕೈಗೊಳ್ಳುವದು, ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಷಿಕ ರಸ್ತೆ ನಿರ್ವಹಣೆಗೆ ಅಂದಾಜು ಪಟ್ಟಿ ತಯಾರಿಸಿ ಅನುಮೋದನೆ ನೀಡುವ ಬಗ್ಗೆ ಚರ್ಚೆ ನಡೆಯಿತು.

ಖಾಸಗಿ ಬಸ್ ನಿಲ್ದಾಣವನ್ನು ಸಧ್ಯದಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸುವ ಬಗ್ಗೆ ಚರ್ಚಿಸಲಾಗಿ ಡಿಸೆಂಬರ್ 15 ರ ಒಳಗಾಗಿ ಲೋಕಾರ್ಪಣೆಗೆ ಕಾರ್ಯಕ್ರಮ ರೂಪಿಸುವ ಬಗ್ಗೆ ತೀರ್ಮಾನಿಸ ಲಾಯಿತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳನ್ನು ಮುಂದಿನ ವಾರದಲ್ಲಿ ಲೋಕಾರ್ಪಣೆ ಮಾಡುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ಪೌರಕಾರ್ಮಿಕರ ಆರೋಗ್ಯ ಸುಧಾರಣೆ ಕ್ರಮಗಳ ಬಗ್ಗೆ ನಾಮನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ ಸಭೆ ಗಮನಕ್ಕೆ ತಂದರು. ಪಟ್ಟಣದ ಟೌನ್ ಕಾಲನಿ ರಸ್ತೆಯನ್ನು ಸರಿಪಡಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಡಿ.ಚಂದ್ರು ಅಧ್ಯಕ್ಷರ ಗಮನಕ್ಕೆ ತಂದರು.

ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಕೆ.ಪಾರ್ವತಿ, ಸದಸ್ಯರುಗಳಾದ ಸುರಯ್ಯ ಭಾನು, ಕವಿತಾ, ಹೆಚ್.ಎಂ.ಮಧುಸೂದನ್, ಲಲಿತಾ, ಫಜಲುಲ್ಲಾ, ಶಿವಶಂಕರ್, ಪಂಚಾಯಿತಿ ಅಭಿಯಂತರರಾದ ಶ್ರೀದೇವಿ ಇದ್ದರು.