ಮಡಿಕೇರಿ, ನ. 9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ದುರುದ್ದೇಶದಿಂದ ಟಿಪ್ಪು ಜಯಂತಿಯನ್ನು ಬಲವಂತವಾಗಿ ಆಚರಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ಶಾಸಕತ್ರಯರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್ ಹಾಗೂ ಸುನಿಲ್ ಸುಬ್ರಮಣಿ ಜಿಲ್ಲೆಯ ಜನತೆ ತಾ. 10 ರಂದು (ಇಂದು) ಸ್ವಯಂ ಪ್ರೇರಿತರಾಗಿ ಕೊಡಗು ಬಂದ್ ಮಾಡುವ ಮೂಲಕ ಸರ್ಕಾರದ ಕ್ರಮವನ್ನು ಖಂಡಿಸಬೇಕೆಂದು ಕರೆ ನೀಡಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಜಿ. ಬೋಪಯ್ಯ, ರಾಜ್ಯದ ಜನತೆಯ ಭಾವನೆಗೆ ವಿರುದ್ಧವಾಗಿ ಟಿಪ್ಪು ಜಯಂತಿಯನ್ನು ಆಚರಿಸಲು ಸರ್ಕಾರ ಮುಂದಾಗಿದೆಯೆಂದು ಆರೋಪಿಸಿ ದರು. ಹಿಂದೂ ದೇವಾಲಯಗಳನ್ನು ನಾಶ ಮಾಡಿರುವದಕ್ಕೆ ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಆನೆಗಳ ಮೂರ್ತಿಗಳು ಭಗ್ನಗೊಂಡಿರುವದೆ ಸಾಕ್ಷಿಯಾಗಿದೆ. ತಲಕಾವೇರಿಗೆ ಹೋಗುವ ಹಾದಿಯಲ್ಲಿ ಟಿಪ್ಪು ವಿಶ್ರಾಂತಿ ಪಡೆದಿದ್ದ ಸಲಾಂ ಕಲ್ಲು ಎನ್ನುವ ಪ್ರದೇಶವು ಇದೆ.
(ಮೊದಲ ಪುಟದಿಂದ) ದೇವಟ್ ಪರಂಬುವಿನಲ್ಲಿ ಟಿಪ್ಪುವಿನಿಂದ ಕೊಡವರ ಹತ್ಯೆಯಾಗಿದೆ ಎಂದು ತಿಳಿಸಿದ ಕೆ.ಜಿ. ಬೋಪಯ್ಯ, ಜಿಲ್ಲೆಯ ಜನತೆ ಬಂದ್‍ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಟಿಪ್ಪು ಜಯಂತಿ ಆಚರಣೆ ಕೊಡಗಿನ ಜನರಿಗೆ ಮಾಡುತ್ತಿರುವ ಅಪಮಾನವೆಂದು ಅಭಿಪ್ರಾಯಪಟ್ಟರು. ಟಿಪ್ಪು ಒಬ್ಬ ಸ್ವಾತಂತ್ರ್ಯ ಹೋರಾಟಗಾರನಲ್ಲ, ಬದಲಿಗೆ ತನ್ನ ಸಂಸ್ಥಾನ ವಿಸ್ತರಣೆಗಾಗಿ ಯುದ್ಧ ಮಾಡಿದಾತನೆಂದು ಟೀಕಿಸಿದರು. ಹಿಂದೂಗಳನ್ನು ಹಾಗೂ ಕ್ರಿಶ್ಚಿಯನ್ನರನ್ನು ಮತಾಂತರ ಮಾಡಿರುವದಲ್ಲದೆ, ಹತ್ಯೆಯನ್ನು ಕೂಡ ಮಾಡಿದ್ದಾನೆ. ಇಂತಹ ವ್ಯಕ್ತಿಯ ಜಯಂತಿಯನ್ನು ಆಚರಿಸುವ ಮೂಲಕ ಜಾತಿ ಜಾತಿಗಳ ನಡುವೆ ಒಡಕು ಮೂಡಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದೆಯೆಂದು ಆರೋಪಿಸಿದರು.
ಮುಸಲ್ಮಾನರ ಪವಿತ್ರ ಗ್ರಂಥ ಖುರಾನ್‍ನಲ್ಲಿ ಕೂಡ ವ್ಯಕ್ತಿಪೂಜೆಗೆ ಅವಕಾಶವಿಲ್ಲವೆಂದು ಹೇಳಿದೆ. ಅಲ್ಲದೆ, ಯಾವದೇ ಮುಸ್ಲಿಂ ಸಂಘಟನೆಗಳು ಟಿಪ್ಪು ಜಯಂತಿ ಬೇಕು ಎಂದು ಮನವಿ ಮಾಡಿಕೊಂಡಿರಲಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗದ ಕಾಂಗ್ರೆಸ್ ಸರ್ಕಾರ ಜಾತಿ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದ ಅಪ್ಪಚ್ಚು ರಂಜನ್, ತಾ. 10 ರಂದು ಬಂದ್‍ಗೆ ಸಹಕರಿಸುವಂತೆ ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಮಾತನಾಡಿ, ರಾಜ್ಯಕ್ಕೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿ ನದಿ ಹುಟ್ಟುವ ತಲಕಾವೇರಿಗೆ ಆಗಮಿಸಿ ಪೂಜೆ ಮಾಡಲು ಆಸಕ್ತಿ ತೋರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಟಿಪ್ಪು ಜಯಂತಿ ಬಗ್ಗೆ ಮಾತ್ರ ಕಾಳಜಿ ತೋರುತ್ತಿದ್ದಾರೆ ಎಂದು ಟೀಕಿಸಿದರು. ಕೊಡಗಿನಲ್ಲಿ ಸುಮಾರು 310 ದೇವಾಲಯಗಳು ಹಾಗೂ ಮಂಗಳೂರಿನಲ್ಲಿ 25 ಚರ್ಚ್‍ಗಳನ್ನು ಟಿಪ್ಪು ಧ್ವಂಸ ಮಾಡಿದ್ದಾನೆ ಎಂದು ಸುನಿಲ್ ಸುಬ್ರಮಣಿ ವಿವರಿಸಿದರು.
ಇಂತಹ ವ್ಯಕ್ತಿಯ ಜಯಂತಿಯನ್ನು ಸುಮಾರು 1500 ಪೊಲೀಸರ ಸರ್ಪಗಾವಲಿನಲ್ಲಿ ಆಚರಿಸುತ್ತಿರುವದು ಖಂಡನೀಯ. ಈ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸಚಿವರುಗಳು ಕೂಡ ಅಸಮರ್ಥರಾಗಿದ್ದಾರೆ. ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಬೇಡವೆಂದು ತಿಳಿಸುವ ತಾಕತ್ತು ಕೊಡಗು ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಇಲ್ಲವೆಂದು ಟೀಕಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯ ಮೂಲಕ ರಾಜ್ಯ ಸರ್ಕಾರ ಅನವಶ್ಯಕ ದುಂದುವೆಚ್ಚ ಮಾಡುತ್ತಿದೆಯೆಂದು ಟೀಕಿಸಿದರು. ಜಯಂತಿಗೆ ಖರ್ಚುಮಾಡುವ ಹಣವನ್ನು ರಸ್ತೆಗಳ ಗುಂಡಿ ಮುಚ್ಚಲು ವ್ಯಯಿಸಲಿ ಎಂದು ಒತ್ತಾಯಿಸಿದರು.