ಸೋಮವಾರಪೇಟೆ, ನ.9: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 9ನೇ ವಾರ್ಡ್‍ನಲ್ಲಿ ಕುಡಿಯುವ ನೀರಿಗೆ ಪೈಪ್‍ಲೈನ್ ಅಳವಡಿಸುವದು ಮತ್ತು ಕಗ್ಗಂಟಾಗಿರುವ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳ ನಡುವೆ ಜಟಾಪಟಿ ನಡೆಯಿತು. ಚರ್ಚೆಯ ನಡುವೆ ಸದಸ್ಯರುಗಳ ನಡುವೆ ಏಕವಚನ ಪದಪ್ರಯೋಗವೂ ಆಯಿತು.ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅಧ್ಯಕ್ಷತೆಯಲ್ಲಿ ಪ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಸದಸ್ಯ ಆದಂ ಅವರು ವಾರ್ಡ್ 9ರಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪೈಪ್‍ಲೈನ್ ಅಳವಡಿಸ ಬೇಕೆಂದು ಮನವಿ ಮಾಡಿದರು.

ಬೇಡಿಕೆಗಳಿದ್ದರೆ ಲಿಖಿತವಾಗಿ ಮನವಿ ನೀಡಿ. ಸಭೆಯಲ್ಲಿ ಪಾರದರ್ಶಕ ವಾಗಿಯೇ ಚರ್ಚೆ ಮಾಡಿ ನಂತರ ಕಾಮಗಾರಿ ಕೈಗೊಳ್ಳುವ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಹೇಳಿದರು. ಇದರಿಂದ ಸಿಟ್ಟುಗೊಂಡ ಆದಂ, ಬೇರೆ ಸದಸ್ಯರಿಗೆ ಯಾವದೇ ಮನವಿ ಬೇಡ. ನಮಗಾದರೆ ಕೇಳುತ್ತೀರಿ. ಅಧ್ಯಕ್ಷರು ಏಕಪಕ್ಷೀಯವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

(ಮೊದಲ ಪುಟದಿಂದ) ಇಷ್ಟಕ್ಕೆ ಸುಮ್ಮನಾಗದ ಆದಂ, ಅಧ್ಯಕ್ಷರ ಎದುರು ಬಂದು ತಮ್ಮ ಕೈಲಿದ್ದ ಸಭಾ ನಡಾವಳಿಯನ್ನು ಸದಸ್ಯ ಬಿ.ಎಂ. ಸುರೇಶ್ ಅವರ ಎದುರು ಎಸೆದರು. ಇದಕ್ಕೆ ಸುರೇಶ್ ಆಕ್ಷೇಪಿಸುತ್ತಿದ್ದಂತೆ ಆದಂ ಅವರು ಏಕವಚನ ಪದಪ್ರಯೋಗ ಮಾಡಿದರು. ಈ ಸಂದರ್ಭ ಸಭೆಯಲ್ಲಿ ಗದ್ದಲ, ಗೊಂದಲ ನಡೆಯಿತು.

ಆದಂ ಅವರೊಂದಿಗೆ ವಿಪಕ್ಷ ಸದಸ್ಯರಾದ ಶೀಲಾ ಡಿಸೋಜ, ಮೀನಾಕುಮಾರಿ, ಇಂದ್ರೇಶ್ ಅವರುಗಳೂ ಕೈಜೋಡಿಸಿದರು. ಇತರ ಸದಸ್ಯರುಗಳು ಇವರುಗಳನ್ನು ಸಮಾಧಾನ ಪಡಿಸಿದರು. ನಂತರ ಪಟ್ಟಣದಲ್ಲಿ ಪರಿಹಾರ ಕಾಣದೇ ಉಳಿದುಕೊಂಡಿರುವ ಕಸ ವಿಲೇವಾರಿ ಸಮಸ್ಯೆ ಬಗ್ಗೆ ಚರ್ಚೆ ನಡೆಯಿತು.

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸಮಗ್ರ ಪೌರ ಘನತ್ಯಾಜ್ಯ ನಿರ್ವಹಣೆಗಾಗಿ ಟೈಡ್ ಟೆಕ್ನಾಲಜಿ ಲಿಮಿಟೆಡ್‍ನಿಂದ ಸಿದ್ದಪಡಿಸಿರುವ 238.46 ಲಕ್ಷ ವೆಚ್ಚದ ಯೋಜನೆ ಯನ್ನು ಅಂಗೀಕರಿಸುವ ಸಂಬಂಧ ಚರ್ಚೆ ನಡೆಯಿತು. ಯೋಜನೆಯ ಅನುಷ್ಠಾನಕ್ಕೆ ಶೇ. 35ರಷ್ಟು ಹಣವನ್ನು ಕೇಂದ್ರ ಸರ್ಕಾರ, ಶೇ. 23.33ರಷ್ಟನ್ನು ರಾಜ್ಯ ಸರ್ಕಾರ ನೀಡಲಿದ್ದು, ಉಳಿದ ಶೇ. 41.6ರಷ್ಟನ್ನು ಪ.ಪಂ. ಎಸ್‍ಎಫ್‍ಸಿ ನಿಧಿಯಿಂದ ಬಳಸಿಕೊಳ್ಳಬೇಕಿದೆ ಎಂದು ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ತಿಳಿಸಿದರು.

ಈಗಾಗಲೇ ಸಿದ್ದಲಿಂಗಪುರದಲ್ಲಿ ಗುರುತಿಸಲಾಗಿರುವ ಜಾಗದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಘಟಕ ಮಾಡಲಾಗುವದು ಎಂದರು. ಸದ್ಯಕ್ಕೆ ಮಹದೇಶ್ವರ ಬಡಾವಣೆಯಲ್ಲಿರುವ ಜಾಗದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕಿದೆ ಎಂದು ಹೇಳುತ್ತಿದ್ದಂತೆ, ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಆದಂ ಹಾಗೂ ಇಂದ್ರೇಶ್ ಅವರುಗಳು, ಮಹದೇಶ್ವರ ಬಡಾವಣೆಯಲ್ಲಿ ಕಸ ವಿಲೇವಾರಿಗೆ ಸ್ಥಳೀಯರು ವಿರೋಧಿಸುತ್ತಿದ್ದಾರೆ. ಅಲ್ಲಿ ಕಸವನ್ನು ಹಾಕುವದು ಬೇಡ. ಇದನ್ನೂ ಮೀರಿ ವಿಲೇವಾರಿಗೆ ಮುಂದಾದರೆ, ಅವರುಗಳೊಂದಿಗೆ ನಾವುಗಳೂ ಪ್ರತಿಭಟನೆ ಮಾಡುತ್ತೇವೆ ಎಂದರು.

ಸ್ಥಳೀಯರಿಗೆ ಕಸ ವಿಲೇವಾರಿಯಿಂದ ಯಾವದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತೇವೆ. ನೀವುಗಳು ಸದಸ್ಯರಾಗಿದ್ದುಕೊಂಡು ಈ ಬಗ್ಗೆ ಸ್ಥಳೀಯರಿಗೆ ತಿಳುವಳಿಕೆ ನೀಡಬೇಕು. ನೀವುಗಳೇ ವಿರೋಧಿಸುವದು ಸರಿಯಲ್ಲ ಎಂದು ಅಧ್ಯಕ್ಷರು ಹೇಳುತ್ತಿದ್ದಂತೆ ಸಭೆಯಲ್ಲಿ ಮತ್ತೆ ಗದ್ದಲ ಪ್ರಾರಂಭವಾಯಿತು.

ಬಳಗುಂದ ಗ್ರಾಮದಲ್ಲಿ ಕಸವಿಲೇವಾರಿ ಮಾಡಲು ಜಾಗದ ಮಾಲೀಕರೇ ಮುಂದೆ ಬಂದಿದ್ದಾರೆ. ಆದರೂ ಅಧ್ಯಕ್ಷರು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಇಂದ್ರೇಶ್ ಹೇಳಿದರು. ನಿಮ್ಮ ನೇತೃತ್ವದಲ್ಲೇ ಕಸ ಸುರಿಯುವ ವ್ಯವಸ್ಥೆ ಮಾಡೋಣ. ಸ್ಥಳೀಯರೊಂದಿಗೆ ನೀವೇ ಮಾತುಕತೆ ನಡೆಸಿ ಎಂದು ವಿಜಯಲಕ್ಷ್ಮೀ ಸುರೇಶ್ ಹೇಳುತ್ತಿದ್ದಂತೆ ಇಂದ್ರೇಶ್ ಸುಮ್ಮನಾದರು. ಎಲ್ಲರೂ ಒಟ್ಟಾಗಿ ಸ್ಥಳೀಯರಲ್ಲಿ ಅರಿವು ಮೂಡಿಸಿ ಘಟಕ ಪ್ರಾರಂಭಿಸಬೇಕು. ಇದಕ್ಕೆ ಸರ್ವ ಸದಸ್ಯರ ಸಹಕಾರ ಬೇಕು ಎಂದು ಅಧ್ಯಕ್ಷರು ಮನವಿ ಮಾಡಿದರು.

ಪಟ್ಟಣ ವ್ಯಾಪ್ತಿಯಲ್ಲಿ ಕೆಟ್ಟು ನಿಂತಿರುವ ಬೀದಿದೀಪಗಳನ್ನು ದುರಸ್ತಿಪಡಿಸಬೇಕು. ಆದ್ಯತೆಯ ಮೇರೆ ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸಬೇಕು ಎಂದು ಸದಸ್ಯರುಗಳು ಸಭೆಯಲ್ಲಿ ಒತ್ತಾಯಿಸಿದರು. ಪಂಚಾಯಿತಿ ವ್ಯಾಪ್ತಿಯ ಸಮಸ್ಯೆಗಳನ್ನು ಸಾರ್ವಜನಿಕರು ಪ.ಪಂ. ಕಚೇರಿಗೆ ದೂರವಾಣಿ(ದೂ:08276 282037) ಮೂಲಕ ತಿಳಿಸಬಹುದು. ತಕ್ಷಣ ಸ್ಪಂದಿಸಲಾಗುವದು ಎಂದು ವಿಜಯಲಕ್ಷ್ಮೀ ಸುರೇಶ್ ಹೇಳಿದರು.

ನೆಲಬಾಡಿಗೆ ಆಧಾರದಲ್ಲಿರುವ ಅಂಗಡಿ ಮಳಿಗೆಯನ್ನು ಪಂಚಾಯತಿ ವತಿಯಿಂದ ಬಹಿರಂಗ ಹರಾಜು ಮಾಡಿದರೆ ಹೆಚ್ಚು ಆದಾಯ ಬರಲಿದೆ ಎಂದು ಆದಂ ಸಲಹೆ ನೀಡಿದರು.

ಇಂದಿರಾ ಕ್ಯಾಂಟೀನ್‍ಗೆ ಜಾಗ: ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್‍ಗೆ ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳ ಸನಿಹ ಜಾಗ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. 1500 ಚದರ ಅಡಿ ಜಾಗವನ್ನು ಗುರುತಿಸಲಾಗಿದೆ ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.

ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಷ್ಮಾ ಸುಧಾಕರ್, ಸದಸ್ಯರುಗಳಾದ ಲೀಲಾ ನಿರ್ವಾಣಿ, ವೆಂಕಟೇಶ್, ಸುಶೀಲಾ, ನಾಗರಾಜ್, ಉದಯಕುಮಾರ್, ಈಶ್ವರ್ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.