ಕೂಡಿಗೆ, ನ. 9: ಕೊಡಗು ಜಿಲ್ಲೆ, ಬ್ಯಾಡಗೊಟ್ಟದಲ್ಲಿ ಪುನರ್ವಸತಿ ಕಲ್ಪಿಸಿರುವ 354 ಕುಟುಂಬಗಳಿಗೆ ಹಾಗೂ ಬಸವನಹಳ್ಳಿಯ 181 ಕುಟುಂಬಗಳಿಗೆ ಸರಕಾರದ ಆದೇಶದಂತೆ ಪಡಿತರಗಳನ್ನು ಹಾಗೂ ಪೌಷ್ಟಿಕ ಆಹಾರಗಳನ್ನು ಗಿರಿಜನ ಕುಟುಂಬಗಳಿಗೆ ಹಾಗೂ ಹಾಡಿಗಳಲ್ಲಿರುವವರಿಗೆ ನೀಡದೆ ಇರುವ ಬಗ್ಗೆ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆ ಮೇರೆಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ದೂರರ್ಜಿಯ ಪ್ರತಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ಪ್ರಕರಣದ ಬಗ್ಗೆ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ. ಅಲ್ಲದೆ ಈ ಬಗ್ಗೆ ಆಯೋಗದ ಸಹಾಯಕ ವಿಲೇಖನಾಧಿಕಾರಿ ದೂರಿನ ಪರಿಶೀಲನೆಗೆ ಜಿಲ್ಲಾ ಆಯೋಗದ ಸಂಯೋಜಕರಿಗೂ ಲಗತ್ತಿಸಿದ್ದು, ದೂರುಗಳ ಬಗ್ಗೆ ವಿಚಾರಣೆ ನಡೆಸಿ ಮಾಹಿತಿ ರವಾನಿಸಲು ಸೂಚಿಸಿದ್ದಾರೆ.
ಈ ನಡುವೆ ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬ್ಯಾಡಗೊಟ್ಟ ಹಾಗೂ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿಯಲ್ಲಿರುವ ಆದಿವಾಸಿಗಳ ಪುನರ್ವಸತಿ ಕೇಂದ್ರದಲ್ಲಿ ಸ್ಥಗಿತಗೊಂಡಿದ್ದ ಮನೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರೆತಿದ್ದರೂ ಕುಂಟುತ್ತಾ ಸಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
552 ಕುಟುಂಬಗಳು ವಾಸಿಸುತ್ತಿರುವ ಈ ಕೇಂದ್ರಗಳಲ್ಲಿ ಕಳೆದ ಎರಡು ತಿಂಗಳ ಹಿಂದೆ ಸರಕಾರದಿಂದ ಹಣ ಮಂಜೂರಾಗದೆ ತಳಪಾಯ ಕಾಮಗಾರಿಯನ್ನು ಪೂರ್ಣಗೊಳಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ರಾಜ್ಯ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರನ್ವಯ ಕಳೆದ ತಿಂಗಳಿನಿಂದ ಮನೆ ನಿರ್ಮಾಣದೊಂದಿಗೆ ಗೋಡೆ ಕಟ್ಟುವ ಕಾಮಗಾರಿಯು ಪ್ರಗತಿಯಲ್ಲಿದೆ.
ಈಗಾಗಲೇ ಒಂದು ಮನೆ ನಿರ್ಮಾಣದ ವೆಚ್ಚ 3.91 ಲಕ್ಷ ರೂ ಆಗಿದ್ದು, ಹಣ ಸರ್ಕಾರದಿಂದ ಬಿಡುಗಡೆಯಾಗಿ ಜಿಲ್ಲಾಧಿಕಾರಿ ಮತ್ತು ಐಟಿಡಿಪಿ ಖಾತೆಯಲ್ಲಿ ಸೇರಿದ್ದರೂ ಅಲ್ಲಿಂದ ಬಿಡುಗಡೆಯಾಗದೆ ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಲು ಮೀನಾಮೇಷ ಎಣಿಸುತ್ತಿದ್ದಾರೆ.
ಈಗ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಮೂಲಕ 3.91 ಲಕ್ಷ ರೂ ನೀಡಿದರೂ ಈಗಾಗಲೇ ಜಿಎಸ್‍ಟಿ ಪರಿಣಾಮ ಮನೆಯ ಫಲಾನುಭವಿಗೆ 3.91 ಲಕ್ಷದಲ್ಲಿ 24,000 ರೂ ಜಿಎಸ್‍ಟಿಗೆ ಹೋಗುತ್ತಿದ್ದು, ಇನ್ನುಳಿದ ಹಣದಲ್ಲಿ ಕಾಮಗಾರಿ ನಡೆಸಬೇಕಾಗುತ್ತದೆ. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಮುಖೇನ ಸಮಾಜ ಕಲ್ಯಾಣ ಇಲಾಖೆ ಸರಕಾರಕ್ಕೆ ಇನ್ನು ಹೆಚ್ಚುವರಿಯಾಗಿ ಒಂದು ಮನೆಗೆ 34,000 ರೂ ನೀಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಇದರನುಗುಣವಾಗಿ ಬಹುದಿನಗಳ ಬೇಡಿಕೆಯಾಗಿದ್ದ ಆದಿವಾಸಿಗಳ ಪುನರ್ವತಿ ಕೇಂದ್ರಕ್ಕೆ ಮನೆ ನಿರ್ಮಾಣದ ಭಾಗ್ಯ ದೊರೆತು ಐದು ತಿಂಗಳಾದರು ಇನ್ನೂ ಪೂರ್ಣಗೊಳ್ಳದಾಗಿದೆ.
ಈ ಹಿಂದೆ ಕೇಂದ್ರಕ್ಕೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಮಣಿವಣ್ಣನ್ ಕೇಂದ್ರದಲ್ಲಿ ವಾಸ್ತವ್ಯ ಹೂಡಿ, ಅಧಿಕಾರಿಗಳ ಸಭೆ ನಡೆಸಿ ಮೂರು ತಿಂಗಳೊಳಗೆ ಖಾಯಂ ಮನೆಯನ್ನು ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿ, ಅತಿ ಶೀಘ್ರವಾಗಿ ಹಣವನ್ನು ಬಿಡುಗಡೆಗೊಳಿಸಿ ಕಾಮಗಾರಿಯನ್ನು ಹಂತ ಹಂತವಾಗಿ ಪೂರ್ಣಗೊಳಿಸಲು ಸೂಚಿಸಿದ್ದರು. ಆದರೆ, ನಿಧಾನಗತಿಯಲ್ಲಿನ ಹಣದ ಬಿಡುಗಡೆಯಿಂದಾಗಿ ಇದುವರೆಗೂ ಮನೆಗಳ ಪೂರ್ಣಸ್ಥಿತಿಗೆ ಬರಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಬ್ಯಾಡಗೊಟ್ಟ ಮತ್ತು ಬಸವನಹಳ್ಳಿ ಪುನರ್ವಸತಿ ಕೇಂದ್ರಲ್ಲಿ 8ಕ್ಕೂ ಹೆಚ್ಚು ಗುತ್ತಿಗೆದಾರರು ಮನೆಗಳ ಕಾಮಗಾರಿಯನ್ನು ನಿರ್ವಹಿಸುತ್ತಿದ್ದು, ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ನಿಧಾನಗತಿ ಕಾಮಗಾರಿಯನ್ನು ನಡೆಸುತ್ತಿರುವದು ಕಂಡುಬರುತ್ತಿದೆ. ಸ್ಥಳಕ್ಕೆ ತೆರಳಿದ ಸುದ್ದಿಗಾರರೊಂದಿಗೆ ಬ್ಯಾಡಗೊಟ್ಟ ಆದಿವಾಸಿಗಳ ಮುಖಂಡ ಮಲ್ಲಪ್ಪ ಮಾತನಾಡುತ್ತಾ, 524 ಕುಟುಂಬಗಳಿಗೆ ಮೂರು ತಿಂಗಳೊಳಗೆ ಶಾಶ್ವತ ಮನೆಯನ್ನು ನಿರ್ಮಿಸಿಕೊಡುವ ಭರವಸೆ ನೀಡಿದರೂ; ಇದುವರೆಗೂ ಅರ್ಧಗೋಡೆ ಕಟ್ಟಿ ಕಿಟಕಿ ಬಾಗಿಲುಗಳನ್ನು ನಿಲ್ಲಿಸದೆ ಆಮೆಗತಿಯಲ್ಲಿ ಕೆಲಸವನ್ನು ನಡೆಸುತ್ತಿದ್ದಾರೆ. ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯಿಂದ ಹಣ ಮಂಜೂರು ಮಾಡದೆ ಕಾಮಗಾರಿ ಸ್ಥಗಿತಗೊಳ್ಳುವ ಹಂತ ತಲುಪಿದೆ ಎಂದು ಆರೋಪಿಸಿದರು.
ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಣ ಮಂಜೂರು ಮಾಡಿ ಮನೆಗಳನ್ನು ತುರ್ತಾಗಿ ನಿರ್ಮಿಸಿ ವಾಸಿಸಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ತಾತ್ಕಾಲಿಕ ಶೆಡ್‍ಗಳನ್ನು ಕಳೆದ ಐದು ತಿಂಗಳ ಹಿಂದೆ ಬ್ಯಾಡಗೊಟ್ಟದಲ್ಲಿ ನಿರ್ಮಿಸಿಕೊಟ್ಟರು; ಬಾಗಿಲುಗಳ ಅಳತೆಯನ್ನು ತೆಗೆದುಕೊಂಡು ಹೋದವರು ಇದುವರೆಗು ಶೆಡ್‍ಗೆ ಬಾಗಿಲುಗಳನ್ನು ಅಳವಡಿಸಲು ಬಂದಿಲ್ಲ. ಬಾಗಿಲ ಬದಲು ಬಟ್ಟೆಯ ಸಹಾಯದಿಂದ ಬಾಗಿಲಿಗೆ ಮುಚ್ಚಲಾಗಿದೆ.
ಹಣ ಬಿಡುಗಡೆಯಾಗದಿದ್ದರೆ ಮುಂದಿನ ತಿಂಗಳಿನಲ್ಲಿ ಚುನಾವಣಾ ಘೋಷಣೆಯಾದಲ್ಲಿ ನೀತಿಸಂಹಿತೆಯ ನೆಪವೊಡ್ಡಿ ಮನೆಗಳ ಕಾಮಗಾರಿಯು ಸ್ಥಗಿತಗೊಳ್ಳಬಹುದು ಎಂಬ ಆತಂಕವನ್ನು ಸ್ಥಳೀಯ ಮುಖಂಡರು ವ್ಯಕ್ತಪಡಿಸಿದ್ದಾರೆ.