ಸೋಮವಾರಪೇಟೆ, ನ.9: ತಾಲೂಕಿನ ಆಲೂರು ಸಿದ್ದಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ವ್ಯಕ್ತಿಯ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಮಾಡಿದ ಆರೋಪದಲ್ಲಿ ಯಾವದೇ ಹುರುಳಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಹಾಗೂ ಮಹಿಳಾ ಆಯೋಗದ ಜಿಲ್ಲಾ ಮಹಿಳಾ ಮಾರ್ಗದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ.

ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹಿಳಾ ಆಯೋಗದ ಜಿಲ್ಲಾ ಮಹಿಳಾ ಮಾರ್ಗದರ್ಶಿ ಅಶ್ವಿನಿ ಕೃಷ್ಣಕಾಂತ್, ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ವಿಶ್ವನಾಥ್ ಅವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆ ಪ್ರಾಂಶುಪಾಲರು ಸಂಬಂಧಿಸಿದ ಸೆಕ್ಯೂರಿಟಿ ಏಜೆನ್ಸಿಗೆ ಪೋಷಕರ ಅಭಿಪ್ರಾಯದಂತೆ ದೂರು ನೀಡಿದ್ದಾರೆ. ಇದಾದ ನಂತರ ಶಾಲೆಯ ಪ್ರಾಂಶುಪಾಲರಿಗೆ ಹಲವು ವ್ಯಕ್ತಿಗಳು ಬೆದರಿಕೆ ಕರೆ ಮಾಡಿದ್ದು, ಈ ಬಗ್ಗೆ ಅವರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಇದರ ಬಗ್ಗೆ ಪರಿಶೀಲಿಸಿದಾಗ ಭದ್ರತಾ ಸಿಬ್ಬಂದಿಯ ವೈಫಲ್ಯವೇ ಮೇಲ್ನೋಟಕ್ಕೆ ಎದ್ದುಕಾಣುತ್ತಿದೆ ಎಂದರು.

ಆಯೋಗಕ್ಕೆ ಸಲ್ಲಿಸಲ್ಪಟ್ಟ ದೂರಿನ ಬಗ್ಗೆ ವಿಚಾರಣೆ ನಡೆಸಲು ಶಾಲೆಯಲ್ಲಿ ಪೋಷಕರ ಸಭೆ ಆಯೋಜಿಸಿದ ಸಂದರ್ಭ, ಹಲವಷ್ಟು ಪೋಷಕರು ಭದ್ರತಾ ಸಿಬ್ಬಂದಿಯ ವಿರುದ್ಧ ಅರೋಪ ಮಾಡಿದ್ದಾರೆ. ಈ ನಡುವೆ ಶಾಲೆಯ ಸ್ವಚ್ಛತಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆಯೂ ಜರುಗಿದ್ದು ಈ ಬಗ್ಗೆ ಶನಿವಾರಸಂತೆ ಠಾಣೆಯಲ್ಲಿ ದೂರು ದಾಖಲಾಗಿದೆ. ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಯ ಪರವಾಗಿಯೇ ದಲಿತ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಬೆಂಬಲಕ್ಕೆ ನಿಂತಿರುವದು ಸರಿಯಲ್ಲ ಎಂದು ಅಭಿಪ್ರಾಯಿಸಿದರು.

ಖಾಸಗಿ ಏಜೆನ್ಸಿಯ ಮೂಲಕ ನೇಮಕಗೊಂಡ ಭದ್ರತಾ ಸಿಬ್ಬಂದಿ ಶಾಲಾ ಮಕ್ಕಳಿಂದ ಹಣ ವಸೂಲಿ ಮಾಡಿರುವ ಬಗ್ಗೆ ದಾಖಲೆಗಳಿವೆ. ಸ್ವತಃ ಮಕ್ಕಳೇ ಈ ಬಗ್ಗೆ ದೂರು ನೀಡಿದ್ದಾರೆ. ಏಜೆನ್ಸಿಯವರೇ ಈತನನ್ನು ಕೆಲಸದಿಂದ ತೆಗೆದಿದ್ದರೂ ಇಂದಿಗೂ ವಸತಿ ಗೃಹವನ್ನು ಬಿಟ್ಟುಕೊಟ್ಟಿಲ್ಲ. ಈ ಬಗ್ಗೆ ಪ್ರಾಂಶುಪಾಲರು ಪ್ರಶ್ನಿಸಿದ್ದನ್ನೇ ದಲಿತ ಸಂಘಟನೆಗಳ ಒಕ್ಕೂಟದವರು ದೌರ್ಜನ್ಯದ ಹೆಸರಿನಲ್ಲಿ ತಪ್ಪು ಸಂದೇಶ ರವಾನಿಸುತ್ತಿರುವದು ಸಮಂಜಸವಲ್ಲ ಎಂದು ಅಶ್ವಿನಿ ಕೃಷ್ಣಕಾಂತ್ ಹೇಳಿದರು.

ಈ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ವರದಿ ತಯಾರಿಸಲಾಗಿದ್ದು, ರಾಜ್ಯ ಮಹಿಳಾ ಆಯೋಗಕ್ಕೆ ವರದಿ ಸಲ್ಲಿಸಲಾಗುವದು. ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಮಕ್ಕಳ ಭವಿಷ್ಯ ಹಾಗೂ ಭದ್ರತೆಯ ದೃಷ್ಟಿಯಿಂದ ವಜಾಗೊಂಡಿರುವ ಭದ್ರತಾ ಸಿಬ್ಬಂದಿಯನ್ನು ಅಲ್ಲಿಂದ ಹೊರ ಕಳುಹಿಸಬೇಕು. ಈ ಬಗ್ಗೆ ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೂ ದೂರು ನೀಡಲಾಗುವದು ಎಂದರು.

ಗೋಷ್ಠಿಯಲ್ಲಿ ಉಪಸ್ಥಿತರಿದ್ದ ಶಾಲಾಭಿವೃದ್ಧಿ ಸಮಿತಿಯ ಶೇಷಪ್ಪ ಮಾತನಾಡಿ, ಭದ್ರತಾ ಸಿಬ್ಬಂದಿಯಾಗಿರುವ ವಿಶ್ವನಾಥ್ ಅವರ ಮೇಲೆ ಹಲವಷ್ಟು ಆರೋಪಗಳಿದ್ದು, ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಪೋಷಕರ ಸಭೆಯಲ್ಲೇ ಸ್ವಚ್ಛತಾ ಸಿಬ್ಬಂದಿ ಮೋಹನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಮಕ್ಕಳ ಭದ್ರತಾ ದೃಷ್ಟಿಯಿಂದ ಇವರನ್ನು ಬೇರೆಡೆಗೆ ಕಳುಹಿಸಬೇಕು. ಇಂತಹ ಬೆಳವಣಿಗೆಯಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದು, ಸಂಘಟನೆಗಳು ಸತ್ಯಾಂಶ ಅರಿತು ಮುಂದಡಿಯಿಡಬೇಕು ಎಂದರು.

ಭದ್ರತಾ ಸಿಬ್ಬಂದಿ ವಿಶ್ವನಾಥ್ ಅವರು ಪ್ರಾಂಶುಪಾಲರನ್ನೇ ಬೇರೆಡೆಗೆ ವರ್ಗಮಾಡಿಸುವದಾಗಿ ಹೇಳುತ್ತಿದ್ದಾರೆ. ರಾಜಕೀಯ ಮುಖಂಡರು ದೂರವಾಣಿ ಮೂಲಕ ಪ್ರಾಂಶುಪಾಲರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದರೆ ಪೋಷಕರೂ ಸಹ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದರು.

ಗೋಷ್ಠಿಯಲ್ಲಿ ಶಾಲಾಭಿವೃದ್ಧಿ ಸಮಿತಿಯ ಶಶಿಧರ್, ಬೇಬಿ, ಹರಿಣಿ, ಲಿಂಗರಾಜು, ಸ್ವಚ್ಛತಾ ಸಿಬ್ಬಂದಿ ಮೋಹನ್‍ಕುಮಾರ್ ಅವರುಗಳು ಉಪಸ್ಥಿತರಿದ್ದರು.