ಮಡಿಕೇರಿ, ನ. 9: ಎರಡು ದಶಕಗಳ ಹಿಂದೆ 1997ರ ಹೊತ್ತಿಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದು, ಜಿಲ್ಲೆಯ ಜನತೆಯ ನಾಡಿಮಿಡಿತ ಅರ್ಥೈಸಿಕೊಂಡಿರುವ ಇಂದಿನ ಎಡಿಜಿಪಿ ಭಾಸ್ಕರ ರಾವ್, ಟಿಪ್ಪು ಜಯಂತಿ ಹಿನ್ನೆಲೆ ಕಾನೂನು ಸುವ್ಯವಸ್ಥೆ ಸಲುವಾಗಿ ರಾಜ್ಯ ಸರಕಾರದಿಂದ ಕೊಡಗು ಜಿಲ್ಲೆಗೆ ನಿಯೋಜನೆಗೊಂಡಿದ್ದು, ಈ ದಿನ ಮಡಿಕೇರಿಯ ರಸ್ತೆಗಳಲ್ಲಿ ಸಂಚರಿಸುತ್ತಾ ಜನತೆಯಲ್ಲಿ ಅಚ್ಚರಿ ಮೂಡಿಸಿದರು. ಪೊಲೀಸರಿಗೆ ಹೊಸ ಸ್ಫೂರ್ತಿ ತುಂಬಿದರು.ಇಪ್ಪತ್ತು ವರ್ಷಗಳ ಹಿಂದಿನ ಅದೇ ಉತ್ಸಾಹ, ನಗುಮೊಗ ದೊಂದಿಗೆ ಹರ್ಷಚಿತ್ತರಾಗಿ ಜಿಲ್ಲಾ ಪೊಲೀಸ್ ಕೇಂದ್ರ ಮೈದಾನದಿಂದ ಆರಂಭಗೊಂಡ ಪಥ ಸಂಚಲನದಲ್ಲಿ ಸಾವಿರಾರು ಪೊಲೀಸರೊಂದಿಗೆ ಮುಂಚೂಣಿಯಲ್ಲಿದ್ದು ಸುಮಾರು 6 ಕಿ.ಮೀ. ಹೆಜ್ಜೆ ಹಾಕಿದರು.

ಇವರೊಂದಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್, ಹಾಸನ ಕೆಎಸ್ಸಾರ್ಪಿ ಕಮಾಂಡೆಂಟ್ ಕೃಷ್ಣಪ್ಪ, ಡಿವೈಎಸ್‍ಪಿ ಕೆ.ಎಸ್. ಸುಂದರ ರಾಜ್, ಕೇಂದ್ರ ರ್ಯಾಪಿಡ್ ಆ್ಯಕ್ಷನ್ ಪೋರ್ಸ್ (ಆರ್.ಪಿ.ಎ.) ತುಕಡಿಯ ಡೆಪ್ಯುಟಿ ಕಮಾಂಡೆಂಟ್ ರಚಿತ, ಇನ್ಸ್‍ಪೆಕ್ಟರ್ ಐ.ಪಿ. ಮೇದಪ್ಪ ಸೇರಿದಂತೆ ಮಡಿಕೇರಿ ಪೊಲೀಸ್ ಉಪ ವಿಭಾಗ ಸಹಿತ ಬೇರೆ ಬೇರೆ ಜಿಲ್ಲೆಗಳಿಂದ ಬಂದಿದ್ದ ಸಾವಿರಾರು ಸಿಬ್ಬಂದಿ, ಮಹಿಳಾ ಸಿಬ್ಬಂದಿ, ಎಡಿಜಿಪಿ ಮುಂದಾಳತ್ವದಲ್ಲಿ ಹೆಜ್ಜೆಗೆ ಹೆಜ್ಜೆಗೂಡಿ ನಡೆಯುವ ಮೂಲಕ ನಾಗರಿಕ ಸಮಾಜಕ್ಕೆ ಆತ್ಮಸ್ಥೈರ್ಯದೊಂದಿಗೆ ವಿಚಿತ್ರಕಾರಕ ಶಕ್ತಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.