ಶ್ರೀಮಂಗಲ: ಚುನಾವಣೆ ಸಮೀಪಿಸುತ್ತಿರುವಂತೆ ವಿವಿಧ ರಾಜಕೀಯ ಪಕ್ಷಗಳ ಕಾರ್ಯಚಟುವಟಿಕೆ ತೀವ್ರಗೊಳ್ಳುತ್ತಿದ್ದು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಸಾಧನೆಯನ್ನು ತಲುಪಿಸುವಂತಹ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲ್ಪಟ್ಟಿತ್ತು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಚುನಾವಣೆಯಲ್ಲಿ ನೀಡಿದ ಭರವಸೆಯನ್ನು ಸಂಪೂರ್ಣವಾಗಿ ಈಡೇರಿಸಿವೆ. ರಾಜ್ಯದಲ್ಲಿ ಪ್ರತಿ ಹಳ್ಳಿ ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಜಾತಿ ಜನಾಂಗದ ಭೇದ ಮಾಡದೆ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ರೈತರ ಸಾಲ ಮನ್ನಾ ಮಾಡುವದರ ಮೂಲಕ ರೈತರಿಗೆ ಆರ್ಥಿಕವಾಗಿ ಬೆಂಬಲ ನೀಡಲಾಗುತ್ತಿದೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರ ಮಾತುಗಳಲ್ಲೇ ಕಾಲ ಹರಣ ಮಾಡುತ್ತಿದ್ದು, ಇದೊಂದು ಘೋಷಣೆಯ ಸರ್ಕಾರ. ನೋಟು ಅಮಾನೀಕರಣ ಹಾಗೂ ಅವೈಜ್ಞಾನಿಕ ಜಿಎಸ್‍ಟಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವದರ ಮೂಲಕ ಭಾರತದ ಆರ್ಥಿಕತೆಯನ್ನು ಕುಸಿಯುವಂತೆ ಮಾಡಿದೆ ಎಂದು ಕಿಡಿಕಾರಿದರು.
ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷ ಜನಸಮಾನ್ಯರ ಪಕ್ಷವಾಗಿದೆ. ಈಗಾಗಲೇ ಪೊನ್ನಂಪೇಟೆ ಬ್ಲಾಕ್ ವತಿಯಿಂದ ಚುನಾವಣೆಗೆ ಪೂರ್ವ ತಯಾರಿಯಾಗಿ ವಿವಿಧ ಹಂತಗಳಲ್ಲಿ ಮತದಾರರನ್ನು ಸಂಪರ್ಕಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ವಲಯ ಅಧ್ಯಕ್ಷ ಮತ್ರಂಡ ದಿಲ್ಲು ಮಾತನಾಡಿ, ಈಗಾಗಲೇ ಚುನಾವಣೆ ಸಮೀಪಿಸುತ್ತಿದ್ದು, ಈ ಬಾರಿ ಕೊಡಗಿನಲ್ಲಿ 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕಾರ್ಯಕರ್ತರು ಈಗಾಗಲೇ ಸಾಕಷ್ಟು ಶ್ರಮವಹಿಸಿ ಸರ್ಕಾರದ ವಿವಿಧ ಯೋಜನೆಗಳನ್ನು, ಕಾರ್ಯಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇಂತಹ ಕೆಲಸಗಳು ಮತ್ತಷ್ಟು ನಡೆಯಬೇಕಾಗಿದೆ. ಪ್ರತೀಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆಗೆ ಮಹತ್ವವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಸುಮಿತ ಗಣೇಶ್, ಗ್ರಾ.ಪಂ. ಉಪಾಧ್ಯಕ್ಷೆ ಮಂಜುಳಾ, ತಾ.ಪಂ. ಸದಸ್ಯೆ ಮೂಕಳೇರ ಆಶಾ, ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ, ಪ್ರಮುಖರಾದ ಸಾಜಿ ಅಚ್ಚುತ್ತನ್, ಮೂಕಳಮಾಡ ಬೊಳ್ಳಿಕಟ್ಟಿ, ಗ್ರಾ.ಪಂ. ಸದಸ್ಯರಾದ ಕರ್ತಮಾಡ ರೃಷಿಕ, ಮಂಜು, ಚೆಪ್ಪುಡೀರ ರೂಪ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಆಲೀರ ರಶೀದ್, ಮಹಿಳಾ ಘಟಕದ ಅಧ್ಯಕ್ಷೆ ಕೋಳೆರ ಭಾರತಿ, ಮೂಕಳೇರ ಕುಶಾಲಪ್ಪ, ತೀತಿರ ಜಯ, ರಾಘವ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.