ಮಡಿಕೇರಿ, ನ. 9: ದೇಶದ ಯುವಜನತೆಗೆ ಭಾರತದ ಸೇನೆಯ ಮೂರು ವಿಭಾಗದಲ್ಲಿಯೂ ಕೂಡ ಹೇರಳ ಅವಕಾಶವಿದೆಯೆಂದು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ಸಂಸ್ಥೆಯ ಸದಸ್ಯರಾಗಿರುವ ಬ್ರಿಗೇಡಿಯರ್ ಅಜಯ್ ಶರ್ಮ ಅಭಿಪ್ರಾಯಪಟ್ಟರು. ಸಮೀಪದ ಪಾಲಿಬೆಟ್ಟ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶಾರೀರಿಕ ಅರ್ಹತೆ ಹಾಗೂ ಸಮರ್ಪಣಾ ಮನೋಭಾವನೆ ಇರುವ ಯುವಕ-ಯುವತಿಯರು ಸೇನೆಗೆ ಸೇರಿ ರಾಷ್ಟ್ರ ಸೇವೆ ಮಾಡುವದರ ಮುಖಾಂತರ ಆರೋಗ್ಯವಂತ ಸಮಾಜ ಹಾಗೂ ರಾಷ್ಟ್ರವನ್ನು ನಿರ್ಮಿಸಬಹುದೆಂದು ಹೇಳಿದರು. ಸೇನೆಗೆ ಸೇರ್ಪಡೆಗೊಂಡ ಯುವಕರಿಗೆ ಕ್ರೀಡೆಯಲ್ಲಿ, ಶಿಕ್ಷಣದಲ್ಲಿ ಮುಂದುವರಿಯಲು ಕೂಡ ಅವಕಾಶವಿದ್ದು, ಯುವ ಜನತೆ ಸೇನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯೆ ಡಾ. ಕೆ.ಎಂ. ಭವಾನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಎ. ಎ. ಅಬ್ದುಲ್ಲಾ ಹಾಗೂ ಉಪನ್ಯಾಸಕ ವರ್ಗದವರು ಹಾಜರಿದ್ದರು.