ಮಡಿಕೇರಿ, ನ. 10: ಕರ್ನಾಟಕ ಸರಕಾರದಿಂದ ಜಾರಿಗೊಂಡಿರುವ 3ನೇ ವರ್ಷದ ಟಿಪ್ಪು ಜಯಂತಿ ಕಾರ್ಯಕ್ರಮವು ಕೊಡಗು ಬಂದ್ ಹಾಗೂ ತೀವ್ರ ವಿರೋಧದ ನಡುವೆಯೂ ಇಂದು ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲೂಕು ಕೇಂದ್ರಗಳಲ್ಲಿ ಜಿಲ್ಲಾಡಳಿತದಿಂದ ನೆರವೇರಿತು. ವ್ಯಾಪಕ ಪೊಲೀಸ್ ಭದ್ರತೆಯಲ್ಲಿಯೂ ಮೂರು ಕಡೆಗಳಲಿ ಬಿಜೆಪಿ ಚುನಾಯಿತ ಜನಪ್ರತಿನಿಧಿಗಳು ಟಿಪ್ಪು ಜಯಂತಿ ಆಚರಣೆಗೆ ಕಪ್ಪುಪಟ್ಟಿ ಧರಿಸಿ ವಿರೋಧಿಸುವ ಮೂಲಕ ಮೂವರು ಬಿಜೆಪಿ ಶಾಸಕರು ಸಹಿತ ಬಂಧನಕ್ಕೆ ಒಳಗಾದರು. ಆ ಬೆನ್ನಲ್ಲೇ ಟಿಪ್ಪು ಜಯಂತಿ ಆಚರಣಾ ವಿರೋಧಿ ಸಮಿತಿ ಅಧ್ಯಕ್ಷರ ಸಹಿತ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಈ ನಡುವೆ ಚೆಟ್ಟಳ್ಳಿ ಮಾರ್ಗದ ಎರಡು ಕಡೆ ರಸ್ತೆಗೆ ಅಡ್ಡಲಾಗಿ ಮರ ಕಡಿದುರುಳಿಸಿದ, ಕಾಲೂರಿಗೆ ತೆರಳುತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದಕ್ಕೆ ಕಲ್ಲು ತೂರಿದ ಕೃತ್ಯ ನಡೆದಿದೆ. ಇನ್ನು ಮೂರು ವರ್ಷ ಹಿಂದೆ ಟಿಪ್ಪು ಜಯಂತಿ ವೇಳೆ ದೊಂಬಿಯಲ್ಲಿ ಹುತಾತ್ಮರಾದ ಕುಟ್ಟಪ್ಪ ಅವರ ಸ್ಮರಣೆಯನ್ನು ಅಲ್ಲಲ್ಲಿ ಬಿಜೆಪಿ ಸಂಘ ಪರಿವಾರದೊಂದಿಗೆ ಮೃತರ ಕುಟುಂಬ ಸಹಿತ ಶಾಂತಿ ಪೂಜೆ ಸಲ್ಲಿಸಿದರು. ಒಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ವ್ಯಾಪಕ ಕಣ್ಗಾವಲು ನಡುವೆ ಇಂದು ಸಣ್ಣಪುಟ್ಟ ಘಟನೆ ಹೊರತು ಶಾಂತಿ ಕಾಪಾಡುವಲ್ಲಿ ಸ್ಪಂದಿಸಿದ ನಾಡಿನ ಜನತೆಗೆ ಎಡಿಜಿಪಿ ಭಾಸ್ಕರ್‍ರಾವ್, ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಮೂಲಕ ಕೊಡಗಿನ ಜನತೆ ನಿಟ್ಟುಸಿರು ಬಿಡುವಂತಾಯಿತು.

ಸರಕಾರದ ಪೂವ ನಿರ್ಧರಿತ ಟಿಪ್ಪು ಜಯಂತಿ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆ. 144 ಅನ್ವಯ ನಿಷೇಧಾಜ್ಞೆ ಜಾರಿಗೊಂಡು, ಕೊಡಗಿನ ದೇವಾಲಯಗಳು, ಪ್ರಾರ್ಥನಾ ಮಂದಿರಗಳು, ಶಿಕ್ಷಣ ಸಂಸ್ಥೆಗಳು, ಬಸ್ ನಿಲ್ದಾಣ, ಮಾರುಕಟ್ಟೆ, ಆಯಕಟ್ಟಿನ ಎಲ್ಲ ಸ್ಥಳಗಳಲ್ಲಿ ಸಿಸಿ ಕ್ಯಾಮರಾದೊಂದಿಗೆ ಪೊಲೀಸರು ಮುಂಜಾವಿನಿಂದಲೇ ನಿಯೋಜಿಸಿದ್ದು ಗೋಚರಿಸಿತು.

ಪೂರ್ವ ನಿರ್ಧಾರದಂತೆ ಖಾಸಗಿ ಬಸ್‍ಗಳು ರಸ್ತೆಗೆ ಇಳಿಯದರಿಂದ ರಾಜ್ಯ ಸಾರಿಗೆ ಸಂಸ್ಥೆಯ ಬೆರಳೆಣಿಕೆಯಷ್ಟು ಬಸ್ ಓಡಾಟ ಕಂಡು ಬಂದರೂ, ಪ್ರಯಾಣಿಕರು ಇಲ್ಲದೆ ಖಾಲಿ ಖಾಲಿ ಕಂಡುಬಂತು. ಆಟೋ ರಿಕ್ಷಾಗಳು ಕೂಡ ಬೆರಳೆಣಿಕೆಯಲ್ಲಿ ಸಂಚರಿಸುತ್ತಿದ್ದರೆ, ಜಿಲ್ಲಾ ಕೇಂದ್ರದಲ್ಲಿ ತೀರಾ ವಿರಳ ಸಂಖ್ಯೆಯಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳ ಆಗಮನ ಎದುರಾಯಿತು.

ಎಂದಿನಂತೆ ಹಾಲು, ಔಷಧಿ, ಪತ್ರಿಕಾ ವಿತರಣೆ ಬೆಳಿಗ್ಗೆ ಹೊತ್ತು ಕಂಡು ಬಂದರೆ, ಮೂಡಣದಲ್ಲಿ ಸೂರ್ಯನ ತಾಪ ಏರುತ್ತಿದ್ದಂತೆ ಅಲ್ಲೊಂದು, ಇಲ್ಲೊಂದು ಅಂಗಡಿಗಳು ತೆರೆದುಕೊಂಡಿದ್ದು, ಕಾಣಬಂತು. ಶುಕ್ರವಾರದ ಮಡಿಕೇರಿ ಸಂತೆ ರದ್ದುಗೊಂಡಿದ್ದರೂ, ಒಳಾಂಗಣದಲ್ಲಿ ಸ್ಥಳೀಯ ವ್ಯಾಪಾರಿಗಳು ಮಾರಾಟದಲ್ಲಿ ತೊಡಗಿದ್ದು, ಮೀನು ಮಾರಾಟ ಮಳಿಗೆಗಳು ತೆರೆದುಕೊಂಡಿದ್ದವು.

ಟಿಪ್ಪು ಜಯಂತಿ ವಿರೋಧಿಸಿ ಹೋರಾಟ ಸಮಿತಿ ನೀಡಿದ್ದ ಕೊಡಗು ಬಂದ್‍ಗೆ ವಿಶೇಷವಾಗಿ ದಕ್ಷಿಣ ಕೊಡಗಿನಾದ್ಯಂತ ಹಾಗೂ ಸೋಮವಾರಪೇಟೆ ತಾಲೂಕು ಮತ್ತು ಕುಶಾಲನಗರ ವ್ಯಾಪ್ತಿಯಲ್ಲಿ ಉತ್ತಮ ಸ್ಪಂದನದೊಂದಿಗೆ, ನಾಪೋಕ್ಲು, ಸುಂಟಿಕೊಪ್ಪದಲ್ಲಿ ಮಾತ್ರ ಭಾಗಶಃ ಬೆಂಬಲ ಗೋಚರಿಸಿತು.

ಕೊಡಗು ಪೊಲೀಸ್ ತಂಡದೊಂದಿಗೆ ಕೇಂದ್ರ ಮೀಸಲು ಪೊಲೀಸ್ ಕ್ಷಿಪ್ರ ಕಾರ್ಯಪಡೆ ತುಕಡಿ, ಕರ್ನಾಟಕ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ಸಿಬ್ಬಂದಿ ಹಗಲಿರುಳು ಶ್ರಮಿಸುವದರೊಂದಿಗೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸುತ್ತಿದ್ದರು. ಇಲಾಖಾ ವಾಹನಗಳಲ್ಲಿ ಭದ್ರತಾ ಸಿಬ್ಬಂದಿಗೆ ನಿಯೋಜಿಸಲ್ಪಟ್ಟ ಸ್ಥಳದಲ್ಲೇ ಉಪಾಹಾರ, ಊಟ, ಕುಡಿಯುವ ನೀರಿನ ಪೂರೈಕೆಯಾಗುತ್ತಿದ್ದದ್ದು ಎದುರಾಯಿತು.ಟಿಪ್ಪು ಜಯಂತಿ ಹಿನ್ನೆಲೆ ಕಾನೂನು ಸುವ್ಯವಸ್ಥೆಯೊಂದಿಗೆ ಕೊಡಗಿನಲ್ಲಿ ಶಾಂತಿ ಕಾಪಾಡಲು ಶ್ರಮಿಸಿದ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಹಿತ ಸರ್ವರಿಗೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕೃತಜ್ಞತೆಯ ನುಡಿಯಾಡಿದರು. ಎಡಿಜಿಪಿ ಭಾಸ್ಕರ್‍ರಾವ್ ಕೂಡ ಡಿಸಿ, ಎಸ್ಪಿ ಸಹಿತ ಕೊಡಗಿನ ಜನತೆಗೆ ಶ್ಲಾಘನೆ ವ್ಯಕ್ತಪಡಿಸಿದರು.