ಮಡಿಕೇರಿ, ನ. 10: ಇಲ್ಲಿನ ಹಳೆಯ ವಿಧಾನ ಸಭಾಂಗಣದಲ್ಲಿ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮ ಸರಕಾರದ ನಿರ್ದೇಶನದಂತೆ ನಡೆಯಿತಾದರೂ, ಹಲವಷ್ಟು ಗೊಂದಲಗಳಿಗೆ ಸಾಕ್ಷಿಯಾಯಿತು. ಜಿಲ್ಲಾ ಕೇಂದ್ರ ಸ್ಥಳ ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ನಾಕಾಬಂಧಿ ಸಹಿತ ಪ್ರತಿ ವ್ಯಕ್ತಿ ಹಾಗೂ ವಾಹನಗಳ ತಪಾಸಣೆ ನಡೆದಿತ್ತು.ಈ ನಡುವೆ ಸ್ವತಃ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಜಿಲ್ಲಾಧಿಕಾರಿ ಸಹಿತ ಮುನ್ನೆಚ್ಚರಿಕೆ ಕ್ರಮಗಳನ್ನು ಗಮನಿಸುತ್ತಲೇ ಇದ್ದರು. ನಿಗಧಿತ 10 ಗಂಟೆಗೆ ಮುಂಚಿತವಾಗಿಯೇ ನಗರದ ಪ್ರಥಮ ಪ್ರಜೆ ಕಾವೇರಮ್ಮ ಸೋಮಣ್ಣ ಆಗಮಿಸಿದರು. ಅನಂತರದಲ್ಲಿ ಆಹ್ವಾನಿತ ಜನ ಪ್ರತಿನಿಧಿಗಳು, ಕಾಂಗ್ರೆಸ್ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಕೈಬೆರಳೆಣಿಕೆಯಷ್ಟು ಅಲ್ಪಸಂಖ್ಯಾತ ಆಹ್ವಾನಿತರು ಸಭಾಂಗಣದಲ್ಲಿ ಕಾಣಿಸಿಕೊಂಡರು.

(ಮೊದಲ ಪುಟದಿಂದ) ಇತ್ತ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ನಗರಸಭಾ ಸದಸ್ಯರು ಪ್ರವೇಶಿಸಿದ ಕೆಲ ಹೊತ್ತಿನಲ್ಲಿ ಸಂಪೂರ್ಣ ಕಪ್ಪು ವಸ್ತ್ರಧಾರಿಯಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕೋಟೆಯೊಳೆಗೆ ಹೊಕ್ಕ ಬೆನ್ನಲ್ಲೇ ಬಿಜೆಪಿಯ ಜಿ.ಪಂ., ತಾ.ಪಂ., ನಗರಸಭೆ ಪ್ರತಿನಿಧಿಗಳ ಆಗಮನವಾಯಿತು. ನೇರವಾಗಿ ವೇದಿಕೆಯೇರಿದ ಶಾಸಕರೊಂದಿಗೆ ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಕಾಣಿಸಿಕೊಂಡರು.

ಶಾಂತಿ ಸುವ್ಯವಸ್ಥೆಯ ಉಸ್ತುವಾರಿ ಹೊತ್ತಿದ್ದ ಎಡಿಜಿಪಿ ಸಹಿತ ಅತಿಥಿಗಣ್ಯರು ವೇದಿಕೆ ಆಗಮಿಸಿ ಕಾರ್ಯಕ್ರಮ ನಿರೂಪಣೆಯಾಗುತ್ತಿದ್ದಂತೆಯೇ ಧ್ವನಿವರ್ಧಕ ಬಳಿ ಸಾಗಿದ ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುತ್ತಾ, ಕೊಡಗು, ಮಂಗಳೂರು, ಕಣ್ಣೂರು ಸೇರಿದಂತೆ ಹಿಂದೂಗಳು ಮತ್ತು ಕ್ರೈಸ್ತರ ಮೇಲಿನ ದೌರ್ಜನ್ಯ ಕುರಿತು ಕಾಂಗ್ರೆಸ್ಸಿಗರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವರಿಗೆ ಮಾಡಿಕೊಡುವಂತೆ ಭಿನ್ನವಿಸಿದರು.

ಬಳಿಕ ಶಾಸಕ ಅಪ್ಪಚ್ಚುರಂಜನ್ ಧ್ವನಿವರ್ಧಕ ಬಳಿ ಬಂದಾಗ ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ‘ನಿಮ್ಮ ಭಾಷಣ ಕೇಳಲು ನಾವಿಲ್ಲಿ ಬಂದಿಲ್ಲ’ ಎಂದು ಆಕ್ಷೇಪಿಸುತ್ತಿದ್ದಂತೆಯೇ ಬಿಜೆಪಿ ಪ್ರತಿನಿಧಿಗಳಿಂದ ಭಾರತಮಾತೆಗೆ ಜೈಕಾರ ಮೊಳಗಿತು. ಶಾಸಕರು ಕೂಡ ಧ್ವನಿವರ್ಧಕದಿಂದ ಟಿಪ್ಪು ಹಾಗೂ ಕಾಂಗ್ರೆಸ್‍ಗೆ ಧಿಕ್ಕಾರ ಕೂಗಿದರು. ಸ್ಥಳದಲ್ಲೇ ಭದ್ರತಾ ವ್ಯವಸ್ಥೆಯನ್ನು ಗಮನಿಸುತ್ತಿದ್ದ ಅಧಿಕಾರಿಗಳು ಅಪ್ಪಚ್ಚುರಂಜನ್ ಬಂಧನಕ್ಕೆ ಮುಂದಾದರೆ, ವಿಧಾನಪರಿಷತ್ ಸದಸ್ಯರ ಸಹಿತ ಬಿಜೆಪಿ ಪ್ರತಿನಿಧಿಗಳು ಕಪ್ಪುಪಟ್ಟಿ ಪ್ರದರ್ಶಿಸುತ್ತಾ ಟಿಪ್ಪು ವಿರೋಧಿ ಘೋಷಣೆ ಮೊಳಗಿಸಿದರು. ಕಾಂಗ್ರೆಸ್ಸಿಗರಿಂದ ಪ್ರತಿರೋಧದೊಂದಿಗೆ ಇಡೀ ಸಭಾಂಗಣ ಗೊಂದಲದ ಗೂಡಾಯಿತು.

ಸ್ವತಃ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಡಿವೈಎಸ್ಪಿ ಕೆ.ಎಸ್. ಸುಂದರರಾಜ್ ಸಹಿತ ಭದ್ರತಾ ಸಿಬ್ಬಂದಿ ಬಿಜೆಪಿ ಪ್ರತಿನಿಧಿಗಳನ್ನು ಸಭಾಂಗಣದಿಂದ ಬಂದಿಸಿ ಕರೆದೊಯ್ಯುವಲ್ಲಿ ಹರಸಾಹಸ ಪಡುವಂತಾಯಿತು. ಜಿ.ಪಂ. ಸದಸ್ಯ ಮುರುಳಿ ಕರುಂಬಮ್ಮಯ್ಯ, ನಗರಸಭಾ ಸದಸ್ಯರಾದ ಉಣ್ಣಿಕೃಷ್ಣ, ಕೆ.ಎಸ್. ರಮೇಶ್, ಅನಿತಾ ಪೂವಯ್ಯ, ತಾ.ಪಂ. ಸದಸ್ಯ ಉಮಾಪ್ರಭು ಸಹಿತ ಎಲ್ಲರು ಬಂದನಕ್ಕೊಳಗಾದರು.

ಕಾಂಗ್ರೆಸ್ ಸರದಿ : ನಂತರ ಸಭಾಂಗಣದಲ್ಲಿದ್ದ ಕಾಂಗ್ರೆಸಿಗರು ಎಲ್ಲರೂ ಒಕ್ಕೊರಲಿನೊಂದಿಗೆ ಬಿಜೆಪಿ ಪಕ್ಷದವರಿಗೆ ದಿಕ್ಕಾರ ಘೋಷಣೆಗಳನ್ನು ಕೂಗಿದರು.ಬಳಿಕ ನಿರೂಪಕರು ಮತ್ತೆ ನಾಡಗೀತೆಗೆ ಅವಕಾಶದೊಂದಿಗೆ ಕಾರ್ಯಕ್ರಮ ಮುಂದುವರಿಸಿದಾಗ ಜಿ.ಪಂ. ಸದಸ್ಯೆ ಕಾಂಗ್ರೆಸ್ಸಿನ ಕುಮದ ಧರ್ಮಪ್ಪ ಎದ್ದು ನಿಂತು ನೇರವಾಗಿ ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಕೇಳುತ್ತಾ, ಇಂದಿನ ಕಾರ್ಯಕ್ರಮಕ್ಕೆ ಆಹ್ವಾನಿತರ ಸಹಿತ ಯಾರ್ಯಾರಿಗೆ ಆಮಂತ್ರಣ ನೀಡಿದ್ದೀರಿ, ತಮ್ಮಗಳಿಗೆ ಈ ಕ್ಷಣಕ್ಕೂ ಆಹ್ವಾನ ಪತ್ರ ತಲುಪದಿರಲು ಕಾರಣ ನೀಡಿ ಎಂದು ಪಟ್ಟು ಹಿಡಿದರು. ಕುಮುದ ಬೆಂಬಲಕ್ಕೆ ನಿಂತ ಇನ್ನೋರ್ವ ಸದಸ್ಯ ಪಿ.ಎಂ. ಲತೀಫ್ ಏರುಧನಿಯಲ್ಲಿ ಜಿಲ್ಲಾಡಳಿತ ನಾವೆಲ್ಲ ಕಾರ್ಯಕ್ರಮಕ್ಕೆ ಬರಬಾರದೆಂದು ಆಹ್ವಾನ ನೀಡಲಿಲ್ಲವೆ? ಎಷ್ಟು ಆಮಂತ್ರಣ ಮಾಡಿಸಿದ್ದೀರಿ ಯಾರನ್ನು ಆಹ್ವಾನಿಸಿದ್ದೀರಾ... ವಿವರ ಕೊಟ್ಟು ಕಾರ್ಯಕ್ರಮ ಮುಂದುವರಿಸಿ ಎಂದು ಅಸಮಾಧಾನ ಹೊರೆಗೆಡವಿದರೆ ಕಸಿವಿಸಿಗೊಂಡ ಕಾಂಗ್ರೆಸ್ಸಿಗರು ಅವರನ್ನು ಸುಮ್ಮನಿರುವಂತೆ ಮನವೊಲಿಸಿದರು.

ಈ ನಡುವೆ ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಆಹ್ವಾನಿತ ಗಣ್ಯರೊಂದಿಗೆ ಸಸಿಗೆ ನೀರೆರೆದು ಟಿಪ್ಪು ಭಾವಚಿತ್ರಕ್ಕೆ ಪುಷ್ಪಾಂಜಲಿ ಸಹಿತ ಕಾರ್ಯಕ್ರಮ ಉದ್ಘಾಟಿಸಿದರು. ಅವರು ಮಾತನಾಡುತ್ತಾ, ಟಿಪ್ಪುವಿನ ಬಗ್ಗೆ ಈಚೆಗೆ ವಿಧಾನಮಂಡಲದಲ್ಲಿ ರಾಷ್ಟ್ರಪತಿಗಳು ಪ್ರಶಂಸೆಯ ನುಡಿಯಾಡಿದ್ದನ್ನು ಉಲ್ಲೇಖಿಸಿತ್ತಾ, ಕರುನಾಡಿಗೆ ಟಿಪ್ಪುವಿನ ಕೊಡುಗೆ ಅಪಾರವೆಂದು ಕೊಂಡಾಡಿದರು.

ಮೈಸೂರಿನ ಬರಹಗಾರ ಬಿ.ಆರ್. ರಂಗಸ್ವಾಮಿ ಉಪನ್ಯಾಸ ನೀಡುತ್ತಾ, ಟಿಪ್ಪು ಜಾತ್ಯತೀತ, ಧರ್ಮಾತೀತ ರಾಜನಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಉತ್ತಮ ಕಾರ್ಯ ನಿರ್ವಹಿಸಿ ದೇಶಕ್ಕಾಗಿ ಬಲಿದಾನಗೈದ ಅಪ್ರತಿಮ ಹೋರಾಟಗಾರ ಎಂದು ಬಣ್ಣಿಸಿದರು. ಮೇಲ್ಕೋಟೆ, ನಂಜನಗೂಡು, ಶೃಂಗೇರಿ ದೇಗುಲಗಳಿಗೆ ಕೊಡುಗೆಯೊಂದಿಗೆ ರೇಷ್ಮೆ ಉದ್ದಿಮೆ, ಕೆ.ಆರ್.ಎಸ್. ನಿರ್ಮಾಣಕ್ಕೆ ಕಾರಣೀಭೂತ ಎಂದು ಪ್ರಶಂಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹೊರತರಲಾಗಿರುವ ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕಿರು ಹೊತ್ತಿಗೆಯನ್ನು ಅರಣ್ಯ ನಿಗಮ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ವಿಧಾನಪರಿಷತ್ ಸದಸ್ಯ ವೀಣಾ ಅಚ್ಚಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಎಡಿಜಿಪಿ ಭಾಸ್ಕರ್ ರಾವ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ವಕ್ಫ್ ಮಂಡಳಿ ಜಿಲ್ಲಾಧ್ಯಕ್ಷ ಅಬ್ದುಲ್‍ರೆಹಮಾನ್ ಆಸೀನರಾಗಿದ್ದರು.

ಮಾಜಿ ವಿಧಾನಪರಿಷತ್ ಸದಸ್ಯ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ , ಕೊಲ್ಯದ ಗಿರೀಶ್, ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ, ವಕ್ತಾರ ಟಾಟು ಮೊಣ್ಣಪ್ಪ, ಧರ್ಮಜ ಉತ್ತಪ್ಪ ಸೇರಿದಂತೆ ಪಕ್ಷದ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು, ವಿವಿಧ ಘಟಕದ ಪದಾಧಿಕಾರಿಗಳು, ಇಲಾಖೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರಭಾರ ಅಧಿಕಾರಿ ಚಿನ್ನಸ್ವಾಮಿ, ಮಣಜೂರು ಮಂಜುನಾಥ್ ಸಹಿತ ಇಲಾಖೆಯ ಇತರ ಅಧಿಕಾರಿಗಳು ಉಪಸ್ಥಿತರಿದ್ದು, ಹಿಂದುಳಿದ ಇಲಾಖೆ ಅಧಿಕಾರಿ ಕೆ.ವಿ. ಸುರೇಶ್ ನಿರೂಪಿಸಿ, ವಂದಿಸಿದರು.