ಕೂಡಿಗೆ, ನ. 11: ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಈಗಾಗಲೇ ಕಡಿಮೆ ಮಟ್ಟದಲ್ಲಿ ಭತ್ತದ ನಾಟಿ ಮಾಡಲಾಗಿದ್ದರೂ, ಇದೀಗ ಭತ್ತದ ಬೆಳೆಯು ಗರ್ಭ ಧರಿಸಿ ಕಾಳು ಕಟ್ಟುತ್ತಿದೆ. ಇತ್ತೀಚಿನ ದಿನಗಳಲ್ಲಿ ಅಕಾಲಿಕ ಮಳೆ ಬರುತ್ತಿದ್ದು, ಮಳೆಯಿಂದಾಗಿ ಕಾಳು ಕಟ್ಟುವ ಬದಲು ಕರಿಕಟ್ಟಿ ಬರುತ್ತಿದೆ. ಭತ್ತದ ಕೊಳವೆಗೆ ಮಳೆಯ ನೀರು ಸೇರುವಿಕೆಯ ಮೂಲಕ ಭತ್ತದ ಬದಲು ಜಳ್ಳು ಹೆಚ್ಚಾಗುತ್ತಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶಕ್ಕೊಳಪಡುವ ಹೆಬ್ಬಾಲೆ, ತೊರೆನೂರು, ಶಿರಂಗಾಲ ವ್ಯಾಪ್ತಿಗಳಲ್ಲಿ ಹೆಚ್ಚು ಭತ್ತವನ್ನು ಬೆಳೆಯುತ್ತಿದ್ದರೂ ಅಕಾಲಿಕ ಮಳೆಯಿಂದಾಗಿ ರೈತರು ಭಾರೀ ತೊಂದರೆ ಅನುಭವಿಸುವಂತಾಗಿದೆ.

ಜೂನ್-ಜುಲೈಯಲ್ಲಿ ಸಮರ್ಪಕ ಮಳೆ ಬೀಳದೆ ಅರೆ ನೀರಾವರಿಯಲ್ಲಿ ಭತ್ತವನ್ನು ಬೆಳೆಯಲಾಗಿದ್ದರೂ, ಇದೀಗ ಈ ಮಳೆಯಿಂದಾಗಿ ಭತ್ತ ಜಳ್ಳು ಬೀಳುತ್ತಿವೆ. ಇದರಿಂದ ರೈತರು ಸಹಕಾರ ಸಂಘಗಳಿಂದ ಭತ್ತಕ್ಕಾಗಿ ಮಾಡಿದ ಸಾಲವನ್ನು ಮರುಪಾವತಿ ಮಾಡುವದು ಹೇಗೆ ಎಂಬ ಸಂಕಷ್ಟದಲ್ಲಿದ್ದಾರೆ.

ಆದಷ್ಟು ಬೇಗ ಜಿಲ್ಲೆಯ ರೈತರಿಗೆ ಅನುಕೂವಾಗುವಂತೆ ಭತ್ತ ಖರೀದಿ ಕೇಂದ್ರವನ್ನು ಸರ್ಕಾರ ತೆರೆದು ರೈತರಿಗೆ ಸಹಕಾರಿಯಾಗಬೇಕೆಂದು ತೊರೆನೂರು ಸಹಕಾರ ಸಂಘದ ನಿರ್ದೇಶಕ ಕೃಷ್ಣೇಗೌಡ, ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನಿರ್ದೇಶಕ ಚಂದ್ರಪ್ಪ, ಶಿರಂಗಾಲ ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಪ್ರಗತಿಪರ ರೈತರಾದ ಶ್ರೀನಿವಾಸ್, ತಮ್ಮಣ್ಣ, ಮಂಜುನಾಥ್, ವಿಶ್ವನಾಥ್ ಆಗ್ರಹಿಸಿದ್ದಾರೆ.

- ಕೆ.ಕೆ. ನಾಗರಾಜಶೆಟ್ಟಿ.