ಮಡಿಕೇರಿ, ನ. 11: ನಿನ್ನೆ ಮಡಿಕೇರಿಯಿಂದ ಕಾಲೂರು ಗ್ರಾಮಕ್ಕೆ ತೆರಳುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸೊಂದಕ್ಕೆ (ಕೆಎ 09 ಎಫ್ 5205) ಗಾಳಿಬೀಡು ತಿರುವಿನಲ್ಲಿ ಕಲ್ಲು ಹೊಡೆದಿದ್ದ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿರುವದಾಗಿ ತಿಳಿದು ಬಂದಿದೆ.

ಇಲ್ಲಿನ ವಿದ್ಯಾನಗರ ನಿವಾಸಿಗಳಾದ ಅಕ್ಷಯ, ಸುಧೀಂದ್ರ, ನವೀನ್, ಉಮೇಶ್ ಎಂಬವರು ದ್ವಿಚಕ್ರ ವಾಹನಗಳಲ್ಲಿ ತೆರಳಿ ಈ ಕೃತ್ಯ ಎಸಗಿದ್ದು ದೃಢಪಟ್ಟ ಮೇರೆಗೆ ಬಂಧಿಸಿ, ಎರಡು ಬೈಕ್‍ಗಳ ಸಹಿತ ಹೆಲ್ಮೆಟ್ ಹಾಗೂ ‘ಮಂಕಿ ಕ್ಯಾಪ್’ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಹಾಗೂ ಉಪ ಅಧೀಕ್ಷಕ ಸುಂದರರಾಜ್ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಪ್ರದೀಪ್, ಸಬ್‍ಇನ್ಸ್‍ಪೆಕ್ಟರ್‍ಗಳಾದ ಚೇತನ್ ಹಾಗೂ ಶಿವರಾಮೇಗೌಡ, ದಿನೇಶ್, ತೀರ್ಥಕುಮಾರ್, ಕಾಳಿಯಪ್ಪ ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರೆಂದು ಗೊತ್ತಾಗಿದೆ.

ನಗರ ಠಾಣೆಯಲ್ಲಿ ಪ್ರಕರಣ

ಇನ್ನೊಂದೆಡೆ ಪ್ರತಿಭಟನಾ ನಿರತರ ಬಂಧನ ಸಂದರ್ಭ ಕೆಲವರು ರಾಜ್ಯ ಸಾರಿಗೆ ಬಸ್ ಹಾಗೂ ಪೊಲೀಸ್ ವಾಹನ ಸೀಟ್‍ಗಳನ್ನು ಹರಿದು ಹಾಕಿದ್ದ ಬಗ್ಗೆ ನಗರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.