*ಗೋಣಿಕೊಪ್ಪಲು, ನ. 11: ಬಿದ್ದಾಟಂಡ ಹಾಕಿ ಉತ್ಸವಕ್ಕೆ ರೂ. 40 ಲಕ್ಷ ಅನುದಾನ ನೀಡುವ ಭರವಸೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮಾತಿಗೆ ತಪ್ಪಿ ಕೇವಲ ರೂ. 5 ಲಕ್ಷ ಬಿಡುಗಡೆ ಮಾಡುವ ಮೂಲಕ ಕೊಡಗಿನ ಜನರನ್ನು ಕಡೆಗಣಿಸಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಸರಕಾರದ ವಿರುದ್ದ ಕಿಡಿಕಾರಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 2016-17ರ ಮೇ ತಿಂಗಳಲ್ಲಿ ನಾಪೋಕ್ಲುವಿನಲ್ಲಿ ಬಿದ್ದಾಟಂಡ ಹಾಕಿ ಉತ್ಸವಕ್ಕೆ ವರ್ಷಂಪ್ರತಿ ನೀಡುವಂತೆ ರೂ. 40 ಲಕ್ಷ ಅನುದಾನ ನೀಡುತ್ತೇವೆ ಎಂದು ಉಸ್ತುವಾರಿ ಸಚಿವರು ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ಅನುದಾನ ಬಿಡುಗಡೆ ಪತ್ರಕ್ಕೆ ಸಹಿ ಹಾಕಿ 40 ಲಕ್ಷ ನೀಡುವಂತೆ ಆದೇಶ ಹೊರಡಿಸಿದರೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೇವಲ ರೂ. 5 ಲಕ್ಷ ಅನುದಾನವನ್ನು ನೀಡುವ ಮೂಲಕ ಕೊಡಗಿನ ಕ್ರೀಡಾಪ್ರೇಮಿಗಳು ತಲೆ ತಗ್ಗಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2008ರಲ್ಲಿ ಬಿ.ಜೆ.ಪಿ. ಸರಕಾರ ಆಡಳಿತದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆದ ಸಂದರ್ಭ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ವಿಶೇಷ ಅನುದಾನ ನೀಡುವ ಮೂಲಕ ಕೊಡಗಿನ ಹಾಕಿ ಕ್ರೀಡೆಗೆ ಹೊಸ ಉತ್ಸಾಹ ಮತ್ತು ಭರವಸೆಯನ್ನು ತುಂಬಿದರು. ತದ ನಂತರವು ಸರಕಾರ ಹಾಕಿ ನಮ್ಮೆಗೆ
(ಮೊದಲ ಪುಟದಿಂದ) ಅನುದಾನವನ್ನು ಬಿಡುಗಡೆ ಮಾಡಿದೆ. 2015-16ನೇ ಸಾಲಿನಲ್ಲಿ ನಡೆದ ಶಾಂತೇಯಂಡ ಹಾಕಿ ಕಪ್ಗೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ರೂ. 30 ಲಕ್ಷ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು. ಆದರೆ ಕೇವಲ ರೂ. 20 ಲಕ್ಷವಷ್ಟೇ ಮಂಜೂರು ಮಾಡಲಾಯಿತು ಎಂದು ನೆನಪಿಸಿದರು.
ನಂತರ ನಡೆದ ಬಿದ್ದಾಟಂಡ ಹಾಕಿ ನಮ್ಮೆಗೆ ಉಸ್ತುವಾರಿ ಸಚಿವರು ಅಂದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದಿವಂಗತ ಬಿ.ಟಿ. ಪ್ರದೀಪ್ ಅವರ ಸ್ಮರಣೆಗಾಗಿ ರೂ. 10 ಲಕ್ಷ ಹೆಚ್ಚುವರಿಯಾಗಿ ಬಿಡುಗಡೆ ಮಾಡುವದಾಗಿ ಹುಮ್ಮಸ್ಸಿನಿಂದ ಭರವಸೆ ನೀಡಿದರು. ಆದರೆ ಕೇವಲ ರೂ. 5 ಲಕ್ಷವಷ್ಟೆ ಹಾಕಿ ಉತ್ಸವಕ್ಕೆ ಅನುದಾನ ನೀಡಿರುವದು ಕೊಡಗಿನ ಜನತೆಯನ್ನು ಕಡೆಗಣಿಸಿದಂತೆ ಎಂದು ಹೇಳಿದರು.
ಕ್ರೀಡಾ ಕ್ಷೇತ್ರ ತವರೂರಾದ ಕೊಡಗಿಗೆ ಕಾಂಗ್ರೆಸ್ ಸರ್ಕಾರ ಈ ರೀತಿಯ ಧೋರಣೆ ತೋರುತ್ತಿರುವದು ಏಕೆ ಎಂದು ಪ್ರಶ್ನಿಸಿದ ಅವರು, ಹಾಕಿ ನಮ್ಮೆಗೆ ಭರವಸೆ ನೀಡಿದಂತೆ ಮಾತಿಗೆ ತಪ್ಪದೆ ರೂ. 40 ಲಕ್ಷವನ್ನು ಬಿಡುಗಡೆ ಮಾಡಲೇಬೇಕು ಎಂದು ಒತ್ತಾಯಿಸಿದ ಅವರು, ಈ ವಿಚಾರವನ್ನು ಬೆಳಗಾಂನಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಪ್ರಸ್ತಾಪಿಸುವದಾಗಿ ತಿಳಿಸಿದರು.
ಗೋಷ್ಟಿಯಲ್ಲಿ ಬಿ.ಜೆ.ಪಿ. ವರ್ತಕ ಪ್ರಕೋಷ್ಠ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ ಉಪಸ್ಥಿತರಿದ್ದರು.