ಮೂರ್ನಾಡು, ನ. 11: ಮಂದಪ್ಪ ರೂರಲ್ ಫ್ರೆಂಡ್ಸ್ (ಎಂಆರ್ಎಫ್) ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ ವತಿಯಿಂದ ಹಾಕಿ ಕೂರ್ಗ್ ಸಹಯೋಗದಲ್ಲಿ ಆಯೋಜಿಸಲಾದ ಬಾಚೆಟ್ಟಿರ ಮಂದಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಹಾಕಿ ಪಂದ್ಯಾವಳಿಗೆ ಇಂದು ಚಾಲನೆ ನೀಡಲಾಯಿತು.ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ನಡೆಯಲಿರುವ ಹಾಕಿ ಪಂದ್ಯಾವಳಿಯನ್ನು ನಿವೃತ್ತ ಮುಖ್ಯ ಶಿಕ್ಷಕಿ, ದಾನಿ ಬಾಚೆಟ್ಟಿರ ಕಮಲು ಮುದ್ದಯ್ಯ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕ್ರೀಡೆಗೆ ಮಹತ್ವ ನೀಡುವಲ್ಲಿ ಜಿಲ್ಲೆಯ ಪಾತ್ರ ಹಿರಿದಾದುದು. ಕ್ರೀಡೆಯಿಂದ ಮಾನಸಿಕ ದೈಹಿಕ ಬೆಳವಣಿಗೆ ಸಾಧ್ಯ ಎಂದರು. ಕ್ಲಬ್ ಕಟ್ಟಡ ದಾನಿ ಬಾಚೆಟ್ಟಿರ ಲಾಲು ಮುದ್ದಯ್ಯ ಹಾಕಿ ಸ್ಟಿಕ್ ಹಿಡಿದು ಬಾಲ್ ಹೊಡೆಯುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಮೂರ್ನಾಡು ವಿದ್ಯಾಸಂಸ್ಥೆ ಕಾರ್ಯದರ್ಶಿ ಚೌರೀರ ಎಂ. ಪೆಮ್ಮಯ್ಯ ಮುಖ್ಯ ಅತಿಥಿಗಳಾಗಿ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡೆಗೆ ಪ್ರೋತ್ಸಾಹ ಇದೆ. ಇಂತಹ ಕ್ರೀಡಾಕೂಟ ಈ ಮೈದಾನದಲ್ಲಿ ಜರುಗುವಲ್ಲಿ ಕ್ಲಬ್ನ ಸದಸ್ಯರ ಶ್ರಮ ಅಪರಿಮಿತ ಎಂದು ತಿಳಿಸಿದರು.
ಮಂದಪ್ಪ ರೂರಲ್ ಫ್ರೆಂಡ್ಸ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಶನ್ ಕ್ಲಬ್ನ ಅಧ್ಯಕ್ಷ ಬಡುವಂಡ ಎ. ವಿಜಯ ಅಧ್ಯಕ್ಷತೆ ವಹಿಸಿದ್ದರು. ಹೊದ್ದೂರು ಕಾಫಿ ಬೆಳೆಗಾರ ಚೌರೀರ ಎಸ್. ಶ್ಯಾಮ್, ಬಾಡಗ ಕಾಫಿ ಬೆಳೆಗಾರ ಕೋಟೆರ ಎಂ. ತಿಮ್ಮಯ್ಯ, ಮೂರ್ನಾಡು ಕಾಫಿ ಬೆಳೆಗಾರ ಪಾಲಂದಿರ ಪಿ. ಕುಶಾಲಪ್ಪ, ಎಂಆರ್ಎಫ್ ಕ್ಲಬ್ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಖಜಾಂಚಿ
(ಮೊದಲ ಪುಟದಿಂದ) ಕೋಟೆರ ಪ್ರತಾಪ್ ಕಾರ್ಯಪ್ಪ, ಸದಸ್ಯರು ಹಾಜರಿದ್ದರು.
ಮೂರ್ನಾಡು ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಬಿ.ಎನ್. ಮಮತ ಪ್ರಾರ್ಥಿಸಿ, ಕ್ಲಬ್ ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ ಸ್ವಾಗತಿಸಿ, ಮಾಳೇಟಿರ ಶ್ರೀನಿವಾಸ್ ಕಾರ್ಯಕ್ರಮ ನಿರೂಪಿಸಿದರು.
ಪಂದ್ಯಾವಳಿಯ ಮೊದಲ ದಿನದ ಪಂದ್ಯದಲ್ಲಿ ಮಡಿಕೇರಿ ಚಾರ್ಮರ್ಸ್, ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್, ಬಿಬಿಸಿ ಗೋಣಿಕೊಪ್ಪಲು, ಸೋಮವಾರಪೇಟೆ ಡಾಲ್ಫಿನ್ಸ್, ಯುಎಫ್ಸಿ ಬೇರಳಿನಾಡು, ಹಾಗೂ ಕೋಣನಕಟ್ಟೆ ಇಲೆವೆನ್ ತಂಡಗಳು ಮುನ್ನಡೆ ಸಾಧಿಸಿವೆ.
ಮಡಿಕೇರಿ ಚಾರ್ಮರ್ಸ್ ತಂಡ ಹಾಗೂ ಬ್ಲೂಸ್ಟಾರ್ ಪೊದ್ದ್ಮಾನಿ ತಂಡದ ನಡುವೆ ನಡೆದ ಪಂದ್ಯದಲ್ಲಿ ಮಡಿಕೇರಿ ಚಾರ್ಮರ್ಸ್ ತಂಡ 2-1 ಗೋಲುಗಳ ಅಂತರದಲ್ಲಿ ಜಯಸಾಧಿಸಿತು. ಮಡಿಕೇರಿ ಚಾರ್ಮರ್ಸ್ ತಂಡದ ಆಟಗಾರ ವಿಘ್ನೇಶ್ ಹಾಗೂ ಜೀವ ತಲಾ 1 ಗೋಲು ಹೊಡೆದರು. ಬ್ಲೂಸ್ಟಾರ್ ಪರ ಮೊಣ್ಣಪ್ಪ 1 ಗೋಲು ಬಾರಿಸಿದರು.
ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ಮತ್ತು ಬಲಮುರಿ ಮಹದೇವ ಯೂತ್ ಕ್ಲಬ್ ನಡುವಿನ ಪಂದ್ಯದಲ್ಲಿ 4-1 ಗೋಲುಗಳಿಂದ ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್ ತಂಡ ಜಯಗಳಿಸಿತು. ಸ್ಪೋಟ್ರ್ಸ್ ಹಾಸ್ಟೆಲ್ ತಂಡದ ವಸಂತ್, ಯಶ್ವಂತ್, ಸಂತೋಷ್, ರಕ್ಷಿತ್ ತಲಾ 1 ಗೋಲು ಬಾರಿಸಿದರು. ಬಲಮುರಿ ಮಹದೇವ ಯೂತ್ ಕ್ಲಬ್ ತಂಡದ ಪರ ಸೋಮಣ್ಣ 1 ಗೋಲು ಬಾರಿಸಿದರು.
ಬಿಬಿಸಿ ಗೋಣಿಕೊಪ್ಪಲು ಹಾಗೂ ಟವರ್ಸ್ ಇಲೆವೆನ್ ವೀರಾಜಪೇಟೆ ತಂಡದ ನಡುವಿನ ಪಂದ್ಯದಲ್ಲಿ ಬಿಬಿಸಿ ಗೋಣಿಕೊಪ್ಪಲು ತಂಡ 2-1 ಗೋಲಿನಿಂದ ಗೆಲುವು ಸಾಧಿಸಿತು. ಬಿಬಿಸಿ ಗೋಣಿಕೊಪ್ಪಲು ತಂಡದ ವಿಘ್ನೇಶ್ ಹಾಗೂ ಸಂದೇಶ್ ತಲಾ 1 ಗೋಲು ಬಾರಿಸಿದರು. ಟವರ್ಸ್ ಇಲೆವೆನ್ ತಂಡದ ಪರ ಪದ್ಮನಾಭನ್ 1 ಗೋಲು ಹೊಡೆದರು. ಎಂಆರ್ಎಫ್ ಮೂರ್ನಾಡು ತಂಡದ ವಿರುದ್ಧ ಸೋಮವಾರಪೇಟೆ ಡಾಲ್ಫಿನ್ಸ್ ತಂಡ 2-1 ಗೋಲಿನಿಂದ ಜಯಸಾಧಿಸಿತು. ಎಂಆರ್ಎಫ್ ತಂಡದ ಆಟಗಾರ ಶ್ರೀಕಾಂತ್ಗೌಡ 1 ಗೋಲು ಹೊಡೆದರು. ಡಾಲ್ಫಿನ್ಸ್ ತಂಡದ ಆಟಗಾರ ಕಾಳೀಮುತ್ತು ಹಾಗೂ ಲಿಖಿತ್ ತಲಾ 1 ಗೋಲು ಬಾರಿಸಿ ಜಯ ಸಾಧಿಸಿದರು.
ಯುಎಫ್ಸಿ ಬೇರಳಿನಾಡು ಮತ್ತು ಎಸ್ಆರ್ಸಿ ಕಾಕೋಟುಪರಂಬು ತಂಡದ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಯುಎಫ್ಸಿ ಬೇರಳಿನಾಡು ತಂಡ ವಿಜಯ ಸಾಧಿಸಿತು. ಯುಎಫ್ಸಿ ಬೇರಳಿನಾಡು ತಂಡದ ಆಟಗಾರ ಬೋಪಣ್ಣ 1 ಗೋಲು ಹಾಗೂ ರಮೇಶ್ ತಲಾ 2 ಗೋಲು ಹೊಡೆದರು. ಎಸ್ಆರ್ಸಿ ಕಾಕೋಟುಪರಂಬು ತಂಡದ ಪರ ಚೇತನ್ 1 ಗೋಲು ಬಾರಿಸಿದರು.
ಈಗಲ್ಸ್ ಅಮ್ಮತ್ತಿ ಹಾಗೂ ಕೋಣನಕಟ್ಟೆ ಇಲೆವೆನ್ ತಂಡದ ನಡುವಿನ ಪಂದ್ಯದಲ್ಲಿ ಕೋಣನಕಟ್ಟೆ ಇಲೆವೆನ್ ತಂಡ 3-2 ಗೋಲುಗಳಿಂದ ಗೆಲುವು ಸಾಧಿಸಿತು. ಈಗಲ್ಸ್ ಅಮ್ಮತ್ತಿ ತಂಡದ ಪರ ಪೂವಣ್ಣ ಹಾಗೂ ರೋಹನ್ ತಲಾ 1 ಗೋಲು ಬಾರಿಸಿದರು. ಕೋಣನಕಟ್ಟೆ ಇಲೆವೆನ್ ತಂಡದ ಆಟಗಾರ ಅಚ್ಚಪ್ಪ, ಬೋಪಣ್ಣ, ಅಯ್ಯಪ್ಪ ತಲಾ 1 ಗೋಲು ಹೊಡೆದು ಗೆಲುವು ಸಾಧಿಸಿದರು.